ನವದೆಹಲಿ: ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್, ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ.
ಉತ್ತರ ಪ್ರದೇಶದಿಂದ ಐದು ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ರಾಯ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ 75 ಸಾವಿರಕ್ಕೂ ಹೆಚ್ಚು ಮತ ಪಡೆದು ಮೂರನೇ ಸ್ಥಾನ ಗಳಿಸಿದ್ದರು. ಅರವಿಂದ್ ಕೇಜ್ರಿವಾಲ್ ಅವರು 2 ಲಕ್ಷಕ್ಕೂ ಹೆಚ್ಚು ಮತಗಳಿಸಿ ಎರಡನೆಯ ಸ್ಥಾನ ಗಳಿಸಿದ್ದರು.
ಈ ಬಾರಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಅವರು ಕಣಕ್ಕಿಳಿಯುತ್ತಾರೆ ಎಂಬ ದಟ್ಟ ಸುದ್ದಿಯ ನಡುವೆಯೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಅಜಯ್ ರಾಯ್ ಉಮೇದುವಾರಿಕೆಯನ್ನು ಗುರುವಾರ ಪ್ರಕಟಿಸಿದರು.
ಮೇ 19ರಂದು ಈ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಇದೇ ಮೋದಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಜನವರಿಯಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದ ಪ್ರಿಯಾಂಕಾ, ರಾಹುಲ್ ಒಪ್ಪಿಗೆ ನೀಡಿದರೆ ವಾರಾಣಸಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಒಂದು ವೇಳೆ ಪ್ರಿಯಾಂಕಾ ಅವರು ಅಭ್ಯರ್ಥಿಯಾದರೆ, ಅವರು ವಾರಾಣಸಿ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆಗ ಈಗಾಗಲೇ ಅವರಿಗೆ ಜವಾಬ್ದಾರಿ ವಹಿಸಿರುವ ಉತ್ತರ ಪ್ರದೇಶದ ಪೂರ್ವ ಭಾಗದ ಮೇಲಿನ ಗಮನ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿದೆ. ಪ್ರಿಯಾಂಕಾ ಅವರನ್ನು ಬ್ರಹ್ಮಾಸ್ತ್ರ ಎಂದು ಕಾಂಗ್ರೆಸ್ ಪರಿಗಣಿಸುತ್ತದೆ. ಒಂದು ವೇಳೆ ಮೋದಿ ವಿರುದ್ಧ ಅವರು ಸೋತಲ್ಲಿ, ಭವಿಷ್ಯದಲ್ಲಿ ಇದಕ್ಕೆ ಧಕ್ಕೆಯಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಬಿಜೆಪಿ ಯುವಘಟಕದ ಕಾರ್ಯಕರ್ತರಾಗಿ ರಾಜಕೀಯ ಆರಂಭಿಸಿದ್ದ ರಾಯ್, ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಕ್ಕೂ ಹೋಗಿದ್ದರು. ಸಮಾಜವಾದಿ ಪಕ್ಷವು ಶಾಲಿನಿ ಯಾದವ್ ಅವರನ್ನು ವಾರಾಣಸಿಯಿಂದ ಕಣಕ್ಕಿಳಿಸಿದೆ.
ಗೋರಖ್‌ಪುರ ಕ್ಷೇತ್ರಕ್ಕೆ ಬಿಜೆಪಿಯ ರವಿ ಕಿಶನ್ ವಿರುದ್ಧ ಮಧುಸೂದನ್ ತಿವಾರಿ ಅವರನ್ನು ಕಾಂಗ್ರೆಸ್ ಹೆಸರಿಸಿದೆ. ಈ ಮೂಲಕ ಎಲ್ಲ 424 ಅಭ್ಯರ್ಥಿಗಳ ಘೋಷಣೆ ಪೂರ್ಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.