ಬಾಗಲಕೋಟೆ: ‘ಕೃಷ್ಣಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿ ಉಳಿದ ಹಂತದ ಕಾಮಗಾರಿ ಪೂರ್ಣಗೊಳಿಸಲು ₹50 ಸಾವಿರ ಕೋಟಿ ಅನುದಾನ ತರಲು ಪ್ರಯತ್ನಿಸುವೆ’ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಜಿಲ್ಲೆಯ ಸಂತ್ರಸ್ತರಿಗೆ ಭರವಸೆ ನೀಡಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ’ಕೃಷಿ ಹಾಗೂ ನೇಕಾರಿಕೆ ಈ ಜಿಲ್ಲೆಯ ಎರಡು ಕಣ್ಣುಗಳು. ಮಹಾದಾಯಿ, ಕಳಸಾ–ಬಂಡೂರಿ ಯೋಜನೆಗಳ ಜಾರಿಗೆ ಪ್ರಯತ್ನಿಸುವ ಜೊತೆಗೆ ರಬಕವಿ–ಬನಹಟ್ಟಿ, ಇಳಕಲ್, ಗುಳೇದಗುಡ್ಡ, ಕಮತಗಿ, ಕೆರೂರು ಭಾಗದ ಒಂದು ಕಡೆ ಟೆಕ್ಸ್‌ಟೈಲ್ ಪಾರ್ಕ್, ತಾಲ್ಲೂಕಿಗೊಂದು ಗಾರ್ಮೆಂಟ್ ಫ್ಯಾಕ್ಟರಿ ನಿರ್ಮಾಣಕ್ಕೆ ಆದ್ಯತೆ ನೀಡುವೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಕೊಡಿಸಲು ಶ್ರಮ ವಹಿಸುವೆ’ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ. ಉತ್ತಮ ಶಿಕ್ಷಣ ಪಡೆದರೂ ಮಕ್ಕಳಿಗೆ ಉದ್ಯೋಗಾವಕಾಶ ಇಲ್ಲದೇ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗಬೇಕಿದೆ. ಅದನ್ನು ತಪ್ಪಿಸಲು ಸ್ಥಳೀಯವಾಗಿ ಸಣ್ಣ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವೆ. ಕೇಂದ್ರದ ಅನುದಾನದಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಕೌಶಲ್ಯ ವೃದ್ಧಿಗೆ ನೆರವಾಗುವೆ ಎಂದರು.
ಬಾಗಲಕೋಟೆ–ಕುಡಚಿ ರೈಲು ಮಾರ್ಗ ಪೂರ್ಣಗೊಳಿಸಲು ಶ್ರಮವಹಿಸುವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಜೊತೆಗೆ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮುಂದಾಗುವೆ ಎಂದು ಹೇಳಿದರು.
ಐದು ಬೆರಳು ಒಂದೇ ರೀತಿ ಇರೊಲ್ಲ: ಜಿಲ್ಲಾ ಪಂಚಾಯ್ತಿಯಲ್ಲಿ ಬೇರೆ ಬೇರೆ ಪಕ್ಷಗಳ ಸದಸ್ಯರಿದ್ದೆವು. ಅದೊಂದು ಮನೆ ಇದ್ದಂತೆ. ಹಾಗಾಗಿ ಸದಸ್ಯರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಐದು ಬೆರಳು ಒಂದೇ ರೀತಿ ಇರೊಲ್ಲ. ಈಗ ಎಲ್ಲರೂ ಒಂದಾಗಿದ್ದೇವೆ ಎಂದು ವೀಣಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷದಿಂದಲೂ ಪ್ರಚಾರ ಜೋರಾಗಿ ಕೈಗೊಂಡಿದ್ದೇವೆ. ಹೋದಲೆಲ್ಲಾ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರ ಪ್ರೀತಿ–ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.