ADVERTISEMENT

ಚಿಕ್ಕಬಳ್ಳಾಪುರ: ಮೊಯಿಲಿ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸಿಗರು!

ಶಾಸಕ ಡಾ.ಕೆ.ಸುಧಾಕರ್ ಬೆಂಬಲಿಗರಿಂದಲೇ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ ಮತ, ಸಾಮಾಜಿಕ ಜಾಲತಾಣಗಳಲ್ಲಿ ಮೊಯಿಲಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಮೇ 2019, 16:43 IST
Last Updated 2 ಮೇ 2019, 16:43 IST
ಬಿ.ಎನ್.ಬಚ್ಚೇಗೌಡ ಹಾಗೂ ವೀರಪ್ಪ ಮೊಯಿಲಿ
ಬಿ.ಎನ್.ಬಚ್ಚೇಗೌಡ ಹಾಗೂ ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಅವರ ವಿರುದ್ಧ ಸ್ವಪಕ್ಷೀಯರೇ ತಿರುಗಿ ಬಿದ್ದು, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ ಮತ ಚಲಾಯಿಸಿದ ಘಟನೆ ತಾಲ್ಲೂಕಿನ ಮಂಚನಬಲೆಯಲ್ಲಿ ನಡೆದಿದೆ.

ಶಾಸಕ ಡಾ.ಕೆ.ಸುಧಾಕರ್ ಮತ್ತು ಅವರ ತಂದೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರಿಗೆ ಮೊಯಿಲಿ ಅವರು ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಸುಧಾಕರ್ ಅವರ ಬೆಂಬಲಿಗ, ಕಾಂಗ್ರೆಸ್‌ ಮುಖಂಡ ಎಸ್.ಎಂ.ಕೆ.ಮುನಿಕೃಷ್ಣ ಎಂಬುವರ ನೇತೃತ್ವದಲ್ಲಿ ಸುಮಾರು 1,000ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಮೊಯಿಲಿ ಅವರ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೊಯಿಲಿ ಅವರಿಗೆ ಈ ಬಾರಿ ಮತ ಹಾಕದಂತೆ ಎಸ್.ಎಂ.ಕೆ.ಮುನಿಕೃಷ್ಣ ಅವರು ‘ಎಂಎಲ್ಎ ವರ್ಕ್ಸ್‌ & ಅಚೀವ್‌ಮೆಂಟ್ಸ್‌’ ಎಂಬ ವ್ಯಾಟ್ಸಪ್‌ ಗ್ರೂಪ್‌ನಲ್ಲಿ ಹಾಕಿದ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ADVERTISEMENT

ಪೋಸ್ಟ್‌ನಲ್ಲಿ ಏನಿದೆ?
‘ಶಾಸಕ ಡಾ.ಕೆ.ಸುಧಾಕರ್ ಅವರ ಬೆಂಬಲಿಗ, ಅಭಿಮಾನಿಯಾಗಿ ನನ್ನದೊಂದು ವಿನಂತಿ ಹಾಗೂ ಸಂದೇಶ... ನಮ್ಮ ಸುಧಾಕರ್ ಅವರು ಶಾಸಕರಾಗುವುದಕ್ಕೂ ಮುಂಚೆ ಎಸ್‌.ಎಂ.ಕೃಷ್ಣ ಅವರ ಶಿಷ್ಯರಾಗಿ ರಾಜಕೀಯ ಪ್ರವೇಶ ಮಾಡಿದರು. ಇವರು ಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿ ಬಿ.ಫಾರಂ ಕೊಡಿ ಎಂದು ಕೇಳಿದಾಗ ಇದೇ ವೀರಪ್ಪ ಮೊಯಿಲಿ ಅವರು ದೆಹಲಿ ಮಟ್ಟದಲ್ಲಿ ನನ್ನದು ನಡೆಯುತ್ತದೆ ಎಂದು ಸುಧಾಕರ್ ಮೇಧಾವಿ ಎಂದು ಟಿಕೆಟ್‌ ತಪ್ಪಿಸಿ, ನಂದಿ ಆಂಜಿನಪ್ಪ ಅವರನ್ನು ಎತ್ತಿಕಟ್ಟಿ ಅವರಿಗೆ ಟಿಕೆಟ್ ಕೊಡಿಸಲು ಹೋರಾಟ ಮಾಡಿದರು.

ಆದರೆ ಎಸ್‌.ಎಂ.ಕೃಷ್ಣ ಅವರ ಆಶೀರ್ವಾದದಿಂದ ನಮ್ಮ ಶಾಸಕರಿಗೆ ಬಿ.ಫಾರಂ ಬರುತ್ತದೆ. ಆದರೆ ಹಿಂದಿನ ಚುನಾವಣೆಯಲ್ಲಿ ಮೊಯಿಲಿ ಅವರು ಸುಧಾಕರ್ ಪರವಾಗಿ ಪ್ರಚಾರಕ್ಕೆ ಬಂದಿದ್ದು, ಕೇವಲ ಎರಡು ದಿನ ಮಾತ್ರ ಕೊನೆಯ ಕ್ಷಣದಲ್ಲಿ ಸುಧಾಕರ್ ಅವರನ್ನು ಸೋಲಿಸಲು ಮುಂದಾಗುತ್ತಾರೆ. ಆದರೆ ಅದು ಫಲಿಸಲಿಲ್ಲ. ನಂತರದ ದಿನಗಳಲ್ಲಿ ಸುಧಾಕರ್ ಶಾಸಕರಾಗಿದ್ದರು ಸಹ ಆಂಜಿನಪ್ಪ ಅವರನ್ನು ಎತ್ತಿ ಕಟ್ಟಿ ಗಲಾಟೆ ಮಾಡಿಸಿ ಅದೆಷ್ಟೋ ಬಾರಿ ಬೈದು ಅವಮಾನ ಮಾಡಿಸಿದ್ದರು. ಇದಕ್ಕೆ ತಲೆ ಕೆಡಿಸಿಕೊಳ್ಳದೇ ನಮ್ಮ ಶಾಸಕರು ಆಂಜಿನಪ್ಪ ಅವರನ್ನು ಕಾಂಗ್ರೆಸ್‌ನಿಂದ ಹೊರ ಹೋಗುವಂತೆ ಮಾಡಿದರು.

ಮೊದಲ ಬಾರಿಯೇ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿತ್ತು ಆದರೆ ಮೊಯಿಲಿ ಅವರ ಕುತಂತ್ರದಿಂದ ತಪ್ಪಿ ಹೊಯಿತು. ನಂತರ ಕೇಶವರೆಡ್ಡಿ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಲು ಹೊರಟ ಸಂದರ್ಭದಲ್ಲಿ ಒಳಗೊಳಗೆ ಶಿವಶಂಕರರೆಡ್ಡಿ ಅವರನ್ನು ಮಂತ್ರಿ ಮಾಡಲು ಕೇಶವರೆಡ್ಡಿ ಅವರಿಗೆ ಬೆಂಬಲ ನೀಡಿದರು. ಆದರೆ ಇವರ ಮಾಯಾಂಗನೆ ಆಟ ಕೆಲವೇ ದಿನಗಳಲ್ಲಿ ಆಚೆಗೆ ಬಂದಿತು ನೋಡಿ..!

ಯಾವಾಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮ್ಮ ಶಾಸಕರ ಬಲ ದಿನೇ ದಿನೇ ಹೆಚ್ಚಾಗುತ್ತಲೇ ಹೋಯಿತೋ ಮೊಯಿಲಿ ಅವರ ಕಣ್ಣು ಕೆಂಪಾಗುತ್ತಾ ಹೋಯಿತು. ಆಗಲೇ ಗೌರಿಬಿದನೂರು ಶಾಸಕರಾದ ಶಿವಶಂಕರರೆಡ್ಡಿ ಅವರನ್ನು ಎತ್ತಿ ಕೇಶವರೆಡ್ಡಿ ಅವರ ಅಧಿಕಾರ ಸಹಿಸಿಕೊಳ್ಳದೆ ಅಧಿಕಾರದಿಂದ ಇಳಿಸಲು ಕುತಂತ್ರ ಮಾಡಲು ಹೊರಟರು. ಹೈಕಮಾಂಡ್‌ಗೆ ಇಲ್ಲಸಲ್ಲದ ನೆಪ ಹೇಳಿ ಕೇಶವರೆಡ್ಡಿ ಅವರಿಗೆ ಅಧ್ಯಕ್ಷ ಸ್ಥಾನದಿಂದ ಹಿರಿಯರೆನ್ನದೇ ಕೆಳಗಿಳಿಸಿದರು.

ನಂತರ ನಮ್ಮ ಸುಧಾಕರ್ ಎರಡನೇ ಬಾರಿ ಶಾಸಕರಾದ ಮೇಲೆ ಮಂತ್ರಿ ಆಗಲು ಹೊರಟಾಗ ಇದೇ ಶಿವಶಂಕರರೆಡ್ಡಿ ಅವರನ್ನು ಎತ್ತಿಕಟ್ಟಿ ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಮುಂದಾಗುತ್ತಾರೆ. ಇದಕ್ಕೆ ಸೊಪ್ಪು ಹಾಕದೆ ಹೈಕಮಾಂಡ್‌ ಸುಧಾಕರ್ ಅವರಿಗೆ ಮಂತ್ರಿ ಸ್ಥಾನ ನೀಡಲು ಒಪ್ಪುತ್ತದೆ.

ಇನ್ನೇನು ಮಂತ್ರಿಯಾಗಿ ಪ್ರಮಾಣ ವಚನಕ್ಕೆ ರೆಡಿಯಾಗಬೇಕು ಈ ಪುಣ್ಯಾತ್ಮ ವೀರಪ್ಪ ಮೊಯಿಲಿ ಶಿವಶಂಕರರೆಡ್ಡಿ ಅವರನ್ನು ಸಿದ್ದರಾಮಯ್ಯನವರ ಬಳಿ ಕರೆದುಕೊಂಡು ಹೋಗಿ ಸುಧಾಕರ್ ಅವರಿಗೆ ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ನೀಡಬಾರದೆಂದು, ಅದು ಕೊಡುವುದಾದರೆ ಶಿವಶಂಕರರೆಡ್ಡಿ ಅವರಿಗೆ ಕೊಡಿ ಎಂದು ಹೇಳಿ ಬರು ಬರುತಾ ನಮ್ಮ ಶಾಸಕರನ್ನು ಸರ್ಕಾರ ಮತ್ತು ಪಕ್ಷದಲ್ಲಿ ಮೂಲೆಗುಂಪು ಮಾಡಿ ಈಗ ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.

ಆಯ್ತು ನಾವು ಅದಕ್ಕೂ ರೆಡಿ. ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷಕ್ಕೆ ಹೋದರೆ ನಾವು ಅವರ ಜತೆ ಹೋಗಲು ಸಿದ್ಧ. ಆದರೆ ಈ ಬಾರಿ ನಿಮ್ಮನ್ನು ಮುಗಿಸಿಯೇ ಹೋಗುವುದು. ಈಗ ಹೇಳಿ ನಿಷ್ಠಾವಂತ ಸುಧಾಕರ್ ಬೆಂಬಲಿಗರೇ ಮತ್ತು ಅಭಿಮಾನಿಗಳೇ ಮೊಯಿಲಿ ಅವರಿಗೆ ನಾವು ಈ ಬಾರಿ ಮತ ನೀಡಬೇಕೇ ಯೋಚಿಸಿ. ನಮ್ಮ ನಾಯಕರಿಗೆ ಮಾಡಿದ ಮೋಸಕ್ಕೆ ಈ ಬಾರಿ ಮೊಯಿಲಿ ಅವರನ್ನು ಬೆಂಬಲಿಸಬಾರದು’ ಎಂದು ಪೋಸ್ಟ್‌ನಲ್ಲಿ ಮುನಿಕೃಷ್ಣ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರನ್ನು ವಿಚಾರಿಸಿದರೆ, ‘ಕ್ಷೇತ್ರದಲ್ಲಿ ಕೇಶವರೆಡ್ಡಿ ಅವರೇ ಕಾಂಗ್ರೆಸ್‌ ತಳಪಾಯ ಹಾಕಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುತ್ತ ಪಕ್ಷ ಬಲಪಡಿಸಿದ್ದರು. ಆದರೆ ಮೊಯಿಲಿ ಅವರು ಸುಧಾಕರ್ ಮತ್ತು ಕೇಶವರೆಡ್ಡಿ ಅವರಿಗೆ ಅನ್ಯಾಯ ಮಾಡಿ ನಂದಿ ಆಂಜಿನಪ್ಪ, ನವೀನ್ ಕಿರಣ್ ಎಂಬುವರಿಗೆ ಬೆಂಬಲಿಸಿದ್ದು ನಮಗೆ ತೀವ್ರ ನೋವುಂಟು ಮಾಡಿದೆ’ ಎಂದು ಹೇಳಿದರು.

‘ಮೊಯಿಲಿ ಅವರು ಮಾಡಿದ ಅನ್ಯಾಯದಿಂದಾಗಿ ಈ ಬಾರಿ ನಾವು ಅವರಿಗೆ ಮತ ಹಾಕಿಲ್ಲ. ನಾನು ಮತ್ತು ನನ್ನ ಸುಮಾರು ಒಂದು ಸಾವಿರ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರಿಗೆ ಈ ಬಾರಿ ಮತ ಹಾಕಿದ್ದೇವೆ’ ಎಂದು ತಿಳಿಸಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.