ADVERTISEMENT

ರಾಷ್ಟ್ರಪತಿಗಳನ್ನೇ ಅವಮಾನಿಸಿದ ಕಾಂಗ್ರೆಸ್‌: ಕೇಂದ್ರ ಸಚಿವೆ ಸ್ಮೃತಿ ಇರಾನಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 15:24 IST
Last Updated 25 ಏಪ್ರಿಲ್ 2023, 15:24 IST
ನಿಪ್ಪಾಣಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರ ಪ್ರಚಾರ ನಡೆಸಿದ ಸ್ಮೃತಿ ಇರಾನಿ
ನಿಪ್ಪಾಣಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರ ಪ್ರಚಾರ ನಡೆಸಿದ ಸ್ಮೃತಿ ಇರಾನಿ    

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ‘ದಲಿತ ಸಮುದಾಯದ ರಾಮನಾಥ ಕೋವಿಂದ ಅವರು ರಾಷ್ಟ್ರಪತಿಯಾದಾಗ ಅವರಿಗೆ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಗೌರವ ಕೊಡಲಿಲ್ಲ. ಈಗ ಬುಡಕಟ್ಟು ಸಮಾಜದ ಮಹಿಳೆ ದೇಶದ ಪ್ರಥಮ ಪ್ರಜೆ ಸ್ಥಾನಕ್ಕೇರಿದರೆ ಅವಮಾನ ಮಾಡಿದರು. ಯಾವ ಆಧಾರದ ಮೇಲೆ ಕಾಂಗ್ರೆಸ್‌ ದಲಿತರು– ಹಿಂದುಳಿದವರು ಪರ ಎಂದು ಬೀಗುತ್ತಾರೆ?’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಕಿಡಿ ಕಾರಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಾಗ ಕಾಂಗ್ರೆಸ್ ಹಾಗೂ ಎನ್‍ಸಿಪಿಯ ಪುರುಷರು ಆ ಮಹಿಳೆಯನ್ನು ತಿರಸ್ಕರಿಸಿ ಅವಮಾನಿಸಿದರು’ ಎಂದರು.

‘ನಿಪ್ಪಾಣಿ ಕ್ಷೇತ್ರದಲ್ಲಿ ನಿಮ್ಮ ಮನೆ ಮಗಳು ಶಶಿಕಲಾ ಸ್ಪರ್ಧೆಸಿದ್ದಾರೆ. ತವರು ನೆಲದಲ್ಲಿ ಹೆಣ್ಣುಮಗಳಿಗೆ ಅವಮಾನ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಅಭ್ಯರ್ಥಿಗಳೂ ಎಚ್ಚರ ವಹಿಸಿ; ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಯಿರಿ’ ಎಂದೂ ಹೇಳಿದರು.

ADVERTISEMENT

‘ಇಡೀ ರಾಜ್ಯದಲ್ಲಿ ಎನ್‌ಸಿಪಿ ನಿ‍ಪ್ಪಾಣಿಯಲ್ಲಿ ಮಾತ್ರ ಸ್ಫರ್ಧಿಸಿದೆ. ಒಬ್ಬರೇ ಗೆದ್ದು ಸರ್ಕಾರ ತರಲು ಸಾಧ್ಯವೇ? ಈ ಚುನಾವಣೆ ನೆಪಮಾತ್ರ. ಶಶಿಕಲಾ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವುದೇ ಎನ್‌ಸಿಪಿ, ಕಾಂಗ್ರೆಸ್‌ ಹುನ್ನಾರ’ ಎಂದೂ ಹರಿಹಾಯ್ದರು.

‘ಬಿಜೆಪಿ ಮುಸ್ಲಿಂ ಮೀಸಲಾತಿ ರದ್ದುಪಡಿಸಿ ಒಕ್ಕಲಿಗ ಮತ್ತು ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕೊಟ್ಟರೆ ನಿರ್ಲಜ್ಜ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.