ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಮೊದಲ ಮತ್ತು ಎರಡನೇ ಹಂತದಲ್ಲಿ ಚುನಾವಣೆ ಎದುರಿಸಲಿರುವ ಬಹುತೇಕ ಕ್ಷೇತ್ರಗಳಿಗೆ ಈ ಮೂಲಕ ಬಿಜೆಪಿಯು ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.ಕರ್ನಾಟಕ, ಕೇರಳ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಸೇರಿ ಹಲವು ರಾಜ್ಯಗಳ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಪ್ರಕಟಿಸಿದೆ.
ಬಿಹಾರದ ಪಟ್ಟಿ ಪೂರ್ಣ:ಬಿಹಾರದ ಒಟ್ಟು 40 ಕ್ಷೇತ್ರಗಳಲ್ಲಿ ಬಿಜೆಪಿಯು 17 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು 17ರಲ್ಲಿ ಮತ್ತು ಎಲ್‌ಜೆಪಿ 6ರಲ್ಲಿ ಸ್ಪರ್ಧಿಸುತ್ತಿವೆ. ಈ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ತಮ್ಮ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿದೆ. ಬಿಹಾರದಲ್ಲಿ ಬಿಜೆಪಿಯು ತನ್ನ ಮೂವರು ಹಾಲಿ ಸಂಸದರಿಗೆ ಮತ್ತು ಪಕ್ಷದ ಏಕೈಕ ಮುಸ್ಲಿಂ ನಾಯಕನಿಗೆಟಿಕೆಟ್ ನಿರಾಕರಿಸಿದೆ.
ಪಟ್ನಾ ಸಾಹಿಬ್ ಸಂಸದ ಶತ್ರುಘ್ನ ಸಿನ್ಹಾ, ದರ್ಬಾಂಗ ಸಂಸದ ಕೀರ್ತಿ ಆಜಾದ್ ಮತ್ತು ಸಂಸದ ಹುಕುಂದೇವ್ ನಾರಾಯಣ ಯಾದವ್ ಅವರಿಗೆ ಟಿಕೆಟ್ ನೀಡಿಲ್ಲ. ಅಲ್ಲದೆ 2014ರಲ್ಲಿ ಭಾಗಲ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಪಕ್ಷದ ಮುಸ್ಲಿಂ ನಾಯಕ ಶಹನವಾಜ್ ಹುಸೇನ್ ಅವರಿಗೂ ಟಿಕೆಟ್ ನೀಡಿಲ್ಲ.
ಬೆಂಗಳೂರು ದಕ್ಷಿಣ; ಕೊನೆಯಾಗದ ವದಂತಿ:ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಈವರೆಗೆ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಂತಕುಮಾರ್ ಅವರ ನಿಧನದಿಂದ ಕ್ಷೇತ್ರ ತೆರವಾಗಿತ್ತು. ಇಲ್ಲಿಂದ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರು ಟಿಕೆಟ್ ಬಯಸಿದ್ದಾರೆ. ಮೋದಿ ಅವರು ಈ ಕ್ಷೇತ್ರವನ್ನು ತಮ್ಮ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ.
ಪುರಿಯಲ್ಲಿ ಮೋದಿ ಸ್ಪರ್ಧೆ ಇಲ್ಲ
ಒಡಿಶಾದ ಪುರಿ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ಯುವನಾಯಕ ಸಂಬಿತ್ ಪಾತ್ರಾ ಅವರನ್ನು ಕಣಕ್ಕೆ ಇಳಿಸಿದೆ. ಪುರಿಯಲ್ಲಿ ಮೋದಿ ಕಣಕ್ಕೆ ಇಳಿಯಲಿದ್ದಾರೆ ಎಂಬ ವದತಿಂಗೆ ಈ ಮೂಲಕ ಬಿಜೆಪಿ ತೆರೆ ಎಳೆದಿದೆ.
ಒಡಿಶಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮೋದಿ ಅವರು ಎರಡನೇ ಕ್ಷೇತ್ರವಾಗಿ ಪುರಿಯಲ್ಲೂ ಕಣಕ್ಕೆ ಇಳಿಯಲಿದ್ದಾರೆ. ಮೋದಿ ಇಲ್ಲಿಂದ ಸ್ಪರ್ಧಿಸಿದರೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲೂ ಅದರ ಪ್ರಭಾವ ಇರಲಿದೆ. ಇದು ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿದೆ ಎಂಬ ವದಂತಿ ಒಂದು ವರ್ಷದಿಂದ ಚಾಲ್ತಿಯಲ್ಲಿತ್ತು.
ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸಿರುವ ಸಂಬಿತ್ ಪಾತ್ರಾ ತಮ್ಮ ಬಿರುನುಡಿಗಳಿಂದ ರಾಜಕೀಯದಲ್ಲಿ ಗಮನ ಸೆಳೆದಿದ್ದಾರೆ. ಪುರಿ ಕ್ಷೇತ್ರದಿಂದ ಅವರು ತಮ್ಮ ಚುನಾವಣಾ ರಾಜಕಾರಣವನ್ನು ಆರಂಭಿಸಲಿದ್ದಾರೆ.
ಪಟ್ಟಣಂತಿಟ್ಟಕ್ಕೆ ಸುರೇಂದ್ರನ್ ಅಭ್ಯರ್ಥಿ
ಕೇರಳದ ಪಟ್ಟಣಂತಿಟ್ಟ ಕ್ಷೇತ್ರದಿಂದ ನರೇಂದ್ರ ಮೋದಿ ಸ್ಪರ್ಧಿಸಲಿದ್ದಾರೆ. ದಕ್ಷಿಣದ ರಾಜ್ಯದಲ್ಲಿ ಬಿಜೆಪಿಯ ಪ್ರಭಾವವನ್ನು ಹೆಚ್ಚಿಸಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಬಿಜೆಪಿಯು ತನ್ನ ಪಟ್ಟಿಯಲ್ಲಿ ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಹೀಗಾಗಿ ವದಂತಿಗೆ ಮತ್ತಷ್ಟು ಜೀವಬಂದಿತ್ತು. ಇಲ್ಲಿಂದ ಸ್ಪರ್ಧಿಸಿದರೆ ಮೋದಿ ಕೇವಲ ಉತ್ತರ ಭಾರತದ ನಾಯಕನಲ್ಲ, ಇಡೀ ದೇಶದ ನಾಯಕ ಎಂಬ ಸಂದೇಶ ರವಾನೆಯಾಗಲಿದೆ ಎಂದೂ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದರು.
ಆದರೆ ಈ ವದಂತಿಗೂ ಬಿಜೆಪಿ ಶನಿವಾರ ತೆರೆ ಎಳೆದಿದೆ. ಈ ಕ್ಷೇತ್ರದಿಂದ ಕೆ.ಸುರೇಂದ್ರನ್ ಅವರನ್ನು ಪಕ್ಷವು ಕಣಕ್ಕೆ ಇಳಿಸಿದೆ.
ಶತ್ರುಘ್ನ ವಿರುದ್ಧ ರವಿಶಶಂಕರ್
ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸುವುದಾಗಿ ಪಕ್ಷ ಘೋಷಿದೆ. ಬಿಜೆಪಿಯಿಂದಲೇ ಆಯ್ಕೆಯಾಗಿ ಪಕ್ಷ ಹಾಗೂ ಪ್ರಧಾನಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಟೀಕೆಗಳನ್ನು ಮಾಡಿದ್ದ ಶತ್ರುಘ್ನ ಸಿನ್ಹಾ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂಬುದು ನಿರೀಕ್ಷಿತವಾಗಿತ್ತು.
ಸಿನ್ಹಾ ಅವರು ಸದ್ಯದಲ್ಲೇ ಕಾಂಗ್ರೆಸ್ ಸೇರಿ, ಇದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಮಿತ್ರಪಕ್ಷಗಳಾದ ಬಿಜೆಪಿ, ಜೆಡಿಯು ಹಾಗೂ ಎಲ್‌ಜೆಪಿ ನಾಯಕರು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
ಕೇಂದ್ರದ ಸಚಿವ ಗಿರಿರಾಜ್ ಸಿಂಗ್ ಅವರ ಕ್ಷೇತ್ರವನ್ನು ಎಲ್‌ಜೆಪಿಗೆ ಬಿಟ್ಟುಕೊಟ್ಟಿರುವುದರಿಂದ ಅವರಿಗೆ ಬೆಗುಸರಾಯ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.