ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಮಂಗಳವಾರದಿಂದ ಅಧಿಕೃತ ಚಾಲನೆ ಸಿಕ್ಕಿದೆ. ಇದರ ಬೆನ್ನಿಗೆ ‘ಮತದಾನ ಬಹಿಷ್ಕಾರದ’ ಸದ್ದು ಮೊಳಗಿದೆ.
ವಿಜಯಪುರ ನಗರದಿಂದ ಕೂಗಳತೆ ದೂರದಲ್ಲಿರುವ, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಾಲಟ್ಟಿ ಗ್ರಾಮದಲ್ಲಿ ಮಂಗಳವಾರ ‘ಮತದಾನ ಬಹಿಷ್ಕಾರ’ದ ಬ್ಯಾನರ್ ಕಟ್ಟಿ, ನೀರಿಗಾಗಿ ಪ್ರತಿಭಟನೆಯೂ ನಡೆದಿದೆ.
‘ಅತಾಲಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ. ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವವರೆಗೂ ರಾಜಕಾರಣಿಗಳಿಗೆ ಪ್ರವೇಶವಿಲ್ಲ’ ಎಂಬ ಒಕ್ಕಣೆಯುಳ್ಳ ಬ್ಯಾನರನ್ನು ಗ್ರಾಮದ ಪ್ರಮುಖ ಸ್ಥಳವೊಂದರ ಮರಕ್ಕೆ ಕಟ್ಟಿ ಎಚ್ಚರಿಕೆಯ ಸಂದೇಶ ಬಿತ್ತರಿಸಲಾಗಿದೆ.
2018ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲೂ ಅತಾಲಟ್ಟಿ ಗ್ರಾಮದ ಕೆಲವರು, ಫೌಂಡೇಶನ್‌ವೊಂದರಿಂದ ವಿತರಿಸಿದ್ದ ಬಾಂಡೆ ಸಾಮಗ್ರಿಗಳನ್ನು ಊರ ಮುಂದಿಟ್ಟು, ನಮಗೆ ಬೇಕಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ನೀರಿನ ತ್ರಾಸು ಹೇಳತೀರದು:
‘ದೊಡ್ಡ ಗ್ರಾಮವಿದು. ಜನಸಂಖ್ಯೆಗೆ ತಕ್ಕಷ್ಟು ಕುಡಿಯುವ ನೀರೇ ಪೂರೈಕೆಯಾಗುತ್ತಿಲ್ಲ. ಸರ್ಕಾರಿ ನಳ ಬಂದ್ ಬಿದ್ದಿವೆ. ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ಭಾಳ ದಿನ ಆದ್ವು. ನಿತ್ಯವೂ ಕುಡಿಯೋ ನೀರಿಗೆ ನೆತ್ತಿ ಸುಡೋ ಬಿಸಿಲನ್ನು ಲೆಕ್ಕಿಸದೆ ಅಲೆದಾಡಬೇಕಿದೆ.
ಎರಡ್ಮೂರು ಕಿ.ಮೀ. ದೂರದಲ್ಲಿರುವ ತೋಟದ ಬಾವಿಗಳ ಬಳಿಗೆ ನಡೆದುಕೊಂಡೇ ನೀರಿಗಾಗಿ ನೀರೆಯರು ಹೋಗುವಂತಾಗಿದೆ. ತೋಟದ ಬಾವಿ ಬಳಿ ಹೋದಾಗ ಕರೆಂಟ್ ಕೈ ಕೊಟ್ರೇ, ವಿಧಿಯಿಲ್ಲದೆ ಬರಿಗೈಲಿ ಮನೆಗೆ ಬರಬೇಕು. ಇಲ್ಲದಿದ್ದರೆ ತಾಸುಗಟ್ಟಲೇ ಸುಡೋ ಬಿಸಿಲಲ್ಲೇ ಕಾದು ನಿಲ್ಲಬೇಕಾದಂಥಹ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆ’ ಎನ್ನುತ್ತಾರೆ ಅತಾಲಟ್ಟಿಯ ಗೀತಾ ಬೊಮ್ಮನಜೋಗಿ, ಗಂಗೂಬಾಯಿ ಹಿರೇಮಠ.
‘ಬೇಸಿಗೆಯಲ್ಲಿ ನಮ್ಮೂರ ಸಮಸ್ಯೆ ತಪ್ಪದಾಗಿದೆ. ಮೂರ್ನಾಲ್ಕು ವರ್ಸದಿಂದ ಪರಿಹಾರವೇ ಸಿಗದಾಗಿದೆ. ಕುಡಿಯುವ ನೀರಿಗೂ ಭಾಳ ತ್ರಾಸ್ ಆಗೈತಿ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ರಾಜಕಾರಣಿಗಳು, ಸಂಬಂಧಿಸಿದ ಅಧಿಕಾರಿಗಳ ಬಳಿಗೆ ತೆರಳಿ ಐದು ಬಾರಿ ಮನವಿ ಮಾಡಿಕೊಂಡರೂ; ಇದೂವರೆಗೂ ಸ್ಪಂದನೆ ಎಂಬುದೇ ಸಿಗದಾಗಿದೆ’ ಎಂದು ಮಂಗಳವಾರ ಅತಾಲಟ್ಟಿಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಬಳಿ ಗ್ರಾಮಸ್ಥರ ಪರವಾಗಿ ಬಸು ಸೊನ್ನದ ಗ್ರಾಮದ ನೀರಿನ ಚಿತ್ರಣವನ್ನು ಬಿಚ್ಚಿಟ್ಟರು.
ಈಡೇರದ ಬೇಡಿಕೆ; ಗ್ರಾಮಸ್ಥರ ಸಿಟ್ಟು
‘ಕೃಷ್ಣಾ ಹೊಳೆಯಿಂದ ಗ್ರಾಮಕ್ಕೆ ಪೈಪ್‌ಲೈನ್ ಮೂಲಕ ನೀರು ಪೂರೈಸುವ ಯೋಜನೆಗೆ ಈ ಹಿಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹಸಿರು ನಿಶಾನೆ ತೋರಿದ್ದರು. ಆದರೆ ಪೈಪ್‌ಲೈನ್ ಸಾರವಾಡ ಗ್ರಾಮದವರೆಗೂ ಮಾತ್ರ ಬಂತು. ನಮ್ಮೂರಿಗೆ ಬರಲೇ ಇಲ್ಲ. ಇತ್ತ ವಿಜಯಪುರದಿಂದಲೂ ಅತಾಲಟ್ಟಿಗೆ ಯಾವುದೇ ಪೈಪ್‌ಲೈನ್ ಬರಲಿಲ್ಲ.’
‘ನಮ್ಮೂರಲ್ಲಿ 300 ಎಕರೆಗೂ ಹೆಚ್ಚು ಭೂಮಿಯಲ್ಲಿ ದ್ರಾಕ್ಷಿಯಿದೆ. ಈ ಬೇಸಿಗೆಯಲ್ಲಿ ಪಡ, ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಕಿದವರೇ ಹೆಚ್ಚು. ಪೈಪ್‌ಲೈನ್ ಮೂಲಕ ಕೃಷ್ಣೆ ಹಳ್ಳದಲ್ಲಿ ಹರಿದಿದ್ದರೆ, ಅಂತರ್ಜಲ ಹೆಚ್ಚುತ್ತಿತ್ತು. ಗ್ರಾಮಸ್ಥರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ. ತೋಟಗಾರಿಕೆ ಬೆಳೆಗಾರರು ಕಂಗಾಲಾಗಬೇಕಿರಲಿಲ್ಲ’ ಎಂದು ಗ್ರಾಮಸ್ಥರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ನಮ್ಮ ಗ್ರಾಮ ಪಂಚಾಯ್ತಿ ಆಡಳಿತ ಕೇಂದ್ರ ತೊರವಿ. ತೊರವಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ನಮ್ಮೂರು ಅತಾಲಟ್ಟಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದೆ. ವಿಧಾನಸಭಾ ಚುನಾವಣೆಯಲ್ಲಿನ ‘ಮತ ರಾಜಕಾರಣವೂ’ ನಮ್ಮೂರಿಗೆ ಕೃಷ್ಣೆ ಹರಿದು ಬರಲು ಅಡ್ಡಿಯಾಗಿದೆ’ ಎಂಬುದು ಸ್ಥಳೀಯರ ದೂರು.
ಕೊಳವೆಬಾವಿ ಕೊರೆಸುತ್ತೇವೆ: ಪಿಡಿಒ
‘ಅತಾಲಟ್ಟಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಮಂಗಳವಾರ ಗಮನಕ್ಕೆ ಬಂದಿದೆ. ತಕ್ಷಣವೇ ವಾಲ್ವ್‌ಮನ್ ಜತೆ ಮಾತನಾಡಿರುವೆ. ಪಂಚಾಯ್ತಿ ವ್ಯಾಪ್ತಿಯ ಕೊಳವೆಬಾವಿಗಳ ನೀರು ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಹೊಸದಾಗಿ ಕೊಳವೆಬಾವಿಯನ್ನು ಕೊರೆಸಲಿದ್ದೇವೆ’ ಎಂದು ತೊರವಿ ಗ್ರಾಮ ಪಂಚಾಯ್ತಿ ಪಿಡಿಒ ರಾಜಶ್ರೀ ತುಂಗಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ವಾರದಿಂದ ಸ್ಥಗಿತಗೊಂಡಿರುವ ಮಾಹಿತಿಯಿದೆ. ಇದರ ಜತೆಗೆ ಗ್ರಾಮದ ಕೆಲ ಕಿಡಿಗೇಡಿಗಳು ಪಂಚಾಯ್ತಿ ವ್ಯಾಪ್ತಿಯ ಬೋರ್‌ವೆಲ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕಿರಿಕಿರಿ ಮಾಡುತ್ತಿರುವುದರಿಂದಲೂ; ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸಲಾಗಿಲ್ಲ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಶೀಘ್ರದಲ್ಲೇ ಕುಡಿಯುವ ನೀರಿನ ಸಮಸ್ಯೆಗೆ ಇತಿಶ್ರೀ ಹಾಕುತ್ತೇವೆ’ ಎಂದು ತುಂಗಳ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.