ADVERTISEMENT

ಚುನಾವಣಾ ಪ್ರಚಾರಕ್ಕೆ ವಿದ್ಯಾರ್ಥಿಗಳ ಬಳಕೆ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದ ಬಗ್ಗೆ ಅಧಿಕಾರಿಗಳ ಅಸಡ್ಡೆ, ಜಾಣ ಕುರುಡು ಪ್ರದರ್ಶನದ ನಡುವೆ ಮಕ್ಕಳ ಹಕ್ಕು ಚ್ಯುತಿ

ಎ.ಎಸ್.ಜಗನ್ನಾಥ್
Published 3 ಮೇ 2019, 13:17 IST
Last Updated 3 ಮೇ 2019, 13:17 IST
ನಗರದಲ್ಲಿ ಇತ್ತೀಚೆಗೆ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರವಾಗಿ ನಡೆದ ಪ್ರಚಾರ ಕಾರ್ಯದಲ್ಲಿ ಕಂಡುಬಂದ ಮಕ್ಕಳು
ನಗರದಲ್ಲಿ ಇತ್ತೀಚೆಗೆ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರವಾಗಿ ನಡೆದ ಪ್ರಚಾರ ಕಾರ್ಯದಲ್ಲಿ ಕಂಡುಬಂದ ಮಕ್ಕಳು   

ಗೌರಿಬಿದನೂರು: ಲೋಕಸಭೆ ಚುನಾವಣೆ ಪ್ರಚಾರ ಕಾರ್ಯ ತಾಲ್ಲೂಕಿನಲ್ಲಿ ಚುರುಕುಗೊಂಡಿದ್ದು, ಅಲ್ಲಲ್ಲಿ ಕಾನೂನುಬಾಹಿರವಾಗಿ ವಿದ್ಯಾರ್ಥಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಪ್ರಸ್ತುತ ಬಹುತೇಕ ಶಾಲೆಗಳಲ್ಲಿ ಪರೀಕ್ಷೆಗಳು ಮುಗಿದಿದ್ದು, ಮಕ್ಕಳು ರಜೆಯ ಮಜಾದಲ್ಲಿದ್ದಾರೆ. ಅಂತಹ ಮಕ್ಕಳಿಗೆ ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರು, ಆಮಿಷ ಒಡ್ಡಿ, ಮನೆಮನೆಗೆ ತೆರಳಿ ಕರಪತ್ರಗಳನ್ನು ಹಂಚಿ ಮತಯಾಚನೆ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಪ್ರಜ್ಞಾವಂತರ ವಲಯದಲ್ಲಿ ಆಕ್ರೋಶ ಮೂಡಿಸಿದೆ.

ಜಿಲ್ಲಾಡಳಿತ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಹಲವು ಸ್ತರದಲ್ಲಿ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದೆ. ಆದರೂ ಅಧಿಕಾರಿಗಳ ಭಯವಿಲ್ಲದೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಾಜಾರೋಷವಾಗಿ ಶಾಲಾ ವಿದ್ಯಾರ್ಥಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಗೋಚರಿಸುತ್ತಿದೆ.

ADVERTISEMENT

ನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರ ಪರವಾಗಿ ಪ್ರಚಾರ ಮಾಡಲು ಶಾಲಾ ಮಕ್ಕಳನ್ನು ಮನೆ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದನ್ನೆಲ್ಲ ಕಂಡರೂ ಕಾಣದಂತೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತರ ಆರೋಪ.

ಇತ್ತೀಚೆಗಷ್ಟೇ ಚುನಾವಣಾ ಆಯೋಗಕ್ಕೆ ಪತ್ರ ಬರೆದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳನ್ನು ಪ್ರಚಾರಕ್ಕೆ ಬಳಸುತ್ತಿರೋದು ಕಂಡುಬಂದರೆ ದೂರು ದಾಖಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಕ್ಕಳ ಬಳಕೆ ಕಂಡು ಬಂದರೆ ಮಕ್ಕಳ ಆಯೋಗದ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ 2005ರ ಸೆಕ್ಷನ್ 13ರ ಅನ್ವಯ ದೂರುಗಳನ್ನು ವಿಚಾರಣೆಗೊಳಪಡಿಸುವ ಮತ್ತು ಸೆಕ್ಷನ್ 14ರ ಅಡಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಂತೆ ಕಾರ್ಯನಿರ್ವಹಿಸುವ ಅಧಿಕಾರವನ್ನು ಈ ಆಯೋಗ ಹೊಂದಿದ್ದು, ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳನ್ನು ಸ್ವ-ಯಂ ಪ್ರೇರಣೆಯಿಂದ ದೂರು ದಾಖಲಿಸಿ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ.

ಈ ವಿಚಾರವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಬಿ.ಆರ್.ಬಾಲಗಂಗಾಧರ್‌ ಅವರನ್ನು ವಿಚಾರಿಸಿದರೆ, ‘ಮಕ್ಕಳನ್ನು, ವಿದ್ಯಾರ್ಥಿಗಳನ್ನು ಪ್ರಚಾರ ಕಾರ್ಯ ಮಾತ್ರವಲ್ಲ ಯಾವುದೇ ದೈಹಿಕ ಶ್ರಮದ ಕೆಲಸದಲ್ಲಿ ತೊಡಗಿಸುವುದು ಅಪರಾಧ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಈ ಬಗ್ಗೆ ತಹಶೀಲ್ದಾರ್ ಎಚ್.ಶ್ರೀನಿವಾಸ್ ಅವರನ್ನು ಪ್ರಶ್ನಿಸಿದರೆ, ‘ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗುವುದು ಅಕ್ಷಮ್ಯ ಅಪರಾಧ. ಈ ರೀತಿಯ ಘಟನೆಗಳು ಕಂಡುಬಂದಾಗ ಚುನಾವಣಾ ಜಾಗೃತ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.