ಮಂಗಳೂರು: ‘ಬಿಜೆಪಿ ಶಾಸಕ ಸಿ.ಟಿ.ರವಿ ನಾಲಿಗೆ ಚಪ್ಪಲಿ ಇದ್ದಂತೆ. ಅದಕ್ಕಾಗಿಯೇ ಅವರು ಹೆಣ್ಣು ಮಕ್ಕಳ ವಿಚಾರದಲ್ಲಿ ಅನಾಗರಿಕರಂತೆ ಮಾತನಾಡುತ್ತಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಡಾ.ಜಯಮಾಲಾ ಟೀಕಿಸಿದರು.
‘ನರೇಂದ್ರ ಮೋದಿಯವರಿಗೆ ಮತ ಹಾಕದವರು ತಾಯ್ಗಂಡರು’ ಎಂಬ ಹೇಳಿಕೆ ಕುರಿತು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಸಂಸ್ಕೃತಿಯ ರಕ್ಷಕರು ಎಂದು ಬಿಂಬಿಸಿಕೊಳ್ಳುವ ರವಿಯದ್ದು ಯಾವ ಸಂಸ್ಕೃತಿ? ಅವರು ನಾಲಿಗೆಯನ್ನು ಚಪ್ಪಲಿ ಮಾಡಿಕೊಂಡಿದ್ದಾರೆ’ ಎಂದರು.
ಮತ ಗಳಿಸಲು ಹೆಣ್ಣು ಮಕ್ಕಳ ವಿಚಾರವನ್ನು ಬಳಸಿಕೊಳ್ಳುವುದು ಅನಾಗರಿಕ ಸಂಸ್ಕೃತಿ. ಇದು ಮನುಷ್ಯತ್ವವನ್ನು ಮೀರಿದ ಕೆಲಸ. ಸಿ.ಟಿ.ರವಿ ಪದೇ ಪದೇ ಇಂತಹ ವರ್ತನೆ ತೋರುತ್ತಿದ್ದಾರೆ. ಯಾರೇ ಆದರೂ ಈ ರೀತಿ ಮಾತನಾಡುವುದು ಖಂಡನೀಯ. ಚಿಕ್ಕವರಿದ್ದಾಗ ಅವರ ತಾಯಿ ಮಗನ ನಾಲಿಗೆಗೆ ಸರಿಯಾಗಿ ಬಜೆ ಹಾಕಿ ತಿದ್ದಿಲ್ಲವೇನೋ ಎಂಬ ಅನುಮಾನ ಮೂಡುತ್ತದೆ ಎಂದು ಹೇಳಿದರು.
ಪುಸ್ತಕ ರವಾನೆ: ಹೆಣ್ಣು ಮಕ್ಕಳ ಬಗ್ಗೆ ಗೌರವಯುತವಾಗಿ ಮಾತನಾಡುವುದನ್ನು ಕಲಿಯುವಂತೆ ಒತ್ತಾಯಿಸಿ ರವಿ ಅವರಿಗೆ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಮತ್ತು ‘ಅಮ್ಮ ಅಂದರೆ ನಂಗಿಷ್ಟ’ ಕೃತಿಗಳನ್ನು ಕೊರಿಯರ್ ಮೂಲಕ ರವಾನಿಸಲಾಗುವುದು. ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.