ADVERTISEMENT

ಸಂದರ್ಶನ | ಮಲ್ಲೇಶ್‌ ಬಾಬು ಸಪ್ಪೆ, ಮುನಿಸ್ವಾಮಿ ಕಿರಿಕ್ಕು...: ಕೆ.ವಿ.ಗೌತಮ್‌

ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ ಸಂದರ್ಶನ

ಕೆ.ಓಂಕಾರ ಮೂರ್ತಿ
Published 23 ಏಪ್ರಿಲ್ 2024, 6:47 IST
Last Updated 23 ಏಪ್ರಿಲ್ 2024, 6:47 IST
<div class="paragraphs"><p>ಎಂ.ಮಲ್ಲೇಶ್‌ ಬಾಬು ಮತ್ತು ಕೆ.ವಿ.ಗೌತಮ್‌</p></div>

ಎಂ.ಮಲ್ಲೇಶ್‌ ಬಾಬು ಮತ್ತು ಕೆ.ವಿ.ಗೌತಮ್‌

   

ಗೌತಮ್‌ ಹೊರಗಿನವರು, ಆಂಧ್ರದಿಂದ ಬಂದಿದ್ದಾರೆ. ಕ್ಷೇತ್ರದ ಪರಿಚಯವಿಲ್ಲ ಎಂಬುದಾಗಿ ಜೆಡಿಎಸ್‌–ಬಿಜೆಪಿಯವರು ಪ್ರಚಾರ ಕೈಗೊಂಡಿದ್ದಾರಲ್ಲ?

ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಹೇಳಿಕೊಳ್ಳಲು ಯಾವುದೇ ಸಾಧನೆ ಇಲ್ಲ. ಹೀಗಾಗಿ, ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಇಡೀ ಭಾರತ ಒಂದು ಎನ್ನುವವರೇ ಈಗ ಆಂಧ್ರ, ಬೆಂಗಳೂರು ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ತಾತ, ತಂದೆ ರಾಜ್ಯದವರು ಎಂಬುದಕ್ಕೆ ಪುರಾವೆಗಳಿವೆ. ಹತಾಶೆಯಿಂದ ಏನೇನೋ ಮಾತನಾಡುತ್ತಾರೆ. ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಸಪ್ಪೆ, ಸಂಸದ ಮುನಿಸ್ವಾಮಿ ಬರೀ ಕಿರಿಕ್ಕು.

ADVERTISEMENT

ಕೆ.ಎಚ್‌.ಮುನಿಯಪ್ಪ ಹಾಗೂ ಅವರ ಬೆಂಬಲಿಗರನ್ನು ನಿರ್ಲಕ್ಷಿಸಲಾಗುತ್ತಿದೆಯೇ?

ಮುನಿಯಪ್ಪ ಬೆಂಬಲಿಗರೂ ಕಾಂಗ್ರೆಸ್‌ನವರೇ. ಮುನಿಯಪ್ಪ ಅವರು ನಾಲ್ಕೈದು ಬಾರಿ ಪ್ರಚಾರಕ್ಕೆ ಬಂದಿದ್ದಾರೆ. ತಮ್ಮ ಬೆಂಬಲಿಗರು, ಮುಖಂಡರ ಸಭೆ ನಡೆಸಿ ಕಾಂಗ್ರೆಸ್‌ ಬೆಂಬಲಿಸುವಂತೆ ಸೂಚಿಸಿದ್ದಾರೆ. ಅವರು ಕೇವಲ ಕೋಲಾರ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ರಾಜ್ಯದಾದ್ಯಂತ ಓಡಾಡಿ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟದ ಸವಾಲು ಮೆಟ್ಟಿ ನಿಲ್ಲಲು ತಮಗೆ ಸಾಧ್ಯವೇ?

ಕೋಲಾರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಕಾರಣಾಂತರಗಳಿಂದ ಬಿಜೆಪಿ ಸಂಸದ ಗೆದ್ದಿದ್ದಾರೆ. ಅವರಿಂದ ಜನ ಬಹಳ ಕಷ್ಟ ಅನುಭವಿಸಿದ್ದಾರೆ. ಧರ್ಮಗಳ ನಡುವೆ ಬೆಂಕಿ ಹಚ್ಚಿದ್ದಾರೆ. ಕೋಲಾರ ಜಿಲ್ಲೆ ಶಾಂತಯುತವಾಗಿರಲು ಕಾಂಗ್ರೆಸ್‌ ಸೂಕ್ತವೆಂದು ಜನ ನಿರ್ಧರಿಸಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದು ನನಗೆ ಲಾಭ ತಂದುಕೊಡಲಿದೆ. ಎರಡೂ ಪಕ್ಷಗಳ ನಡುವೆ ತಳಮಟ್ಟದಲ್ಲಿ ಹೊಂದಾಣಿಕೆ ಇಲ್ಲ

ರಾಜಧಾನಿ ಬೆಂಗಳೂರಿಗೆ ಹತ್ತಿರವಿದ್ದರೂ ಕೋಲಾರ ಜಿಲ್ಲೆ ಅಭಿವೃದ್ಧಿ ಆಗಿಲ್ಲ, ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜನ ಏಕೆ ನಿಮ್ಮ ಮೇಲೆ ಭರವಸೆ ಇಟ್ಟುಕೊಳ್ಳಬೇಕು?

ಆಸ್ಪತ್ರೆ, ಉದ್ಯೋಗ ಸೇರಿದಂತೆ ಕೋಲಾರದ ಜನ ಹೆಚ್ಚು ಅವಲಂಬಿತವಾಗಿರುವುದು ಬೆಂಗಳೂರಿನ ಮೇಲೆಯೇ. ಒಂದೂವರೆ ತಾಸು ಪಯಣ ಅಷ್ಟೆ. ಅಭಿವೃದ್ಧಿ ಆಗಿರಲಿಲ್ಲ ಎಂಬುದು ನಿಜ. ಆದರೆ, ಮಾಲೂರು ಈಗ ಬೆಂಗಳೂರಿನ ರೀತಿ ಅಭಿವೃದ್ಧಿ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ಹೆಚ್ಚು ಅಭಿವೃದ್ಧಿ ಮಾಡಬಹುದು.

ಗ್ಯಾರಂಟಿ ಯೋಜನೆಗಳಿಂದಲೇ ಗೆಲ್ಲಬಹುದು ಅಂದುಕೊಂಡಿದ್ದೀರಾ?

ಗ್ಯಾರಂಟಿಗಳಿಂದ ಖಂಡಿತ ನಮಗೆ ಲಾಭವಾಗಲಿದೆ. ಏಕೆಂದರೆ ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಕ್ರಮದಿಂದಾಗಿ ಜನ ತತ್ತರಿಸಿ ಹೋಗಿದ್ದರು. ಅಂಥವರಿಗೆ ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದೆ. ಗ್ಯಾರಂಟಿಗಳು ನನ್ನ ಕೈ ಹಿಡಿಯಲಿವೆ.

 ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

ಮೊದಲ ಆದ್ಯತೆ ನೀರಾವರಿ ಯೋಜನೆ ಅನುಷ್ಠಾನ ಮಾಡುವುದು. ಈ ಸಂಬಂಧ ರಾಷ್ಟ್ರೀಯ ನೀತಿ ಅಗತ್ಯವಿದೆ. ಆಗ ಯಾವುದೇ ಅಡೆತಡೆ ಇರಲ್ಲ. ಕೆ.ಸಿ.ವ್ಯಾಲಿ ನೀರಿನ ಎರಡನೇ ಹಂತದ ಯೋಜನೆ ಅನುಷ್ಠಾನಗೊಳಿಸಲಾಗುವುದು. ತ್ವರಿತಗತಿಯಲ್ಲಿ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಿ ಕುಡಿಯುವ ನೀರು ಕೊಡಿಸುವೆ. ಟೊಮೆಟೊ ಹಾಗೂ ಮಾವಿನ ಬೆಳೆಗಾರರು ಕ್ಷೇತ್ರದಲ್ಲಿ ಹೆಚ್ಚು ಇದ್ದಾರೆ. ಅವರಿಗೆ ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಮಾಡಿಕೊಡಬೇಕಿದೆ. ಕೆಜಿಎಫ್‌ನಲ್ಲಿರುವ ಬಿಜಿಎಂಎಲ್‌ ಜಾಗದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಬೇಕು, ಐಐಟಿ ತರುವ ಆಸೆಯೂ ಇದೆ. ಯುವಕರಿಗೆ ಉದ್ಯೋಗ ಕೊಡಿಸಲು ಕೈಗಾರಿಕಾ ಕಾರಿಡಾರ್‌ಗಳನ್ನು ತ್ವರಿತವಾಗಿ ಮುಗಿಸಬೇಕು. ಮೂಲಸೌಲಭ್ಯ ಹೆಚ್ಚಿಸಿಕೊಂಡರೆ ಜಿಲ್ಲೆಗೂ ಸಾಫ್ಟ್‌ವೇರ್‌ ಕಂಪನಿಗಳನ್ನು ತರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.