ವಾರ್ಧಾ/ಮುಂಬೈ: ಶಾಂತಿಪ್ರಿಯ ಹಿಂದೂಗಳಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿಯನ್ನು ಕಾಂಗ್ರೆಸ್ ಕಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
‘ಅವರು ಮಾಡಿರುವುದು ಪಾಪ. ದೇಶದ ಜನರು ಅವರನ್ನು ಎಂದಿಗೂ ಕ್ಷಮಿಸಲಾರರು. ಹೇಳಿ... ಅವರನ್ನು ಜನರು ಕ್ಷಮಿಸುತ್ತಾರೆಯೇ’ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ವಾರ್ಧಾದಲ್ಲಿ ಬಿಜೆಪಿ–ಶಿವಸೇನಾ ನೇತೃತ್ವದ ಐದು ಪಕ್ಷಗಳ ಮೈತ್ರಿಕೂಟ ಏರ್ಪಡಿಸಿದ್ದ ಸಮಾವೇಶದಲ್ಲಿ ಸೇರಿದ್ದ ಜನರನ್ನು ಮೋದಿ ಪ್ರಶ್ನಿಸಿದರು.
‘ಬಹುಸಂಖ್ಯಾತರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾಯಕರು (ಕಾಂಗ್ರೆಸ್) ಭಯಪಡುತ್ತಿದ್ದಾರೆ’ ಎಂದು ಮೋದಿ ಹೇಳಿದ್ದಾರೆ. ನೆಹರೂ–ಗಾಂಧಿ ಕುಟುಂಬದ ಭದ್ರಕೋಟೆ ಅಮೇಠಿಯ ಜತೆಗೆ ಕೇರಳದ ವಯನಾಡ್‌ನಿಂದಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವುದಕ್ಕೆ ಅವರು ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕೇಂದ್ರದ ಮಾಜಿ ಗೃಹ ಸಚಿವ, ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಅವರ ವಿರುದ್ಧವೂ ಮೋದಿ ಹರಿಹಾಯ್ದರು. ‘ಸುಶೀಲ್ ಕುಮಾರ್ ಶಿಂಧೆ ಅವರು ಮಹಾರಾಷ್ಟ್ರದ ಮಣ್ಣಿನಲ್ಲಿ ಜನಿಸಿದವರು. ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಮೊದಲು ಬಳಸಿದ್ದೇ ಅವರು. ಕಾಂಗ್ರೆಸ್ ಪಕ್ಷವು ಹಿಂದೂಗಳು ಭಯೋತ್ಪಾದಕರು ಎಂಬ ಮುದ್ರೆ ಒತ್ತಿತು. ಹಿಂದೂಗಳು ಶಾಂತಿಪ್ರಿಯರು. ಹಿಂದೂ ಭಯೋತ್ಪಾದನೆಯ ಒಂದೇ ಒಂದು ಪ್ರಕರಣವೂ ಇಲ್ಲ. ಹಿಂದೂಗಳಿಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ’ ಎಂದು ಅವರು ಟೀಕಿಸಿದ್ದಾರೆ.
‘ಪುಲ್ವಾಮಾ ಮೇಲೆ ಉಗ್ರರ ದಾಳಿ ಮತ್ತು ಬಾಲಾಕೋಟ್ ವಾಯುದಾಳಿಯ ಬಳಿಕ ಭಾರತದ ಯೋಧರ ದಿಟ್ಟತನವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. ಆ ಮೂಲಕ ಯೋಧರಿಗೆ ಅವಮಾನ ಮಾಡಿದೆ. ಪಾಕಿಸ್ತಾನದಲ್ಲಿ ನಿಂತು ಮಾತನಾಡಲು ತಕ್ಕುದಾದ ಭಾಷೆಯಲ್ಲಿ ಈ ಪಕ್ಷಗಳು ಮಾತನಾಡಿವೆ. ನೀವು ಅಲ್ಲಿ ಹೀರೊ ಆಗಲು ಬಯಸಿದ್ದೀರೋ, ಅಥವಾ ಇಲ್ಲಿಯೋ’ ಎಂದು ಮೋದಿ ಪ್ರಶ್ನಿಸಿದರು.
‘ಎನ್‌ಸಿಪಿ ಮೇಲೆ ಶರದ್‌ಗೆ ಹಿಡಿತವಿಲ್ಲ’
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಸೋದರಳಿಯ ಅಜಿತ್ ಪವಾರ್ ಅವರು ಶರದ್ ಅವರಿಂದ ಅಧಿಕಾರ ಕಿತ್ತುಕೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಪವಾರ್ ಮತ್ತು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ. ಸೋದರಳಿಯನಿಂದಾಗಿ ಶರದ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದರಿಂದಲೇ ಹಿಂದಕ್ಕೆ ಸರಿಯಬೇಕಾಯಿತು ಎಂದಿದ್ದಾರೆ.
‘ಪವಾರ್ ಅವರು ಅತ್ಯಂತ ಅನುಭವಿ ರಾಜಕಾರಣಿ... ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಅವರು ಬೆಳೆಸಿಕೊಂಡಿದ್ದಾರೆ. ಮಧಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿಯೂ ಅವರು ಹೇಳಿದ್ದರು. ಸ್ಪರ್ಧಿಸುವುದಿಲ್ಲ ಎಂದು ಬಳಿಕ ಹೇಳಿದರು. ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದು ನುರಿತ ರಾಜಕಾರಣಿ ಶರದ್‌ಗೆ ತಿಳಿದಿದೆ’ ಎಂದು ಮೋದಿ ಹೇಳಿದರು.
ಸಮಸ್ಯೆಗಳ ಬಗ್ಗೆ ಮಾತನಾಡಿ: ಕಾಂಗ್ರೆಸ್
ನಿಜವಾದ ಸಮಸ್ಯೆಗಳ ಬಗ್ಗೆ ಮೋದಿ ಮಾತನಾಡಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕವು ಪ್ರತಿಕ್ರಿಯೆ ನೀಡಿದೆ. ‘ಅವರು 2014ರಲ್ಲಿ ಹೇಳಿದ್ದೇನು... ಬಳಿಕ ಮಾಡಿದ್ದೇನು... ಈ ಬಗ್ಗೆ ಅವರು ವಿವರಗಳನ್ನು ನೀಡಬೇಕು. ವಿಷಯವೇ ಅಲ್ಲದ ವಿಷಯಗಳ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.
‘ಐದು ವರ್ಷದಲ್ಲಿ ನೀವೇನು ಮಾಡಿದ್ದೀರಿ ಎಂದು ನಾವು ಕೇಳುತ್ತೇವೆ... ಜನರು ‘ಅಚ್ಛೇ ದಿನ’ಗಳ ನಿರೀಕ್ಷೆಯಲ್ಲಿದ್ದರು. ಅದೇನಾಯಿತು ಹೇಳಿ’ ಎಂದು ಅವರು ಪ್ರಶ್ನಿಸಿದ್ದಾರೆ.
ಮೋದಿ ಹೇಳುವುದೆಲ್ಲ ಸುಳ್ಳು: ಎನ್‌ಸಿಪಿ
ಮೋದಿ ಅವರು ಶರದ್ ಪವಾರ್ ಕುಟುಂಬದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಎನ್‌ಸಿಪಿ ಪ್ರತಿಕ್ರಿಯೆ ಕೊಟ್ಟಿದೆ.
‘ಅವರು (ಮೋದಿ) ಏನು ಮಾತನಾಡುತ್ತಿದ್ದಾರೆ... ಅಡ್ವಾಣಿ, ಮುರಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ ಅವರಂತಹ ಹಿರಿಯ ನಾಯಕರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದಾರೆ... ಹಾಗಿರುವಾಗ ಬೇರೆ ಕುಟುಂಬದ ಬಗ್ಗೆ ಮಾತೇಕೆ’ ಎಂದು ಎನ್‌ಸಿಪಿ ಮುಖಂಡ ಜಿತೇಂದ್ರ ಅವ್ಹಾದ್ ಪ‍್ರಶ್ನಿಸಿದ್ದಾರೆ.
‘ಅವರು ಹೇಳುವುದೆಲ್ಲವೂ ಸುಳ್ಳು... ಚಾಯ್‌ವಾಲಾದಿಂದ ಚೌಕೀದಾರ್‌ವರೆಗೆ ಎಲ್ಲವೂ ಸುಳ್ಳೇ. ನಿಜವಾದ ಸಮಸ್ಯೆಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸೋಣ. ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಷ್ಟು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ, ಎಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಮಾತನಾಡೋಣ’ ಎಂದು ಜಿತೇಂದ್ರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.