ಕೊಪ್ಪಳ: ಲೋಕಸಭೆಯ ಎರಡನೇ ಚುನಾವಣೆಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದರು ಎಂಬ ಕಾರಣಕ್ಕೆ ಸಂಸದರ ಸದಸ್ಯತ್ವ ರದ್ದಾಗಿದ್ದುಕೊಪ್ಪಳ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗಿದೆ.
1952ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ಸ್ವಾತಂತ್ರ್ಯ ಹೋರಾಟಗಾರ, ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಮಂಚೂಣಿ ನಾಯಕ ಶಿವಮೂರ್ತಿಸ್ವಾಮಿ ಅಳವಂಡಿ ಆಯ್ಕೆಯಾಗಿದ್ದರು. ಆಗಿನ ಕಾಂಗ್ರೆಸ್ ಪ್ರಬಲ ಅಲೆಯ ನಡುವೆಯೂ ಆ ಪಕ್ಷದ ಅಭ್ಯರ್ಥಿಮಾಧವರಾವ್ ವಿರುದ್ಧ ವಿಜಯ ಸಾಧಿಸಿದ್ದರು.
‘1957ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದ ಶಿವಮೂರ್ತಿಸ್ವಾಮಿ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸಂಗಣ್ಣ ಅಂದಾನಪ್ಪ ಅಗಡಿ ಕಣದಲ್ಲಿದ್ದರು. ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿತ್ತು. ಆಗಷ್ಟೇ ಪ್ರಜಾತಂತ್ರ ಬಲಗೊಳ್ಳುತ್ತಿದ್ದ ಕಾಲದಲ್ಲಿ ಹಣ ಬಲ ಪ್ರದರ್ಶಿಸಿ ಕಾಂಗ್ರೆಸ್‌ನ ಅಗಡಿ ಅವರು ಗೆಲುವು ಸಾಧಿಸಿದ್ದರು’ ಎಂದುಹಿರಿಯರು ಸ್ಮರಿಸಿಕೊಳ್ಳುತ್ತಾರೆ.
ಇದರಿಂದ ತೀವ್ರ ಬೇಸರಗೊಂಡ ಕ್ಷೇತ್ರದ ಜನ, ಅಗಡಿ ಅವರು ಅಕ್ರಮವಾಗಿ ಗೆಲುವು ಸಾಧಿಸಿದ್ದಾರೆ ಎಂದು ದೂರಿದರು. ಶಿವಮೂರ್ತಿಸ್ವಾಮಿ ಅವರ ಮೇಲೆ ಒತ್ತಡ ತಂದುಅಗಡಿ ವಿರುದ್ಧ ದೂರು ದಾಖಲಿಸುವಲ್ಲಿ ಯಶಸ್ವಿಯಾದರು. ಅಗಡಿ ಬೆಂಬಲಿಗರೇ ಆಗಿದ್ದ ಡಾ.ಮುರ್ತುಜಾ ಬಾದಾಮಿ ಅಕ್ರಮಗಳ ದಾಖಲೆಗಳನ್ನು ಶಿವಮೂರ್ತಿಸ್ವಾಮಿ ಅವರಿಗೆ ನೀಡಿದ್ದರು ಎಂಬುದು ಆಗಿನ ಸುದ್ದಿ.
ನಗರದ ದೊಡ್ಡ ಉದ್ಯಮಿ ಆಗಿದ್ದ ಅಗಡಿ ಅವರು, ಪೆಟ್ರೋಲ್ ಬಂಕ್‌ಗಳಲ್ಲಿ ಕೆಲ ಮತದಾರರ ವಾಹನಗಳಿಗೆಉಚಿತವಾಗಿ ಪೆಟ್ರೋಲ್ ಹಾಕಿಸಿ‘ಕಾಂಗ್ರೆಸ್ ಬೆಂಬಲಿಸಿ’ ಎಂಬ ಮುದ್ರಣ ಇದ್ದ ರಸೀದಿ ನೀಡಿದ್ದರು.ಇದೇ ಆಧಾರದ ಮೇಲೆ ಚುನಾವಣೆಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದಾರೆ ಎಂಬ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿತ್ತು.
ಕಾಂಗ್ರೆಸ್‌ನ ಕಡು ವಿರೋಧಿಯಾಗಿದ್ದ ಧಾರವಾಡದ ಪ್ರಸಿದ್ಧವಕೀಲ, ಲೋಕ ಸೇವಕ ಸಂಘದ ನೇತಾರ ಬಿ.ಎಲ್. ಪಾಟೀಲ ಅವರುಶಿವಮೂರ್ತಿಸ್ವಾಮಿ ಅವರ ಪರ ವಾದ ಮಂಡಿಸಿದರು. ಪರಿಣಾಮ ಅಗಡಿ ಅವರ ಗೆಲುವು ಅಕ್ರಮ ಎಂದು ನ್ಯಾಯಾಲಯ ತೀರ್ಪು ನೀಡಿ, ಅವರ ಸದಸ್ಯತ್ವವನ್ನು ರದ್ದುಗೊಳಿಸಿತು.
‘ಅಗಡಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದರು. ನ್ಯಾಯದಾನ ವಿಳಂಬವಾಯಿತು’ ಎಂದು ಹಿರಿಯರು ಈಗಲೂ ಹೇಳುತ್ತಾರೆ.
1957ರಲ್ಲಿ ಚುನಾಯಿತರಾದ ಅಗಡಿ ಅವರು ಲೋಕಸಭೆ ವಿಸರ್ಜನೆಯವರೆಗೂ ಅಧಿಕಾರ ಅನುಭವಿಸಿದರು. ಕೊನೆಯ ದಿನದಲ್ಲಿ ಅಂದರೆ, 1962ರಲ್ಲಿ ತೀರ್ಪು ಬಂತು. ಅಷ್ಟೊತ್ತಿಗಾಗಲೇ ಮೂರನೇ ಲೋಕಸಭೆಗೆ ಚುನಾವಣೆ ಘೋಷಣೆಯಾಗಿತ್ತು!
ಪ್ರಜಾತಂತ್ರ ಹಬ್ಬದಲ್ಲಿ ಇದೊಂದು ಅಪರೂಪದ ಪ್ರಕರಣ. ಮೂರನೇ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಶಿವಮೂರ್ತಿಸ್ವಾಮಿ ಲೋಕ ಸೇವಕ ಸಂಘದಿಂದ ಸ್ಪರ್ಧಿಸಿದರು. ಅವರ ಮುಂದೆ ಅಗಡಿ ಸೋತು ಸುಣ್ಣವಾದರು.
ಈ ಘಟನೆಯನ್ನು ಇಂದಿಗೂ ನೆನೆಯುವ ಹಿರಿಯರು,‘ಶಿವಮೂರ್ತಿಸ್ವಾಮಿ ಅವರದ್ದುಪ್ರಜಾತಂತ್ರದ ಗೆಲುವು’ ಎಂದು ಬಣ್ಣಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.