ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಬಿಜೆಪಿ ಸೇರ್ಪಡೆಯಾದರು. ನಾಲ್ಕು ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಐದನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿರುವ ಪಿ.ಸಿ. ಗದ್ದಿಗೌಡರ ‘ಪ್ರಜಾವಾಣಿ‘ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
* ಪ್ರಚಾರ ಹೇಗೆ ನಡೆದಿದೆ?
ಪ್ರಚಾರ ಬಹಳ ಚೆನ್ನಾಗಿ ನಡೆದಿದೆ. ಜನರಿಂದ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕ್ಷೇತ್ರದ ಎಲ್ಲ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದೇನೆ. ಇದು ದೇಶದ ಚುನಾವಣೆಯಾಗಿದೆ. ಜನರಲ್ಲಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ತವಕ ಕಾಣುತ್ತಿದೆ.
* ನಿರೀಕ್ಷಿಸಿದಷ್ಟು ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪದ ಬಗ್ಗೆ ಏನು ಹೇಳುವಿರಿ?
ಜಿಲ್ಲಾ ಪುನರ್‌ವಿಂಗಡಣೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 20 ವರ್ಷಗಳಲ್ಲಿ ಸಂಸದನಾಗಿ ಏನು ಮಾಡಬೇಕಿತ್ತೋ, ಅದನ್ನು ಮಾಡಿ ತೋರಿಸಿದ್ದೇನೆ. ಚುನಾವಣೆ ಬಂದಾಗಲೆಲ್ಲ ವಿರೋಧಿಗಳು ಟೀಕೆ ಮಾಡುತ್ತಾರೆ. ಆದರೆ, ಜಿಲ್ಲೆಗೆ ಏನು ಮಾಡಬೇಕಿತ್ತು ಎಂಬುದನ್ನು ಹೇಳುವುದಿಲ್ಲ.
ಕುಡಚಿ–ಬಾಗಲಕೋಟೆ ರೈಲ್ವೆ ಮಾರ್ಗ ವಿಳಂಬವನ್ನು ಆಗಾಗ ಪ್ರಸ್ತಾಪಿಸಲಾಗುತ್ತದೆ. ಆದರೆ, ಅದಕ್ಕೆ ಬೇಕಾದ ಭೂಸ್ವಾಧೀನ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಳಂಬದಿಂದಾಗಿ ಮಾಡಿದ್ದರಿಂದ ವಿಳಂಬವಾಯಿತು. ಬಿ.ಎಸ್.ವೈ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಭೂಸ್ವಾಧೀನ ಪೂರ್ಣಗೊಳಿಸಲಾಗಿದ್ದು, ಬಾಗಲಕೋಟೆ–ಕುಡಚಿಯವರೆಗೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಗಿದೆ.
₹969 ಕೋಟಿ ವೆಚ್ಚದಲ್ಲಿ ಬಾಣಾಪುರ–ಗದ್ದನಕೇರಿ ಹೆದ್ದಾರಿ, ಶಿರೂರದಿಂದ ಗದ್ದನಕೇರಿವರೆಗೆ ಚತುಷ್ಪತ ರಸ್ತೆಯಾಗಿ ಅಗಲೀಕರಣ, ವಿಜಯಪುರ–ಹುಬ್ಬಳ್ಳಿ ರಸ್ತೆ ಅಗಲೀಕರಣ ಮಾಡಲಾಗಿದೆ. ಭಾರತ ಮಾಲಾದಡಿ ಪಣಜಿ– ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ. ಕೊಣ್ಣೂರು ಹತ್ತಿರ ಮಲಪ್ರಭಾ ನದಿಗೆ ಸೇತುವೆ ನಿರ್ಮಿಸಲಾಗಿದೆ.
* ಯಾವ ಭರವಸೆಗಳನ್ನು ಈಡೇರಿಸಿದ್ದೀರಿ?
ನೇಕಾರರಿಗಾಗಿ ಏಳು ಕ್ಲಸ್ಟರ್ ಆರಂಭಿಸಲಾಗಿದೆ. ಸಬ್ಸಿಡಿ ಕೊಡಿಸುವ ಕೆಲಸ ಮಾಡಲಾಗಿದೆ. ಬಾಗಲಕೋಟೆ ರೈಲ್ವೆ ಸ್ಟೇಷನ್ ಉನ್ನತೀಕರಣ ಮಾಡಲಾಗಿದೆ. ಬಾಗಲಕೋಟೆ, ಬಾದಾಮಿಯಲ್ಲಿ ಮೇಲ್ಸೇತುವೆ ನಿರ್ಮಾಣ. ಕೇಂದ್ರೀಯ ವಿದ್ಯಾಲಯ, ಪಾಸ್ ಪೋರ್ಟ್ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಎಫ್.ಎಂ. ಮರು ಪ್ರಸಾರ ಕೇಂದ್ರ ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಕೊಣ್ಣೂರು ಬಳಿ ಮಲಪ್ರಭಾ ನದಿಗೆ ಸೇತುವೆ ನಿರ್ಮಾಣ ಮಾಡಲಾಗಿದೆ. ಜನೌಷಧಿ ಕೇಂದ್ರಗಳಿಂದ ಕಡಿಮೆ ವೆಚ್ಚದಲ್ಲಿ ಔಷಧ, ಉಜ್ವಲ್ ಯೋಜನೆಯಡಿ ಉಚಿತ ಸಿಲಿಂಡರ್, ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ಹೃದಯ, ಅಮೃತ ಯೋಜನೆಯಡಿ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗೆ ಕೇಂದ್ರದ ಹಲವು ಯೋಜನೆಗಳ ಲಾಭ ಜನರಿಗೆ ತಲುಪಿದೆ.
* ಪಕ್ಷದೊಳಗಿನ ಅಸಮಾಧಾನ ಶಮನವಾಗಿದೆಯಾ?
ಪಕ್ಷದೊಳಗೆ ಯಾವ ಅಸಮಾಧಾನವಿಲ್ಲ. ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಬಾದಾಮಿ ಸೇರಿದಂತೆ ಎಲ್ಲೆಡೆಯೂ ನಾಯಕರು ಒಗ್ಗಟ್ಟಾಗಿ ಪ್ರಚಾರ ಮಾಡುತ್ತಿದ್ದಾರೆ. ಮೋದಿ ಪ್ರಧಾನಿಯಾಗಿಸಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದೇವೆ. ಎಲ್ಲ ನಾಯಕರು, ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ.
*ಗದ್ದಿಗೌಡರ ಬೇರೆ, ಬೇರೆ ಅಲೆಯಲ್ಲಿ ಗೆದ್ದಿದ್ದಾರೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?
ವಿರೋಧಿಗಳು ಹಾಗೆ ತಿಳಿದುಕೊಂಡಿದ್ದಾರೆ. ಪ್ರಾಮಾಣಿಕನಾಗಿ ಜನರ ಸೇವೆ ಮಾಡಿದ್ದೇನೆ. ಮೆಚ್ಚಿಕೊಂಡು ಅವರು ಗೆಲ್ಲಿಸಿದ್ದಾರೆ. ವ್ಯವಹಾರ ಮಾಡಿದರೆ ಜನರಿಗೆ ಸಮಯ ನೀಡಲಾಗುವುದಿಲ್ಲ ಎಂದು ಯಾವುದೇ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ. ನಮ್ಮ ಕುಟುಂಬದವರ‍್ಯಾರು ರಾಜಕಾರಣಕ್ಕೆ ಬಂದಿಲ್ಲ. ಪಕ್ಷದ ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡಿದರೆ, ಜನರು ನನಗೂ ಬೆಂಬಲಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.