ADVERTISEMENT

ಮಂಡ್ಯ: ಜಿ.ಮಾದೇಗೌಡ– ಸಿ.ಎಸ್‌.ಪುಟ್ಟರಾಜು ಚುನಾವಣೆ ಹಣದ ಸಂಭಾಷಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 12:24 IST
Last Updated 7 ಏಪ್ರಿಲ್ 2019, 12:24 IST
ಜಿ.ಮಾದೇಗೌಡ, ಸಿ.ಎಸ್‌.ಪುಟ್ಟರಾಜು
ಜಿ.ಮಾದೇಗೌಡ, ಸಿ.ಎಸ್‌.ಪುಟ್ಟರಾಜು   

ಮಂಡ್ಯ: ಚುನಾವಣೆಯ ಖರ್ಚಿಗಾಗಿ ಹಣ ನೀಡುವಂತೆಕಾಂಗ್ರೆಸ್‌ನ ಹಿರಿಯ ಮುಖಂಡ ಜಿ.ಮಾದೇಗೌಡರು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರಿಗೆ ಕರೆ ಮಾಡಿ ಒತ್ತಾಯಿಸುವ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮದ್ದೂರು ಕ್ಷೇತ್ರದಲ್ಲಿ ಪುತ್ರ ಮಧು ಮೈತ್ರಿ ಅಭ್ಯರ್ಥಿ ನಿಖಿಲ್‌ ಪರ ಕೆಲಸ ಮಾಡುತ್ತಿದ್ದಾರೆ. ಜನರು ಹಣ ಕೇಳುತ್ತಿದ್ದು ಶೀಘ್ರ ವ್ಯವಸ್ಥೆ ಮಾಡಿ ಎಂದು ಸಚಿವರಲ್ಲಿ ಒತ್ತಾಯ ಮಾಡಿದ್ದಾರೆ. ಸಚಿವರು, ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ಉತ್ತರ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾದೇಗೌಡರು ‘ಆ ಸಂಭಾಷಣೆ ನನ್ನದೇ, ಹಣ ಕೊಡದೆ ಯಾರು ಚುನಾವಣೆ ಮಾಡುತ್ತಾರೆ ಹೇಳಿ. ಪ್ರಚಾರಕ್ಕೆ ಬಂದವರಿಗೆ ಹಣ ಕೊಡಿ ಎಂದು ಕೇಳಿದ್ದೇನೆ. ಅದರಲ್ಲಿ ಯಾವ ತಪ್ಪೂ ಕಾಣಿಸುತ್ತಿಲ್ಲ. ನರೇಂದ್ರ ಮೋದಿಯಿಂದ ಹಿಡಿದು ದುಡ್ಡು ಖರ್ಚು ಮಾಡದೇ ಇರುವವರು ಯಾರಾದರೂ ಇದ್ದಾರಾ. ನಾನು ಲಂಚ ಕೇಳಲಿಲ್ಲ. ಪ್ರಚಾರಕ್ಕೆ ಬಂದ ಹುಡುಗರಿಗೆ ಕಾಫಿ, ತಿಂಡಿ ಕೊಡಿಸಬೇಕು. ಅದಕ್ಕೇ ಸಚಿವರಿಂದ ಹಣ ಕೇಳಿದೆ’ ಎಂದು ಹೇಳಿದರು.

ADVERTISEMENT

ಸಂಭಾಷಣೆಯಲ್ಲಿ ಏನಿದೆ?

ಜಿ.ಮಾದೇಗೌಡ: ಚುನಾವಣೆ ಹತ್ತಿರ ಬರುತ್ತಿದೆ. ಜನರು ಕೇಳುತ್ತಿದ್ದಾರೆ, ದುಡ್ಡು ಕೊಡಿ. ನನ್ನ ಮಗನಿಗೆ ಕೆಲಸ ಮಾಡಲು ಹೇಳಿದ್ದೇನೆ.

ಸಿ.ಎಸ್‌.ಪುಟ್ಟರಾಜು: ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಅಪ್ಪಾಜಿ.

ಜಿ.ಮಾದೇಗೌಡ: ಆದಷ್ಟು ಬೇಗ ಆಗಬೇಕು, ಮುಖ್ಯಮಂತ್ರಿಗೆ ಹೇಳಿ.

ಸಿ.ಎಸ್‌.ಪುಟ್ಟರಾಜು: ಈಗಲೇ ಹೇಳುತ್ತೇನೆ.

ಜಿ.ಮಾದೇಗೌಡ: ನಿಮಗೇ ಗೊತ್ತೊಲ್ಲ, ತಮ್ಮಣ್ಣಂದು ಒಂದು ಗುಂಪಿದೆ, ನಮ್ಮದೇ ಒಂದು ಗುಂಪು ಇದೆ.

ಸಿ.ಎಸ್‌.ಪುಟ್ಟರಾಜು: ಎಲ್ಲಾ ವ್ಯವಸ್ಥೆ ಆಗುತ್ತದೆ ಅಪ್ಪಾಜಿ

ಜಿ.ಮಾದೇಗೌಡ: ನಮ್ಮವರು ದುಡ್ಡು ಕೇಳುತ್ತಿದ್ದಾರೆ. ನನ್ನ ಮಗ ಕೊಡುತ್ತಾನೆ. ನನಗೆ ಓಡಾಡಲು ಆಗುವುದಿಲ್ಲ. ಎಲ್ಲಾ ಕಡೆ ಓಡಾಡು ಎಂದು ಮಗನಿಗೆ ತಿಳಿಸಿದ್ದೇನೆ. ಅವನಿಗೆ ದುಡ್ಡು ಕೊಡಿ. ಮದ್ದೂರಿನಲ್ಲಿ ಒಂದು ಕಾರ್ಯಕ್ರಮ ಮಾಡುತ್ತೇವೆ. ನೀವೂ ಬಂದು ಹೋಗಿ.

ಸಿ.ಎಸ್‌.ಪುಟ್ಟರಾಜು: ಬರುತ್ತೇನೆ.

ಜಿ.ಮಾದೇಗೌಡ: ದುಡ್ಡು ಯಾರು ಕೊಡ್ತಾರೆ ಹೇಳಿ, ಅವರನ್ನೇ ಸಂಪರ್ಕ ಮಾಡುತ್ತೇನೆ.

ಸಿ.ಎಸ್‌.ಪುಟ್ಟರಾಜು: ಬೆಂಗಳೂರಿನಲ್ಲೇ ವ್ಯವಸ್ಥೆ ಮಾಡಿ ನಿಮಗೆ ಕರೆ ಮಾಡುತ್ತೇನೆ ಅಪ್ಪಾಜಿ.

ಜಿ.ಮಾದೇಗೌಡ: ದಯವಿಟ್ಟು ನಾಳೆ, ನಾಡಿದ್ದರಲ್ಲಿ ವ್ಯವಸ್ಥೆ ಮಾಡಿ.

ಸಿ.ಎಸ್‌.ಪುಟ್ಟರಾಜು: ಆಯ್ತು ಅಪ್ಪಾಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.