ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಕಾರಣದ ಜತೆಗೆ ಹಿಂಸೆ ಹಿಂದಿನಿಂದಲೂ ತಳಕು ಹಾಕಿಕೊಂಡಿದೆ.
ಲೋಕಸಭೆ ಚುನಾವಣೆಯ ಎಲ್ಲ ಏಳು ಹಂತಗಳಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆದಿತ್ತು. ಎಲ್ಲ ಹಂತಗಳಲ್ಲಿಯೂ ಇಲ್ಲಿ ಹಿಂಸಾಚಾರವೂ ನಡೆದಿದೆ. ಈ ಹಿಂಸಾಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ಸೇರಿ ಮೂವರು ಬಲಿಯಾಗಿದ್ದಾರೆ.
ಉತ್ತರ ಮತ್ತು ದಕ್ಷಿಣ ಕೋಲ್ಕತ್ತ, ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಮತದಾನದ ಬಳಿಕವೂ ರಾಜಕೀಯ ಹಿಂಸಾಚಾರ ಮುಂದುವರಿದಿದೆ.
ಇದೇ ಗುರುವಾರ ಪ್ರಕಟವಾಗಲಿ ರುವ ಲೋಕಸಭೆ ಚುನಾವಣೆಯ ಫಲಿತಾಂಶ ರಾಜ್ಯದ ಆಡಳಿತಾರೂಢ ಟಿಎಂಸಿಗೆ ಪೂರಕವಾಗಿ ಇಲ್ಲದಿದ್ದರೆ ಹಿಂಸಾಚಾರ ತೀವ್ರಗೊಳ್ಳಬಹುದು ಎಂಬ ಆತಂಕವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿವೆ.
ರಾಜ್ಯದಲ್ಲಿ ನೆಲೆ ವಿಸ್ತರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಹೀಗಾಗಿ, ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಣ ಸಂಘರ್ಷಗಳು ತುಸು ಹೆಚ್ಚಾಗಿಯೇ ಮಾಧ್ಯಮಗಳ ಗಮನವನ್ನು ಸೆಳೆಯುತ್ತಿವೆ. 2011ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಟಿಎಂಸಿಗೆ ಚುನಾವಣಾ ಹಿಂಸಾಚಾರ ಹೊಸದೇನೂ ಅಲ್ಲ.
2009ರಲ್ಲಿ ಲೋಕಸಭಾ ಚುನಾವಣೆ ಹಿಂಸಾಚಾರದಲ್ಲಿ ಮೂವರು ಸತ್ತಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಏಳು ಮಂದಿ ರಾಜಕೀಯ ಹಿಂಸಾಚಾರಗಳಿಗೆ ಬಲಿಯಾಗಿದ್ದರು. ಕಳೆದ ವರ್ಷ ಪಂಚಾಯಿತಿ ಚುನಾವಣೆಗಳ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಮಂದಿ ಸತ್ತರು.
ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ವ್ಯಾಪಕ ಹಿಂಸಾಚಾರ ಎಸಗಿದೆ ಎಂದು ಬಿಜೆಪಿ ಮತ್ತು ಸಿಪಿಎಂ ಆರೋಪಿಸಿದ್ದವು. ಆದರೆ, ರಾಜ್ಯದಲ್ಲಿ ಸತತ 34 ವರ್ಷ ಎಡರಂಗದ ಅಧಿಕಾರ ಇದ್ದಾಗಲೇ ಹೆಚ್ಚು ಹಿಂಸೆ ನಡೆದಿದೆ ಎಂದು ಟಿಎಂಸಿ ಆರೋಪಿಸಿತ್ತು.
ಟಿಎಂಸಿ ಸಂಸದ ಮತ್ತು ವಕ್ತಾರ ಡೆರೆಕ್ ಒಬ್ರಯಾನ್ ಅವರು ಕಳೆದ ತಿಂಗಳ ಆರಂಭದಲ್ಲಿ ‘1990ರಲ್ಲಿ ಸಿಪಿಎಂ ಆಡಳಿತದಲ್ಲಿ ರಾಜಕೀಯ ಹಿಂಸೆಗೆ 400 ಜನರು ಸತ್ತಿದ್ದರು. 2003ರಲ್ಲಿ ಹೀಗೆ ಸತ್ತವರ ಸಂಖ್ಯೆ 40’ ಎಂದು ಟ್ವೀಟ್ ಮಾಡಿದ್ದರು.
ಪಶ್ಚಿಮ ಬಂಗಾಳದಲ್ಲಿ 2009ರ ಲೋಕಸಭೆ ಚುನಾವಣೆಯಿಂದೀಚೆಗೆ ಒಟ್ಟು 269 ಸಿಪಿಎಂ ಕಾರ್ಯಕರ್ತರು ಸತ್ತಿದ್ದಾರೆ ಎಂದು ಎಡರಂಗದ ಬಿಮನ್ ಬಸು 2010ರ ಆಗಸ್ಟ್‌ರಲ್ಲಿ ಹೇಳಿದ್ದರು.
ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಸಿಪಿಎಂ ಮತ್ತು ಟಿಎಂಸಿಗಷ್ಟೇ ಸೀಮಿತವಲ್ಲ. ಬಿಜೆಪಿ ಈ ಪಟ್ಟಿಗೆ ಹೊಸ ಸೇರ್ಪಡೆ. 1980ರ ದಶಕದಲ್ಲಿ ಕಾಂಗ್ರೆಸ್ ಮತ್ತು ಎಡರಂಗ ನಡುವೆ ಸಂಘರ್ಷವಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದ ಅಂಕಿ ಅಂಶಗಳು, ರಾಜ್ಯದಲ್ಲಿನ ರಾಜಕೀಯ ಹಿಂಸಾಚಾರಗಳಿಗೆ ಕನ್ನಡಿಹಿಡಿಯುತ್ತವೆ.
ವಿಧಾನಸಭೆಯಲ್ಲಿ ಜ್ಯೋತಿಬಸು ಅವರು 1980ರಲ್ಲಿ ಮಂಡಿಸಿದ ಅಂಕಿ ಅಂಶಗಳ ಪ್ರಕಾರ, ರಾಜಕೀಯ ಪಕ್ಷಗಳ ನಡುವಣ ಸಂಘರ್ಷದಿಂದಾಗಿ ಒಟ್ಟು 85 ಕಾರ್ಯಕರ್ತರು ಬಲಿಯಾಗಿದ್ದರು.
ಹಿಂಸೆ ಮತ್ತು ಬಲಪ್ರಯೋಗ ಇಲ್ಲದೆ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ ಎಂದು ರಾಜಕೀಯ ಪಕ್ಷಗಳು ನಂಬಿವೆ. ಹೀಗಾಗಿ, ಹಿಂಸಾಚಾರವು ರಾಜಕಾರಣದ ಸಂಪ್ರದಾಯವೇ ಆಗಿಬಿಟ್ಟಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಇನ್ನೊಂದೆಡೆ, ನಿರುದ್ಯೋಗ ಸಮಸ್ಯೆಯ ಕಾರಣಕ್ಕೂ ಅನೇಕ ವಿದ್ಯಾವಂತ ಯುವಜನರು ರಾಜಕೀಯ ಪಕ್ಷಗಳಿಗೆ ತಮ್ಮ ಶಕ್ತಿ ಪ್ರದರ್ಶಿಸಲು ‘ಆಯುಧ’ವಾಗುತ್ತಿದ್ದಾರೆ ಎಂಬುದು ಗಮನಾರ್ಹ.
***
ಬಂಗಾಳದಲ್ಲಿ ವಿರೋಧಿಗಳನ್ನು ಹತ್ತಿಕ್ಕಲು ರಾಜಕೀಯ ಪಕ್ಷಗಳಿಗೆ ಹಿಂಸಾಚಾರವೇ ಪ್ರಮುಖ ಅಸ್ತ್ರ. ರಾಜಕಾರಣ ನಿಯಂತ್ರಿಸಲು ಯೋಜಿತವಾಗಿ ಬಳಸಲಾಗುತ್ತಿದೆ
- ಬಿಸ್ವಂತ್ ಚಕ್ರವರ್ತಿ, ವಿಶ್ಲೇಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.