ADVERTISEMENT

ಜನ ಬದಲಾವಣೆ ಬಯಸಿದ್ದಾರೆ: ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ರಾಜು ಆಲಗೂರ ಸಂದರ್ಶನ

ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅಭಿಮತ

ಬಸವರಾಜ ಸಂಪಳ್ಳಿ
Published 4 ಮೇ 2024, 8:15 IST
Last Updated 4 ಮೇ 2024, 8:15 IST
ರಾಜು ಆಲಗೂರ
ರಾಜು ಆಲಗೂರ   

ವಿಜಯಪುರ: ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ ಬಲು ಉತ್ಸಾಹದೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ನಾಗಠಾಣದಿಂದ ಎರಡು ಬಾರಿ ಶಾಸಕರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಅವರ ಜೊತೆ ಇದೆ.  ಎಂ.ಎ., ಎಂಫಿಲ್‌ ಪದವೀಧರರು ಆಗಿರುವ ಆಲಗೂರ ಮಿತಭಾಷಿ, ಎಲ್ಲರೊಂದಿಗೂ ಸೌಹಾರ್ದದಿಂದ ನಡೆಯುವ ವ್ಯಕ್ತಿತ್ವ. 

ಪ್ರಥಮ ಬಾರಿಗೆ ದೆಹಲಿ ಸಂಸತ್‌ ಭವನ ಪ್ರವೇಶಿಸಬೇಕು ಎಂಬ ಉಮೇದಿನಲ್ಲಿರುವ ಆಲಗೂರ ಅವರಿಗೆ ಕಾಂಗ್ರೆಸ್‌ ಸಚಿವರು, ಶಾಸಕರು, ಮುಖಂಡರು ಕೈಜೋಡಿಸಿದ್ದಾರೆ. ‘ವಿಜಯಪುರದಲ್ಲಿ ಬದಲಾವಣೆ ನಿಶ್ಚಿತ; ಕಾಂಗ್ರೆಸ್‌ ಆಯ್ಕೆ ಖಚಿತ’ ಎಂಬ ಘೋಷಣೆ ಎಲ್ಲೆಲ್ಲೂ ಮೊಳಗಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಾಂಗ್ರೆಸ್‌ ಗೆಲ್ಲಿಸಲು ಚಕ್ರವ್ಯೂಹ ಹೆಣದಿದ್ದಾರೆ. ಮೇ 7ರಂದು ನಡೆಯುವ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಆಲಗೂರ ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

*ಮತದಾರರು ಕಾಂಗ್ರೆಸ್‌ಗೆ ಏಕೆ ಮತ ಹಾಕಬೇಕು?

ADVERTISEMENT

–ದೇಶದಲ್ಲಿ ಮೋದಿ ಸರ್ವಾಧಿಕಾರ ಮಣಿಸಲು, ಎಲ್ಲ ಧರ್ಮ, ಜಾತಿ, ಜನಾಂಗದವರು ಸೌಹಾರ್ದದಿಂದ ವಾಸಿಸುವ ವಾತಾವರಣ ನಿರ್ಮಾಣಕ್ಕಾಗಿ ಕಾಂಗ್ರೆಸ್‌ಗೆ ವೋಟ್‌ ಹಾಕಬೇಕು. ಅಲ್ಲದೇ, ಸಂಸತ್ತಿನಲ್ಲಿ ಕ್ಷೇತ್ರದ ಪರ ಧ್ವನಿ ಎತ್ತಲು, ಜಿಲ್ಲೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಂದು ನ್ಯಾಯ ಒದಗಿಸಲು ಮತದಾರರು ಕಾಂಗ್ರೆಸ್‌ಗೆ ಮತ ಹಾಕಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಮತ್ತು ಪಾಲುದಾರಿಕೆ ನ್ಯಾಯ ಜಾರಿಗೆ ತಂದು, ಬಡ, ಮಧ್ಯಮ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಲು ಕಾಂಗ್ರೆಸ್‌ಗೆ ಜನ ಮತಹಾಕಬೇಕು ಎಂಬುದು ನನ್ನ ಮನವಿ.

*ಸಂಸದರಾಗಿ ಆಯ್ಕೆಯಾದರೆ ಜಿಲ್ಲೆಗೆ ಏನು ಮಾಡುವಿರಿ?

–‘ವಿಷನ್‌ ವಿಜಯಪುರ’ ಎಂಬ 10 ಅಂಶಗಳಿಗೆ ಒತ್ತು ನೀಡಲಿದ್ದೇನೆ. ಆಲಮಟ್ಟಿ ಆಣೆಕಟ್ಟೆ ಎತ್ತರಕ್ಕೆ ಮೊದಲ ಆದ್ಯತೆ, ಯುಕೆಪಿ ರಾಷ್ಟ್ರೀಯ ಯೋಜನೆಯಾಗಿಸಲು ಕ್ರಮ, ಬೆಂಗಳೂರು, ಹೈದರಾಬಾದ್‌, ಮುಂಬೈಗೆ ಹೆಚ್ಚಿನ ರೈಲು ಸೇವೆ, ವಿಜಯಪುರದಿಂದ ದೆಹಲಿ, ಬೆಂಗಳೂರಿಗೆ ವಿಮಾನಯಾನ, ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದಿಂದ ವಿವಿಧ ತಳಿಯ ಅಭಿವೃದ್ಧಿ ಪಡಿಸುವ ಫಾರ್ಮ್‌ ಆರಂಭಿಸುವುದು, ಕೇಂದ್ರೀಯ ವಿಶ್ವವಿದ್ಯಾಲಯ ಆರಂಭಕ್ಕೆ ಯತ್ನ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಾಣ, ಹೈದರಾಬಾದ್‌ ಕರ್ನಾಟಕ ಮಾದರಿಯಲ್ಲಿ ಜಿಲ್ಲೆಯನ್ನು 371 ಜೆಗೆ ಸೇರ್ಪಡೆಗೆ ಪ್ರಯತ್ನ ಮಾಡಲಾಗುವುದು.

*ನಿಮ್ಮ ನಿರೀಕ್ಷೆಯಂತೆ ಚುನಾವಣೆ ನಡೆದಿದೆಯಾ?

–ಹೌದು, ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ತೊರೆದು ಅನೇಕರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ. ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ಹೊಸಬರನ್ನು ತರಬೇಕು ಎಂದು ಪಕ್ಷಾತೀತವಾಗಿ, ಜಾತ್ಯತೀತವಾಗಿ ಮತದಾರರು ಮುಂದಾಗಿದ್ದಾರೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಸಚಿವರು, ಶಾಸಕರು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿವೆ.

*ಪಕ್ಷದಲ್ಲಿನ ಅಸಮಾಧಾನ ಸರಿಹೋಗಿದೆಯೇ? 

–ಪಕ್ಷದಲ್ಲಿ ಯಾವುದೇ ಭಿನ್ನಮತ, ಅಸಮಾದಾನ ಇಲ್ಲ, ಒಗ್ಗಟ್ಟಿದೆ. ಸಚಿವರು, ಶಾಸಕರು, ಮುಖಂಡರು ನನ್ನ ಪರವಾಗಿ ಒಟ್ಟಾಗಿ ಚುನಾವಣೆಯಲ್ಲಿ ತೊಡಗಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದವರು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಯಾರೂ ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ಕನಿಷ್ಠ ಒಂದು ಲಕ್ಷ ಮತಗಳಿಂದ ಕಾಂಗ್ರೆಸ್‌ ಗೆಲುವು ನಿಶ್ಚಿತ.

*ಪ್ರಬಲ ವರ್ಗದವರ ವೋಟುಗಳು ಈ ಬಾರಿ ಕಾಂಗ್ರೆಸ್‌ಗೆ ಬರುತ್ತವೆಯೇ?

–ನಮ್ಮಲ್ಲಿ ಐದು ಜನ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರು, ಶಾಸಕರು ಇದ್ದಾರೆ. ಅವರಿಂದಲೇ ಹೆಚ್ಚು ಮತಗಳು ಕಾಂಗ್ರೆಸ್‌ಗೆ ಬರುತ್ತವೆ. ಖಂಡಿತಾ ಪ್ರಬಲ ವರ್ಗದವರು ಈ ಬಾರಿ ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ. ನಾನು ಯಾವುದೇ ಸಮಾಜದ ವಿರೋಧಿಯಲ್ಲ.

*ಎಡ ಗೈ –ಬಲ ಗೈ ಸಮಾಜಗಳ ನಡುವಿನ ಚುನಾವಣೆ ಎಂದು ಬಿಂಬಿತವಾಗಿದೆಯಲ್ಲ?

–ಹಾಗೇನಿಲ್ಲ, ಎಡಗೈ, ಬಲಗೈ ಬಗ್ಗೆ ನನಗೆ ನಂಬಿಕೆ ಇಲ್ಲ. ನಾನು ಒಂದು ಪಂಗಡಕ್ಕೆ ಮಾತ್ರ ಸೀಮಿತವಾಗಲು ಇಚ್ಛಿಸುವುದಿಲ್ಲ, ಶೋಷಿತ ಸಮಾಜಗಳನ್ನು ಒಟ್ಟುಗೂಡಿಸಿಕೊಂಡು ನಾನು ಚುನಾವಣೆ ಮಾಡುತ್ತಿದ್ದೇನೆ. ಎಲ್ಲರ ಸಹಕಾರ ಸಿಕ್ಕಿದೆ.

* ಎದುರಾಳಿ ಬಿಜೆಪಿ ಅಭ್ಯರ್ಥಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

–ಜಿಗಜಿಣಗಿ ಅವರು ಮೂರು ಬಾರಿ ಜಿಲ್ಲೆ ಪ್ರತಿನಿಧಿಸುತ್ತಿದ್ದರೂ ಯಾವುದೇ ಜ್ವಲಂತ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ. ಕೇವಲ ಟಿ.ಎ., ಡಿ.ಎ.ಗೆ ಸೀಮಿತವಾಗಿದ್ದಾರೆ. ನಮ್ಮ ಜಿಲ್ಲೆಯ ಜನಮನದಲ್ಲಿ ಶಾಶ್ವತವಾಗಿ ಉಳಿಯುವಂತ ಯಾವೊಂದು ಕೆಲಸ ಮಾಡಿಲ್ಲ. ಅಭಿವೃದ್ಧಿ ಎಂದರೆ ಅವರಿಗೆ ಅಸಡ್ಡೆ, ಕೊರೊನಾದಂತ ಸಂದರ್ಭದಲ್ಲಿ ಸಾವಿರಾರು ಜನರು ತೀರಿ ಹೋದರೂ ಅವರ ಕುಟುಂಬಕ್ಕೆ ಕನಿಷ್ಠ ಸಾಂತ್ವಾನ ಹೇಳುವ ಕಾರ್ಯ ಮಾಡಿಲ್ಲ. ಅವರ ಬಗ್ಗೆ ಜನ ಬೇಸತ್ತಿದ್ದಾರೆ. ‘ನಿಮ್ಮ ಮತ ಬೇಡ, ಯಾರಿಗಾದರೂ ಹಾಕಿ’ ಎಂದು ಬಂಜಾರ ಸಮಾಜವನ್ನು ಅವಹೇಳನ ಮಾಡಿದ್ದಾರೆ. ಲಿಂಗಾಯತ, ದಲಿತ, ಹಿಂದುಳಿದ ಸಮಾಜಗಳನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ, ಕೇವಲ ವೋಟ್‌ ಬ್ಯಾಂಕಿಗೆ ಸೀಮಿತಗೊಳಿಸಿಕೊಂಡಿದ್ದಾರೆ. 

*ಶಾಸಕರಾಗಿದ್ದಾಗ ನಾಗಠಾಣ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?  

 –ಕರ್ನಾಟಕ, ಮಹಾರಾಷ್ಟ್ರ ಗಡಿಯಲ್ಲಿ ಭೀಮಾ ನದಿಗೆ ಹಲವು ಬ್ಯಾರೇಜ್‌, ಜೊತೆಗೆ ದೊಡ್ಡ ದೊಡ್ಡ  ಕೆರೆಗಳನ್ನು ನಿರ್ಮಾಣ ಮಾಡಲಾಗಿದ್ದು, ರೈತರಿಗೆ ಕೃಷಿ ಚಟುವಟಿಕೆಗೆ ಹಾಗೂ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. 2013–18ರ ಅವಧಿಯಲ್ಲಿ ಶಾಸಕನಾಗಿದ್ದಾಗ ಕ್ಷೇತ್ರಕ್ಕೆ ₹500 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ನನ್ನ ಅವಧಿಯಲ್ಲೇ ಚಡಚಣವು ತಾಲ್ಲೂಕು ಕೇಂದ್ರವಾಗಿದೆ, ಚಡಚಣವು ಪಟ್ಟಣ ಪಂಚಾಯ್ತಿಯಾಗಿದೆ.

*ಕಾಂಗ್ರೆಸ್‌ ನೀಡಿರುವ ಭರವಸೆ ‘ಮಹಾಲಕ್ಷ್ಮಿ’ ಯೋಜನೆ ಅನುಷ್ಠಾನ ಸಾಧ್ಯವೇ?

–ಮೋದಿ ಸರ್ಕಾರವು ಉದ್ಯಮಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದಾದರೆ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷಕ್ಕೆ ತಲಾ ₹1 ಲಕ್ಷ ಕೊಡುವುದು ಅಸಾಧ್ಯವೇನಲ್ಲ. ಇದರಿಂದ ದೇಶದ ಆರ್ಥಿಕತೆಗೆ ಯಾವುದೇ ಹೊರೆಯಾಗಲ್ಲ, ರಾಜಕೀಯ ಇಚ್ಛಾಶಕ್ತಿ ಬೇಕಷ್ಟೆ. ಕಾಂಗ್ರೆಸ್‌ ಕೊಟ್ಟ ಭರವಸೆ ಈಡೇರಿಸಲಿದೆ. ನುಡಿದಂತೆ ನಡೆಯಲಿದೆ.

*ಜಿಲ್ಲೆಯ ಮತದಾರರಿಗೆ ಏನೆಂದು ವಿನಂತಿಸಲು ಬಯಸುತ್ತೀರಿ?

–ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆ ತನ್ನಿ, ಕೊಟ್ಟ ಭರವಸೆ ಈಡೇರಿಸಲು ಆದ್ಯತೆ ನೀಡುತ್ತೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ನೇತೃತ್ವದ ಬಲಿಷ್ಠ ಕಾಂಗ್ರೆಸ್‌ ಸರ್ಕಾರ ಇದೆ, ಕೇಂದ್ರದಲ್ಲೂ ನಮ್ಮ ಸರ್ಕಾರ ರಚನೆಯಾಗಲಿದೆ. ಇದರಿಂದ ಜಿಲ್ಲೆಗೆ ಅಗತ್ಯ ಅನುದಾನ ತಂದು ಅಭಿವೃದ್ಧಿ ಮಾಡಲು ನನ್ನ ಮೇಲೆ ವಿಶ್ವಾಸ ಇಟ್ಟು ಮತಚಲಾಯಿಸಲು ಮನವಿ ಮಾಡುತ್ತೇನೆ.

ರಾಜು ಆಲಗೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.