ADVERTISEMENT

ಸಂದರ್ಶನ | ಅಭಿವೃದ್ಧಿ ಮುನ್ನೋಟದೊಂದಿಗೆ ಮತಯಾಚನೆ: ಜಯಪ್ರಕಾಶ್ ಹೆಗ್ಡೆ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಬಾಲಚಂದ್ರ ಎಚ್.
Published 23 ಏಪ್ರಿಲ್ 2024, 6:26 IST
Last Updated 23 ಏಪ್ರಿಲ್ 2024, 6:26 IST
ಕೆ. ಜಯಪ್ರಕಾಶ್‌ ಹೆಗ್ಡೆ 
ಕೆ. ಜಯಪ್ರಕಾಶ್‌ ಹೆಗ್ಡೆ    
ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲವೇ ಇಲ್ಲ. ಕಾಂಗ್ರೆಸ್‌ ಗ್ಯಾರಂಟಿಗಳ ಅಲೆ ಇದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್‌ ಹೆಗ್ಡೆ ಪ್ರತಿಪಾದಿಸಿದರು

ಬಿಜೆಪಿಯವರು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರಲ್ಲ?

ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ಪ್ರಧಾನಿ ಮೋದಿ ಅವರಲ್ಲ. ಇಲ್ಲಿ ಸ್ಪರ್ಧೆ ನಡೆಯುತ್ತಿರುವುದು ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ ಸಹಿತ 9 ಅಭ್ಯರ್ಥಿಗಳ ನಡುವೆ. ಕಣದಲ್ಲಿ ಇಲ್ಲದವರನ್ನು ಮುಂದಿಟ್ಟುಕೊಂಡು ಮತ ಕೇಳುವುದು ಸರಿಯಲ್ಲ. ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಮತದಾರರು ಪ್ರಶ್ನಿಸುವುದು ಮೋದಿ ಅವರನ್ನಲ್ಲ; ಗೆದ್ದ ಅಭ್ಯರ್ಥಿಯನ್ನು.

ನೀವು ಯಾರ ಹೆಸರಿನಲ್ಲಿ ಮತ ಕೇಳುತ್ತೀದ್ದೀರಿ ?

ADVERTISEMENT

ಶಾಸಕ, ಸಚಿವ, ಸಂಸದನಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ. ಜೆ.ಎಚ್‌. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬೆನ್ನುಬಿದ್ದು ಉಡುಪಿ ಜಿಲ್ಲೆ ರಚನೆಗೆ ಶ್ರಮಿಸಿದ್ದೇನೆ. ಮುಂದಿನ 5 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮುನ್ನೋಟವನ್ನು ಮತದಾರರ ಮುಂದಿಟ್ಟು ಮತಯಾಚನೆ ಮಾಡುತ್ತಿದ್ದೇನೆ.

ಬಿಜೆಪಿಯ ಹಿಂದುತ್ವಕ್ಕೆ ನಿಮ್ಮ ಪ್ರತ್ಯಸ್ತ್ರ?

ನಾನು ಕೂಡ ಹಿಂದೂ. ದೇವಸ್ಥಾನಗಳ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ದೇಗುಲಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಆದರೆ, ಹಿಂದುತ್ವವನ್ನು ಎಂದೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ, ಬಳಸಿಕೊಳ್ಳಲೂಬಾರದು. ಅಭಿವೃದ್ಧಿ ವಿಚಾರ ಮಾತ್ರ ಚುನಾವಣೆಯಲ್ಲಿ ಮುನ್ನೆಲೆಗೆ ಬರಬೇಕು.

ಗ್ಯಾರಂಟಿ ಯೋಜನೆಗಳು ಕೈಹಿಡಿಯಲಿವೆಯೇ?

ಖಂಡಿತ, ವಿಧಾನಸಭಾ ಚುನಾವಣೆಯ ಸಂದರ್ಭ ಗ್ಯಾರಂಟಿಗಳ ಬಗ್ಗೆ ಮತದಾರರಿಗೆ ಸಂಪೂರ್ಣ ವಿಶ್ವಾಸ ಇರಲಿಲ್ಲ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ಮೇಲೆ ಜನರು ಸಂತುಷ್ಟರಾಗಿದ್ದಾರೆ. ಪ್ರಚಾರಕ್ಕೆ ಹೋದೆಲ್ಲೆಲ್ಲ ಗ್ಯಾರಂಟಿಗಳ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ‘ಗ್ಯಾರಂಟಿ’ ಮತಗಳಾಗಿ ಪರಿವರ್ತನೆಯಾಗುವ ವಿಶ್ವಾಸವಿದೆ.

ಮೀನುಗಾರಿಕಾ ಕ್ಷೇತ್ರ ಕಾರ್ಪೊರೇಟ್‌ ತೆಕ್ಕೆಗೆ ಹೋಗುವ ಆತಂಕವಿದ್ದು ನಿಮ್ಮ ನಿಲುವೇನು?

ಹಿಂದೆಯೂ ಮೀನುಗಾರಿಕಾ ಕ್ಷೇತ್ರವನ್ನು ಉದ್ಯಮಿಗಳಿಗೆ ಮುಕ್ತವಾಗಿಸುವ ಪ್ರಯತ್ನ ನಡೆದಾಗ ತೀವ್ರವಾಗಿ ವಿರೋಧಿಸಿದ್ದೆ. ನೈಜ ಮೀನುಗಾರರು ಮಾತ್ರ ಕಡಲಿನ ಮಾಲೀಕರು. ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿ ನೆಪದಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ನಾಶಮಾಡುವ ದುಸ್ಸಾಹಕ್ಕೆ ಯಾವ ಸರ್ಕಾರವೂ ಕೈಹಾಕಬಾರದು. ಮೀನುಗಾರರ ಬಗ್ಗೆ ಕಾಳಜಿ ಇದ್ದರೆ, ಡೀಸೆಲ್ ಸಬ್ಸಿಡಿ ಹೆಚ್ಚಿಸಲಿ, ಬಡ್ಡಿರಹಿತ ಸಾಲ ನೀಡಲಿ.

ಕ್ಷೇತ್ರದಲ್ಲಿ ಮೋದಿ ಅಲೆ ಇದೆಯೇ?

ಮೋದಿ ಅವರ ಅಲೆ ಇಲ್ಲ; ಬದಲಾಗಿ ಕಾಂಗ್ರೆಸ್‌ ಗ್ಯಾರಂಟಿಗಳ ಅಲೆ ಇದೆ. ಗ್ಯಾರಂಟಿ ಅಲೆಯ ಮೇಲೆ ಗೆದ್ದು ಬರುವ ವಿಶ್ವಾಸವಿದೆ.

ಸಂಸದರಾದವರಿಗೆ ಹಿಂದಿ ಭಾಷೆ ಬರಲೇಬೇಕೇ?

ಖಂಡಿತ ಇಲ್ಲ, ನಾನು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ಕನ್ನಡ ಭಾಷೆಯಲ್ಲಿ. ಸದನದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ತರ್ಜುಮೆ ಮಾಡಲು ಅನುವಾದಕರು ಸಹ ಇರುತ್ತಾರೆ. ಅಧಿಕಾರಿಗಳ ಬೆನ್ನುಬಿದ್ದು ಕೆಲಸ ಮಾಡಿಸಿಕೊಳ್ಳಲು ಹಿಂದಿ ಭಾಷೆ ಬಂದರೆ ಒಳಿತು ಎಂಬ ನನ್ನ ಹೇಳಿಕೆಗೆ ರಾಜಕೀಯ ಬಣ್ಣ ನೀಡಿ ಅಪಪ್ರಚಾರ ಮಾಡಲಾಯಿತು.

ಸಂಸದರಾದರೆ ಆದ್ಯತೆ ಮೇಲೆ ಮಾಡುವ ಕೆಲಸಗಳು ಯಾವುವು?

ಹಿಂದೆ 20 ತಿಂಗಳು ಸಂಸದನಾಗಿದ್ದ ಅವಧಿಯಲ್ಲಿ ಉಡುಪಿ–ಚಿಕ್ಕಮಗಳೂರು ಜಿಲ್ಲೆಗೆ ಮಂಜೂರಾಗಿದ್ದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು 10 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಸಂಸದನಾದರೆ ಮೂರು ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುತ್ತೇನೆ. ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು, ವಾರಾಹಿ ಯೋಜನೆ ಪೂರ್ಣ ಅನುಷ್ಠಾನಕ್ಕೆ ಒತ್ತು ನೀಡುತ್ತೇನೆ.

ಭವಿಷ್ಯದ ಯೋಜನೆಗಳೇನು?

ಬೈಂದೂರು ತಾಲ್ಲೂಕಿನ ಒತ್ತಿನೆಣೆಯಲ್ಲಿ ಏರ್‌ಪೋರ್ಟ್‌ ನಿರ್ಮಾಣ ಸಂಬಂಧ ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ವಿ.ಎಸ್‌.ಆಚಾರ್ಯ ಅವರಿಗೆ ವರದಿ ಸಲ್ಲಿಸಲಾಗಿತ್ತು. ವಿ.ಎಸ್‌.ಆಚಾರ್ಯರ ನಿಧನದ ನಂತರ ಏರ್‌ಪೋರ್ಟ್ ಪ್ರಸ್ತಾವ ನನೆಗುದಿಗೆ ಬಿತ್ತು. ಒತ್ತಿನೆಣೆಯಲ್ಲಿ ಉಡಾಣ್‌ ಯೋಜನೆಯಡಿ ಏರ್‌ಸ್ಟ್ರಿಪ್‌ ನಿರ್ಮಾಣವಾದರೆ, ಕುಂದಾಪುರ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗೂ ಅನುಕೂಲವಾಗಲಿದೆ. ಕರಾವಳಿಯ ಆರ್ಥಿಕ ಅಭಿವೃದ್ಧಿ ವೇಗ ಪಡೆಯಲಿದೆ. ಸಂಸದನಾದರೆ ಆದ್ಯತೆ ಮೇಲೆ ವಿಮಾನ ನಿಲ್ದಾಣ ಸ್ಥಾಪನೆಗೆ ಶ್ರಮಿಸುತ್ತೇನೆ. ವಾರಾಹಿ ಯೋಜನೆ ಕಾಮಗಾರಿ ಪೂರ್ಣಕ್ಕೆ ಒತ್ತು ನೀಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.