ಸಹರಾನ್‌ಪುರ: ಸಹರಾನ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅವರಿಗೆ ಮತ ಹಾಕುವಂತೆ ದಲಿತ ಸಂಘಟನೆ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅಲಿಯಾಸ್ ರಾವಣ ಕರೆ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಭೀಮ್ ಆರ್ಮಿಯ ಬಗ್ಗೆ ಒಲವು ಇರುವ ದಲಿತರ ಸಂಖ್ಯೆ ಗಣನೀಯವಾಗಿದೆ. ಹಾಗಾಗಿ ಆಜಾದ್ ಅವರ ಹೇಳಿಕೆಯಿಂದ ಬಿಎಸ್‌ಪಿ–ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಹಿನ್ನಡೆಯಾಗಬಹುದು ಎನ್ನಲಾಗಿದೆ.
ಆಜಾದ್ ಅವರು ‘ಬಿಜೆಪಿಯ ಏಜೆಂಟ್, ದಲಿತರ ಮತಗಳನ್ನು ಒಡೆಯುವುದೇ ಅವರ ಉದ್ದೇಶ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರಿಂದ ಕೆರಳಿರುವ ಆಜಾದ್ ಅವರು ಈ ಕರೆ ಕೊಟ್ಟಿದ್ದಾರೆ ಎನ್ನಲಾಗಿದೆ.
ತಮ್ಮ ಚಿತ್ರ ಹಿಡಿದು ರ‍್ಯಾಲಿ ನಡೆಸಿದ ದಲಿತರ ಮೇಲೆ ಎಸ್‌ಪಿ–ಬಿಎಸ್‌ಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆಜಾದ್ ಆರೋಪಿಸಿದ್ದಾರೆ.
ಹಾಲಿ ಸಂಸದ ರಾಘವ್ ಲಖನ್‌ಪಾಲ್ ಅವರು ಇಲ್ಲಿ ಬಿಜೆಪಿ ಅಭ್ಯರ್ಥಿ. ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಫೈಜುಲ್ ರೆಹ್ಮಾನ್ ಕಣದಲ್ಲಿದ್ದಾರೆ. ಗುರುವಾರ ಇಲ್ಲಿ ಮತದಾನ ನಡೆಯಲಿದೆ.
***
ಆಯೋಗದ ವಿರುದ್ಧ ರಾಷ್ಟ್ರಪತಿಗೆ ದೂರು
ನವದೆಹಲಿ (ಪಿಟಿಐ): ‘ಚುನಾವಣಾ ಆಯೋಗವು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಅದರ ಕಾರ್ಯವೈಖರಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ 66 ಮಂದಿ ಮಾಜಿ ಅಧಿಕಾರಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
‘ನೀತಿ ಸಂಹಿತೆ ಉಲ್ಲಂಘಿಸಿದ ಆಡಳಿತ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಯೋಗ ವಿಫಲವಾಗಿದೆ. ಭಾರತವು ಉಪಗ್ರಹ ನಾಶಮಾಡಬಲ್ಲ ಕ್ಷಿಪಣಿ ಪರೀಕ್ಷೆ ನಡೆಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದಲ್ಲದೆ ನೀತಿಸಂಹಿತೆ ಜಾರಿಯಾದ ಬಳಿಕ ಮೋದಿ ಅವರ ಜೀವನವನ್ನು ಕುರಿತ ವೆಬ್ ಸರಣಿ ಬಿಡುಗಡೆ ಮಾಡಲಾಗಿದೆ, ‘ನಮೋ ಟಿ.ವಿ’ ವಾಹಿನಿ ಆರಂಭಿಸಲಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಉದಾಸೀನತೆ ತೋರುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
‘ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಭಾರತದ ಸೇನೆಯನ್ನು ‘ಮೋದಿ ಸೇನೆ’ ಎಂದಿದ್ದಾರೆ. ಇಂಥ ಹೇಳಿಕೆಯ ವಿರುದ್ಧ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅಂಥ ಯಾವುದೇ ನಡೆ ಆಯೋಗದ ಕಡೆಯಿಂದ ಕಾಣಿಸಲಿಲ್ಲ. ಮುಕ್ತ ಮತ್ತು ಸ್ವತಂತ್ರ ಚುನಾವಣೆಯನ್ನು ನಡೆಸುವ ಮೂಲಕ ವಿಶ್ವಾಸವನ್ನು ಗಳಿಸಿದ್ದ ಆಯೋಗವು ಈಗ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದದಿಂದ ಹೇಳಬೇಕಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.