ಬೆಂಗಳೂರು: ಮಲ್ಲೇಶ್ವರದ ತಮ್ಮ ನಿವಾಸದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಕಾಯ್ದು ಕುಳಿತಿದ್ದ ಬೆಂಬಲಿಗರ ಜತೆ ಉತ್ಸಾಹದಿಂದ ಸಮಾಲೋಚನೆ ನಡೆಸಿದರು ಬೆಂಗಳೂರು ದಕ್ಷಿಣಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್. ಪ್ರಚಾರ ಕಾರ್ಯಕ್ಕಾಗಿ ಅವರನ್ನು ಹುರಿದುಂಬಿಸುತ್ತಾ, ಅವರು ತಂದಿದ್ದ ಮಾಹಿತಿಗೂ ತುಸುಹೊತ್ತು ಕಿವಿಯಾದರು.
ಲಗುಬಗನೇ ತಿಂಡಿ ಮುಗಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಜಯನಗರದತ್ತ ಧಾವಿಸಿದ ಅವರು, 9.30ಕ್ಕೆ ಕಚೇರಿ ತಲುಪಿದರು. ಅಷ್ಟೊತ್ತಿಗಾಗಲೇ ಕೆಲ ಮುಖಂಡರು, ಕಾರ್ಯಕರ್ತರು ಅಲ್ಲಿ ಜಮಾಯಿಸಿದ್ದರು. ಬಿಸಿ ಕಾಫಿ ಹೀರುತ್ತಾ ಪ್ರಮುಖ ದಿನಪತ್ರಿಕೆಗಳತ್ತ ಒಮ್ಮೆ ಕಣ್ಣಾಯಿಸಿದರು. ಆಂಧ್ರಪ್ರದೇಶ ಹಾಗೂ ತೆಲಂಗಾಣ ಚುನಾವಣೆ ಬಗ್ಗೆ ಚರ್ಚೆ ನಡೆಸುತ್ತಲೇ ತಮ್ಮನ್ನು ಭೇಟಿ ಮಾಡಲು ಬಂದ ಮುಖಂಡರು, ಜನರ ಕುಶಲೋಪರಿ ವಿಚಾರಿಸಿದರು.
ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ ಆಕ್ಸ್‌ಫರ್ಡ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಬೆಳಿಗ್ಗೆ 10.30ಕ್ಕೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಿಗದಿಯಾಗಿತ್ತು. ಅಲ್ಲಿಗೆ ತೆರಳುವಾಗ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೆಲವರು ಅಭಿಮಾನದಿಂದ ನಮಸ್ಕಾರ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು. ಬಸವನ ಹುಳುವಿನಂತೆ ಸಾಗುತ್ತಿದ್ದ ಸಂಚಾರ ದಟ್ಟಣೆ ಕಂಡು ನಿಗದಿತ ಸಮಯಕ್ಕೆ ಕಾರ್ಯಕ್ರಮ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಚಡಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಯನಗರ ಶಾಸಕಿ ಸೌಮ್ಯರೆಡ್ಡಿ ಸಾಥ್ ನೀಡಿದರು. ಕೆಂಪೇಗೌಡ ಮತ್ತು ಟಿಪ್ಪುಸುಲ್ತಾನ್ ಕಾಲದ ಬೆಂಗಳೂರು, ನಂತರದ ದಿನಗಳಲ್ಲಿ ರೇಷ್ಮೆನಗರಿಯಾಗಿ ಬೆಳೆದ ಉತ್ತುಂಗ ಸ್ಥಿತಿ, ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆ, ಜಗತ್ತಿನ ಎದುರು ಸಿಲಿಕಾನ್ ಸಿಟಿ ಸ್ಥಿತಿಗತಿ ಬಗ್ಗೆ ಚುಟುಕಾಗಿ ಉಪನ್ಯಾಸ ನೀಡಿದರು.
ಬೆಂಗಳೂರಿನ ಮೂಲ ಸೌಕರ್ಯಗಳ ಅಧ್ವಾನ, ಮಹಾ ಘಟಬಂದನ್ ವಿರುದ್ಧ ವಿದ್ಯಾರ್ಥಿಗಳಿಂದ ಎದುರಾದ ರಾಜಕೀಯ ಮೊನಚು ಪ್ರಶ್ನೆಗಳಿಗೆ ಸಾವಧಾನದಿಂದಲೇ ಉತ್ತರಿಸುತ್ತಾ ಕ್ಷೇತ್ರದ ಬಿಜೆಪಿ ಎದುರಾಳಿ ತೇಜಸ್ವಿ ಸೂರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೀಕ್ಷ್ಮ ಎದುರೇಟು ನೀಡಿದರು.
ಮಧ್ಯಾಹ್ನ 12:30ಕ್ಕೆ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ನಿವಾಸಕ್ಕೆ ತೆರಳಿದ ಅವರು, ಗಡಿಬಿಡಿಯಿಂದಲೇ ಊಟದ ಶಾಸ್ತ್ರ ಮುಗಿಸಿದರು. ಮಧ್ಯಾಹ್ನ 1.30ಕ್ಕೆ ನಾಯಂಡಹಳ್ಳಿ ಪ್ರಮುಖ ಮೂರು ಮಸೀದಿಗಳಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನಂತರ ಮತಯಾಚಿಸಿದರು. ಈ ಸಂದರ್ಭದಲ್ಲಿ ಸಚಿವೆ ಜಯಮಾಲಾ, ಕಾಂಗ್ರೆಸ್ ಯುವ ಮುಖಂಡ ಪ್ರಿಯಕೃಷ್ಣ ಸಾಥ್ ನೀಡಿದರು.
ಸಂಜೆ 4ಕ್ಕೆ ಜಯನಗರದ ಬೈರಸಂದ್ರದಲ್ಲಿ ನಡೆದ ರೋಡ್ ಷೋನಲ್ಲಿ ಪಾಲ್ಗೊಂಡರು. ರಾತ್ರಿ 9ರವರೆಗೂ ಪ್ರಮುಖ ಬಡಾವಣೆಗಳಲ್ಲಿ ರೋಡ್ ಷೋ ನಡೆಸಿ ಮತಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.