ಬೆಂಗಳೂರು: ‘ರಾಷ್ಟ್ರವನ್ನು ಮುನ್ನಡೆಸಲು ಎಲ್ಲರೂ ತಪ್ಪದೇ ಮತ ಚಲಾಯಿಸೋಣ. ಯಾವುದೇ ಆಮಿಷಗಳಿಗೆ ಒಳಗಾಗದೇ ಸ್ವಇಚ್ಛೆಯಿಂದ ಮತದಾನ ಮಾಡೋಣ’ ಎಂದು ಚುನಾವಣಾ ರಾಯಭಾರಿ ರಮೇಶ್ ಅರವಿಂದ್ ತಿಳಿಸಿದರು.
ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು? ಏನೇನು ಕೆಲಸ ಮಾಡಿದ್ದಾರೆ? ಅವರ ಹಿನ್ನೆಲೆ ಏನು? ಹಿಂದೆ ಅಭ್ಯರ್ಥಿಯಾಗಿದ್ದರೆ, ಅವರು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ ಎಂದು ಪರಿಶೀಲಿಸಬೇಕು. ಆಲೋಚಿಸಿ ಮತದಾನ ಮಾಡಬೇಕು. ಯಾರೋ ಹೇಳಿದ ಮಾತು ಕೇಳಿ ಮತದಾನ ಮಾಡಬಾರದು’ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳು ‘ತಪ್ಪದೇ ಮತದಾನ ಮಾಡುತ್ತೇವೆ’ ಎಂದು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿ ರಮಾಮಣಿ, ಬಿಎಂಎಸ್ ಕಾಲೇಜಿನ ಪ್ರಾಚಾರ್ಯೆ ವಸುಂಧರಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.