ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ (ಆಲೂರು ಮಲ್ಲು) ಅವರಿಗೆ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಹೇಳುವ ಆಡಿಯೊ ತುಣುಕು ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿದೆ.
'ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೋಡ್ತೀವಿ. ಮೊದಲು ವಾಪಸ್ ತಗೊ' ಎಂದು ಸೋಮಣ್ಣ ಹೇಳುವುದು ಆಡಿಯೊದಲ್ಲಿದೆ.
ಆಲೂರು ಮಲ್ಲು ಅವರಿಗೆ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದ್ದು, ನಾಮಪತ್ರ ಸಲ್ಲಿಸಿದ್ದರು. ಮಲ್ಲು ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಅವರು ನಾಮಪತ್ರ ವಾಪಸ್ ತೆಗೆದುಕೊಂಡಿಲ್ಲ.
ಉಮೇದುವಾರಿಕೆ ವಾಪಸ್ ಪಡೆಯಲು ಸೋಮವಾರ ಅವಕಾಶ ನೀಡಲಾಗಿತ್ತು. ಸೋಮಣ್ಣ ಅವರು ವರುಣ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದರು. ಸೋಮವಾರ ಬೆಂಬಲಿಗರೊಬ್ಬರು ಮಲ್ಲು ಅವರಿಗೆ ಕರೆ ಮಾಡಿ, ಸೋಮಣ್ಣ ಬಳಿ ಮಾತನಾಡಿಸಿದ್ದಾರೆ.
ಆಡಿಯೊದಲ್ಲಿ ಏನಿದೆ?: ‘ಏಯ್ ಮೊದ್ಲು ತಗೊಳಯ್ಯ, ಆಮೇಲೆ ಏನ್ ಬೇಕೋ ಮಾಡ್ತೀನಿ. ಏನಯ್ಯಾ ನೀನು, ಯಾವಂದೋ ಮಾತು ಕೇಳ್ಕೊಂಡು.... ಮಲ್ಲು ನೀನು ನನಗೆ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ ಮಗನ ಮಾತು ಕೇಳಕ್ಕೆ ಹೋಗಬೇಡ. ನಿನಗೆ ಬದುಕೋದಕ್ಕೆ ಏನು ಬೇಕೋ ಎಲ್ಲವೂ ಮಾಡ್ತೀನಿ. ಅಣ್ಣ ಇದ್ದಾರೆ. ಮೊದ್ಲು ವಾಪಸ್ ತಗೋ. ಆಮೇಲೆ ಬಾಕಿದ್ ಮಾತಾಡ್ತೀನಿ. ನನ್ನ ಮಾತು ಕೇಳು. ನಿನ್ನ ಹಿತ ಕಾಪಾಡೋದು ನನ್ನ ಜವಾಬ್ದಾರಿ. ಸುದೀಪಣ್ಣನ ಜವಾಬ್ದಾರಿ. ಮಲ್ಲು, ಮರಮ್‌ಕಲ್, ನಾನು, ಸುದೀಪಣ್ಣ ಮೂರು ಜನ ಇರ್ತೀವಿ. ಉಪ್ಪಾರರ ದೇವಸ್ಥಾನದಲ್ಲಿ ಇದ್ದೇನೆ. ಮೊದಲು ಆ ಕೆಲಸ ಮಾಡು. ನಿನಗೆ ಕೈ ಮುಗಿತೀನಿ. ನಿನಗೆ ಸ್ಕೈ ಈಸ್ ದ ಲಿಮಿಟ್’ ಎಂದು ಸೋಮಣ್ಣ ಹೇಳುತ್ತಿರುವುದು ಆಡಿಯೊ ತುಣುಕಿನಲ್ಲಿದೆ.
‘ಇಲ್ಲಣ್ಣ, ನಾನು ಯಾರ ಮಾತು ಕೇಳ್ಕೊಂಡು ನಿಂತಿಲ್ಲ. ವಾಪಸ್ ತಗೆಯೋದಕ್ಕೆ ಆಗಲ್ಲಣ್ಣ. ನಿಮ್ಮ ಜೊತೆಗೇ ಇರ್ತೀನಿ. ನೀವು ಹೇಳ್ದಂಗೆ ಇರ್ತೀನಿ ಬಿಡಣ್ಣ. ಮುಂದೆ ನೀವೇ ಮುಖ್ಯಮಂತ್ರಿ ಆಗಬೇಕು ಎಂದು ನಾನೂ ಬಯಸ್ತೀನಿ’ ಎಂದು ಆಲೂರು ಮಲ್ಲು ಹೇಳುವುದೂ ಕೇಳಿಸುತ್ತದೆ.
ಮತ್ತೆ ಮಾತು ಮುಂದುವರಿಸುವ ಸೋಮಣ್ಣ, ‘ಯಾವನೋ ಪೋಲಿ ನನ್ ಮಗನ ಮಾತು ಕೋಳ್ಕೊಂಡು... ಮೊದಲು ವಾಪಸ್ ತಗೋ. ಮಲ್ಲು... ಸರ್ಕಾರ ಬರ್ತದೆ. ಗೂಟದ ಕಾರು ಮಾಡಿ ಕೊಡ್ತೀವಿ. ಮೊದ್ಲು ತಗೊ, ದೇವರ ಮುಂದೆ ನಿಂತಿದ್ದೀವಿ. ಯಾರನ್ನೂ ಕೇಳೋಕ್ಕೆ ಹೋಗ್ಬೇಡ. ಜಿಟಿಜಿ ನಾವೆಲ್ಲ ಫ್ರೆಂಡ್ಸ್. ನಾವೆಲ್ಲ ಮಾತಾಡ್ಕೋತ್ತೀವಿ. ಮೊದ್ಲು ವಾಪಸ್ ತಗೊ. ಈಗ ಟೈಮಿಲ್ಲ’ ಎಂದು ಹೇಳುವುದು ತುಣುಕಿನಲ್ಲಿದೆ.
ಇನ್ನೆರಡು ಆಡಿಯೊ : ಈ ಆಡಿಯೊ ತುಣುಕಿನ ಜೊತೆಗೆ ಇನ್ನೆರಡು ತುಣುಕುಗಳೂ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ.
ಒಂದು ಆಡಿಯೊದಲ್ಲಿ ಮಾತನಾಡುವವರನ್ನು ಮಲ್ಲು ಅವರು ನಟರಾಜಣ್ಣ ಎಂದು ಸಂಭೋದಿಸುತ್ತಾರೆ.
‘ಏನ್ ಮಾಡಿದ್ರಿ’ ಎಂದು ನಟರಾಜ ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಮಲ್ಲು, ‘ಸಾಹೆಬ್ರೆ ತೆಗೆಯೋದಕ್ಕೆ ಆಗೋದಿಲ್ಲ. ಬೇಡ ಬಿಡಿ. ಪಕ್ಷದಲ್ಲಿ ಇರುವುದರಿಂದ ಆಗೋದಿಲ್ಲ. ನಾನು ನ್ಯೂಟ್ರಲ್ ಆಗ್ಬೇಕು. ಆಗ್ತೀನಿ ಬಿಡಿ’ ಎಂದು ಹೇಳುತ್ತಾರೆ.
‘ಈಗ ತೆಗೆಯೋದಾದ್ರೆ ಏನೂಂತ ಹೇಳಿ ಬಿಡಿ, ಮಾತನಾಡಿಸ್ತೇನೆ’ ಎಂದು ನಟರಾಜ ಹೇಳಿದಾಗ, ‘ಇಲ್ಲ ತೆಗ್ಯಕ್ಕಾಗಲ್ಲ. ಪಕ್ಷದಿಂದ ಹಾಕಿದ್ಮೇಲೆ ಹಿಂಸೆಯಾಗುತ್ತದೆ ಸಾಹೆಬ್ರೆ’ ಎಂದು ಮಲ್ಲು ಉತ್ತರಿಸುತ್ತಾರೆ.
ನಂತರ ಮಾತನಾಡುವ ಸುದೀಪ್ ಎಂಬುವವರು, ‘ಈಗ 50ಕ್ಕೆ ಒಪ್ಪಿಕೊಂಡಿದೆ. ಒಪ್ಪಿಸ್ಬುಟ್ಟು ವಿದ್‌ಡ್ರಾ ಮಾಡ್ಬಿಡಿ’ ಎನ್ನುತ್ತಾರೆ. ಇದಕ್ಕೆ ಮಲ್ಲು ಅವರು, ‘ವಿದ್‌ಡ್ರಾ ಮಾಡಿದ್ರೆ ಅವರು ಬೇಸರ ಮಾಡ್ಕೊತ್ತಾರೆ. ಕುಮಾರಣ್ಣ ಜೊತೆ ಮಾತನಾಡ್ಬುಟ್ಟು ಫೋನ್ ಮಾಡ್ಸೋಣ ತೊಂದರೆ ಇಲ್ಲ. ನ್ಯೂಟ್ರಲ್ ಆಗ್ಬೇಕು.. ಆಗ್ತೀನಿ ಅಣ್ಣ. ನಾನು ಕೆಲ್ಸನೇ ಮಾಡೋಕ್ಕೆ ಹೋಗಲ್ಲ’ ಎಂದು ಪ್ರತಿಕ್ರಿಯಿಸುತ್ತಾರೆ.
ಇನ್ನೊಂದು ಆಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ಮಲ್ಲು ಬಳಿ ‘ಸರ್ಕಾರ ಬರ್ತದೆ. ಆಮೇಲೆ ಜೆಡಿಎಸ್ ಪಕ್ಷನೇ ಇರಲ್ಲ. ನೀವು ಯಾಕೆ ತಲೆಕೆಡಿಸ್ಕೋತ್ತೀರಿ ನೀವು ಕಳೆದು ಹೋಗಬ್ಯಾಡ್ರಿ. ಒಳ್ಳೆ ಚಾನ್ಸ್. ಅವ್ರೇ ಮಾತಾಡಿದ್ದಾರೆ ದೇವಸ್ಥಾನದ ಮುಂದೆ ನಿಂತು. ತಲೆ ಕೆೆಡಿಸ್ಕೋಬೇಡ್ರಿ. ಸುಮ್ನೆ ಕಣ್ಮುಚ್ಚಿ ಯಾರಿಗೂ ಗೊತ್ತಾಗ್ದಂಗೆ ಅಲ್ಲಿ ವಿದ್‌ಡ್ರಾಲ್ ಕೊಟ್ಟು ಒಂದು ದಿನ ಎಲ್ಯಾದ್ರೂ ಹೋಗ್ಬಿಡ್ರಿ’ ಎಂದು ಸಲಹೆಯನ್ನೂ ನೀಡುತ್ತಾರೆ.
ಸೋಮಣ್ಣ ಕರೆ ಮಾಡಿರುವುದನ್ನು ಆಲೂರು ಮಲ್ಲು ದೃಢಪಡಿಸಿದ್ದಾರೆ.
'ಸೋಮಣ್ಣ ಕರೆ ಮಾಡಿ, ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದ್ದು ನಿಜ. ಆದರೆ, ನಾನು ಒಪ್ಪಿಕೊಂಡಿಲ್ಲ. ಪಕ್ಷದ ನಿರ್ಧಾರದಂತೆ ಸ್ಪರ್ಧಿಸಿದ್ದೇನೆ ಎಂದು ಹೇಳಿದೆ' ಎಂದು ಆಲೂರು ಮಲ್ಲು 'ಪ್ರಜಾವಾಣಿ'ಗೆ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.