ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರಿಗೆ ಇದು ಮೊದಲ ಲೋಕಸಭಾ ಚುನಾವಣೆ. ರಾಜ್ಯ ಸರ್ಕಾರದ ಬಲ ಹಾಗೂ ‘ಗ್ಯಾರಂಟಿ’ಗಳನ್ನು ನೆಚ್ಚಿಕೊಂಡಿರುವ ಅವರು, ಅಭಿವೃದ್ಧಿಯ ಕುರಿತ ದೂರದೃಷ್ಟಿ ಹಾಗೂ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
***
* ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮತಗಳನ್ನು ತಂದು ಕೊಡುತ್ತದೆ ಎನ್ನುವ ವಿಶ್ವಾಸ ಇದೆಯಾ?
ಜನರಿಗಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ‘ಕೈ’ ಹಿಡಿದವರನ್ನು ಜನರು ಎಂದಿಗೂ ಮರೆಯುವುದಿಲ್ಲ. ಬಲ ನೀಡುತ್ತಾರೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಯುಪಿಎ ಸರ್ಕಾರದಲ್ಲಿ ಜಾರಿಯಾದ ಯೋಜನೆ, ಕಾರ್ಯಕ್ರಮಗಳ ಹೆಸರು ಬದಲಿಸಿದೆಯಷ್ಟೇ. ಹೊಸದಾದ ಯೋಜನೆಗಳೇ ಇಲ್ಲ.
ಜಿಎಸ್‌ಟಿ, ನೋಟು ರದ್ದು, ಕೋವಿಡ್‌ನಿಂದ ಜನರು ತತ್ತರಿಸಿದ್ದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ‘ಗ್ಯಾರಂಟಿ’ ಯೋಜನೆ ಜಾರಿಗೊಳಿಸಿತು. ಇದರಿಂದ ಕಷ್ಟದಲ್ಲಿದ್ದ ಜನರ ಬದುಕು ಸುಧಾರಣೆ ಕಾಣುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಬದುಕು ಮತ್ತಷ್ಟು ಉತ್ತಮಗೊಳ್ಳಲಿದೆ. ಗ್ಯಾರಂಟಿ ಯೋಜನೆ ಖಚಿತವಾಗಿ ಕಾಂಗ್ರೆಸ್‌ಗೆ ಬಲ ನೀಡಲಿವೆ.
* ಎತ್ತಿಹೊಳೆ ಯೋಜನೆ ನೀರು ಇಂದಿಗೂ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ ಹರಿದಿಲ್ಲ. ಈ ವಿಚಾರವಾಗಿ ನಿಮ್ಮ ಭರವಸೆ ಏನು?
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರಕ್ಕೆ ಎತ್ತಿನಹೊಳೆ ನೀರಾವರಿ ಯೋಜನೆ ಅನುಕೂಲವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಬಯಲುಸೀಮೆಗೆ ಎತ್ತಿನಹೊಳೆ ನೀರು ಹರಿಯಲಿದೆ. ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಣಕ್ಕೂ ರಾಜ್ಯ ಸರ್ಕಾರ ಕ್ರಮವಹಿಸುತ್ತದೆ.
* ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ಅಂಶಗಳು ಏನು?
ಈ ಕ್ಷೇತ್ರವು ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆ. ಅತಿ ಹೆಚ್ಚು ಬಾರಿ ಪಕ್ಷದ ಅಭ್ಯರ್ಥಿಗಳು ಇಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಶಾಸಕರು ಆಯ್ಕೆಯಾಗಿದ್ದಾರೆ. ಜವಳಿ ಪಾರ್ಕ್, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಆಗಿವೆ. ನೆರೆಯ ಜಿಲ್ಲೆಗಳು ಮತ್ತು ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಆಗಿವೆ. ಇದಕ್ಕೆ ಮೂಲ ಕಾರಣ ಕಾಂಗ್ರೆಸ್. ಈ ಎಲ್ಲ ದೃಷ್ಟಿಯಿಂದ ಹೇಳುವುದಾದರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವಿನ ವಾತಾವರಣವಿದೆ.
* ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಒಳೇಟಿನ ಭೀತಿ ಇದೆಯಾ?
ಖಂಡಿತವಾಗಿಯೂ ಇಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಬೇಸರಗೊಂಡು ಎರಡೂ ಪಕ್ಷಗಳ ಕಾರ್ಯಕರ್ತರು, ನಾಯಕರು ಕಾಂಗ್ರೆಸ್ ಸೇರಿದ್ದಾರೆ. ನಮ್ಮಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ.
* ಚಿಕ್ಕಬಳ್ಳಾಪುರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸುವಂತೆ ಆಗ್ರಹವಿತ್ತು. ನೀವು ಲೋಕಸಭೆ ಆಯ್ಕೆ ಮಾಡಿಕೊಂಡಿದ್ದು ಏಕೆ?
ರಾಜ್ಯದಿಂದ ಬಿಜೆಪಿಯ 25 ಸಂಸದರು ಇದ್ದರೂ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ರಾಜ್ಯದ ಪಾಲಿನ ತೆರಿಗೆ ಹಣ ಕೇಳುತ್ತಿಲ್ಲ. ಸರ್ಕಾರಿ ಸಂಸ್ಥೆಗಳ ಬಾಗಿಲು ಮುಚ್ಚುತ್ತಿದ್ದಾರೆ. ಬರ ಪರಿಹಾರ, ನೆರೆ ಹಾವಳಿ ಸೇರಿದಂತೆ ಯಾವುದೇ ವಿಚಾರವಾಗಿ ರಾಜ್ಯದ ಪರ ಸಂಸದರು ಧ್ವನಿ ಎತ್ತಲಿಲ್ಲ. ಸಂಸದನಾದರೆ ರಾಜ್ಯದ ಪರವಾಗಿ ಕೇಂದ್ರ ಮಟ್ಟದಲ್ಲಿ ಧ್ವನಿ ಎತ್ತಬಹುದು. ರಾಜ್ಯದ ಹಿತಾಸಕ್ತಿ ಕಾಪಾಡಬಹುದು. ಈ ಉದ್ದೇಶದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದೆ.
* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಮುನ್ನೋಟಗಳೇನು?
ಬಡವರಿಗೆ ಎಲ್ಲ ಸೌಕರ್ಯ ಮುಟ್ಟಬೇಕು ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಐ.ಟಿ– ಬಿ.ಟಿ ವಲಯ ಮಾಡಬೇಕು. ಅತಿ ಹೆಚ್ಚು ಹೂ ಬೆಳೆಗಾರರು ಈ ಭಾಗದಲ್ಲಿ ಇದ್ದಾರೆ. ಆದ್ದರಿಂದ ಚಿಕ್ಕಬಳ್ಳಾಪುರವನ್ನು ಹೂವಿನ ರಾಜಧಾನಿ ಮಾಡಬೇಕು ಎಂದುಕೊಂಡಿದ್ದೇನೆ. ನಿರುದ್ಯೋಗ ಹೆಚ್ಚಿದೆ. ಗ್ರಾಮೀಣ ಭಾಗಗಳಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಹೀಗೆ ಜನರ ಬದುಕು ಸುಧಾರಣೆ ಮೂಲಸೌಕರ್ಯ ಸೇರಿದಂತೆ ಹಲವು ವಿಚಾರ ಮುಂದಿಟ್ಟು ಮತ ಕೇಳುತ್ತಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.