ADVERTISEMENT

ಪ್ರಜಾವಾಣಿ ಸಂದರ್ಶನ | ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು: ಕೋಟ

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬಾಲಚಂದ್ರ ಎಚ್.
Published 6 ಜೂನ್ 2024, 6:12 IST
Last Updated 6 ಜೂನ್ 2024, 6:12 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಉಭಯ ಜಿಲ್ಲೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಗಳನ್ನು ಹಾಕಿಕೊಂಡಿದ್ದು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ವಿಭಿನ್ನ ಆಲೋಚನೆ, ಯೋಜನೆಗಳು ಇವೆಯೇ?

ಹೌದು, ಉಡುಪಿ ಹಾಗೂ ಚಿಕ್ಕಮಗಳೂರು ಭೌಗೋಳಿಕವಾಗಿ ಭಿನ್ನ ಪರಿಸರ ಹೊಂದಿರುವ ಜಿಲ್ಲೆಗಳು. ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕೆ, ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಹಾಗೆಯೇ ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಹಾಗೂ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕಿದೆ. ಎರಡೂ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿಸಬೇಕಿದೆ.

ADVERTISEMENT

ಉಭಯ ಜಿಲ್ಲೆಗಳ ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳುತ್ತೀರಿ?

ಮಲೆನಾಡು ಹಾಗೂ ಕರಾವಳಿಯ ಅಭಿವೃದ್ಧಿ ನಿಟ್ಟಿನಲ್ಲಿ ರಸ್ತೆ, ರೈಲ್ವೆ, ವಾಯು ಮಾರ್ಗ ಸಂಪರ್ಕ ವ್ಯವಸ್ಥೆ ಉತ್ತಮವಾಗಬೇಕಿದೆ. ಒಂದೆರಡು ದಿನಗಳಲ್ಲಿ ಎರಡೂ ಜಿಲ್ಲೆಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ಉಭಯ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗುವುದು. ಹಂತ ಹಂತವಾಗಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ದಶಕಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗಳು ನಿಮ್ಮ ಅವಧಿಯಲ್ಲಿ ಮುಗಿಯುವುದೇ ?

ಮೂಡಿಗೆರೆಯನ್ನು ಸಂಪರ್ಕಿಸುವ ಬೆಳ್ತಂಗಡಿ ಮಾರ್ಗದ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ತೊಡಕುಗಳಿರುವುದು ಗಮನಕ್ಕೆ ಬಂದಿದೆ. ಕಾಮಗಾರಿಗೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸಲಾಗುವುದು. ಹಾಗೆಯೇ ಮಲ್ಪೆ–ತೀರ್ಥಹಳ್ಳಿ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಅಲ್ಲಲ್ಲಿ ಭೂಸ್ವಾಧೀನ ಸಮಸ್ಯೆ ಎದುರಾಗಿದ್ದು ಬಗೆಹರಿಸಲಾಗುವುದು. ಕಲ್ಯಾಣಪುರ ಸಮೀಪದ ಸಂತೆಕಟ್ಟೆ ಒವರ್‌ಪಾಸ್‌ ಕಾಮಗಾರಿ ಪೂರ್ಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ಕೇಂದ್ರದ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬ ಆರೋಪಗಳಿವೆ?

ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆ ಬಡವರು ಹೋದರೆ ಬೆಡ್‌ಗಳಿಲ್ಲ ಎಂದು ವಾಪಸ್‌ ಕಳಿಸುತ್ತಿರುವ ದೂರುಗಳಿವೆ. ಈ ಸಂಬಂಧ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಆಯುಷ್ಮಾನ್ ಯೋಜನೆಯಡಿ ಅರ್ಹರಿಗೆ ₹5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು.

ಸಂಸದರು ಮತದಾರರ ಕೈಗೆ ಸಿಗುವುದಿಲ್ಲ ಎಂಬ ಆರೋಪಗಳಿವೆ?

ಸಂಸದರು ಮತದಾರರ ಕೈಗೆ ಸಿಗುವುದಿಲ್ಲ ಎಂಬುದು ಕೆಲವರ ಆರೋಪವಷ್ಟೆ. ಮತದಾರರು ಹಾಗೂ ಜನಪ್ರತಿನಿಧಿಗಳ ಮಧ್ಯೆ ಯಾವತ್ತೂ ಅಂತರ ಇರಬಾರದು. ಗ್ರಾಮ ಪಂಚಾಯಿತಿ ಸದಸ್ಯನಿಂದ ಸಚಿವನಾಗುವವರೆಗೂ ಕಾರ್ಯಕರ್ತರ ಮಧ್ಯೆಯೇ ಇದ್ದೇನೆ. ಸಂಸದನಾದರೂ ಅಂತರ ಕಡಿಮೆಯಾಗುವುದಿಲ್ಲ.

ಗ್ಯಾರಂಟಿ ಪೈಪೋಟಿ ಮಧ್ಯೆಯೂ ದೊಡ್ಡ ಅಂತರದ ಗೆಲುವು ಸಿಗುತ್ತದೆ ಎಂಬ ನಿರೀಕ್ಷೆ ಇತ್ತೆ ?

ಪ್ರಚಾರ ಸಂದರ್ಭದಲ್ಲಿ ಜನರೊಂದಿಗೆ ಚರ್ಚಿಸುವಾಗ ‘ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದೇಶ ಸುಭದ್ರವಾಗಿರಬೇಕು, ಆರ್ಥಿಕತೆ ಸದೃಢವಾಗಿರಬೇಕು’ ಎಂಬ ಬಯಕೆಯನ್ನು ಮತದಾರರಲ್ಲಿ ಕಂಡಿದ್ದೆ. ಹಾಗಾಗಿ, ಗೆಲ್ಲುವ ನಿರೀಕ್ಷೆ ಇತ್ತು, ಆದರೆ ಇಷ್ಟೊಂದು ದೊಡ್ಡ ಅಂತರದ ಗೆಲುವು ಸಿಗಲಿದೆ ಎಂಬ ನಿರೀಕ್ಷೆ ಇರಲಿಲ್ಲ.

ಕೇಂದ್ರದಲ್ಲಿ ಸಚಿವ ಸ್ಥಾನ ನಿರೀಕ್ಷೆ ಇಟ್ಟುಕೊಂಡಿದ್ದೀರಾ ?

ಖಂಡಿತ ಇಲ್ಲ, ಸಂಸದ ಸ್ಥಾನದ ಇತಿಮಿತಿಯೊಳಗೆ ಶಕ್ತಿಮೀರಿ ಕೆಲಸ ಮಾಡುತ್ತೇನೆ. ಮತದಾರರ ಹಾಗೂ ಕೇಂದ್ರ ಸರ್ಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತೇನೆ.

ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳ್ಳುವಿರಾ ?

ಉಡುಪಿ ಜಿಲ್ಲೆಗೆ ನಿಶ್ಚಿತವಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು. ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಬೇಕಾದರೆ 10 ರಿಂದ 15 ಕಿ.ಮೀ ಅಂತರದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಇರಬೇಕು ಎಂಬ ನಿಯಮವಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಜಾಗ ಗುರುತಿಸಿ ಕೇಂದ್ರದ ಮುಂದೆ ಪ್ರಸ್ತಾವ ಸಲ್ಲಿಸಲಾಗುವುದು.

ಪ್ರತಿಭಾ ಪಲಾಯನ ತಡೆಯಲು ಕ್ರಮ ಕರಾವಳಿ ಹಾಗೂ ಮಲೆನಾಡಿನಲ್ಲಿ ಕೇಂದ್ರ ಸರ್ಕಾರದ ಸಹಯೋಗ ಹಾಗೂ ಸಹಕಾರದ ಉದ್ಯಮಗಳ ಸ್ಥಾಪನೆ ಮಾಡುವ ಯೋಚನೆ ಇದೆ. ಮಾಹಿತಿ ತಂತ್ರಜ್ಞಾನ ಸಂಬಂಧಿ ಕಂಪೆನಿಗಳ ಸ್ಥಾಪನೆ ಹಾಗೂ ಕೈಗಾರಿಕೆಗಳ ಸ್ಥಾಪನೆಯ ಮೂಲಕ ಉದ್ಯೋಗಗಳನ್ನು ಸೃಷ್ಟಿಸಿ ಎರಡೂ ಜಿಲ್ಲೆಗಳ ಯುವಜನತೆಯ ಪ್ರತಿಭಾ ಪಲಾಯನವನ್ನು ತಡೆಯಲಾಗುವುದು. ಕರಾವಳಿಯಲ್ಲಿ ಸರ್ಕಾರಿ ಉದ್ಯೋಗಗಳತ್ತ ಯುವಜನರ ಆಸಕ್ತಿ ಕಡಿಮೆ ಇದ್ದು ಈ ನಿಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಚಿಂತನೆ ಇದೆ.
–ಕೋಟ ಶ್ರೀನಿವಾಸ ಪೂಜಾರಿ ಸಂಸದ

ಹಿಂದಿ ಯಾವಾಗ ಕಲಿಯುತ್ತೀರಿ?

ಸಂಸದರಿಗೆ ಕಡ್ಡಾಯವಾಗಿ ಹಿಂದಿ ಭಾಷೆ ಬರಬೇಕು ಎಂಬ ನಿಯಮವಿಲ್ಲ. ಬಹಳಷ್ಟು ಸಂಸದರಿಗೆ ಹಿಂದಿ ಬರುವುದಿಲ್ಲ. ಸಂಸತ್‌ನಲ್ಲಿ ಹಿಂದಿ ಭಾಷೆಯಲ್ಲೇ ಮಾತನಾಡಬೇಕು ಎಂಬ ಒತ್ತಾಯವೂ ಇರುವುದಿಲ್ಲ. ಹಾಗಾಗಿ ನಿಧಾನವಾಗಿ ಹಿಂದಿ ಕಲಿಯುತ್ತೇನೆ. –ಕೋಟ ಶ್ರೀನಿವಾಸ ಪೂಜಾರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.