ADVERTISEMENT

ಕ್ಷೇತ್ರ ಪರಿಚಯ: ದಿಬ್ರುಗಢ (ಅಸ್ಸಾಂ)

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 20:01 IST
Last Updated 14 ಏಪ್ರಿಲ್ 2024, 20:01 IST
ದಿಬ್ರುಗಢ
ದಿಬ್ರುಗಢ   

ಚಹಾತೋಟಗಳು ಹಾಗೂ ಸಮೃದ್ಧ ಹಸಿರು ಪ್ರಕೃತಿಯ ಮಡಿಲಿನಲ್ಲಿರುವ ಅಸ್ಸಾಂನ ದಿಬ್ರುಗಢ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಈ ಬಾರಿ ಇಲ್ಲಿ ತ್ರಿಕೋನ ಸ್ಪರ್ಧಿಗೆ ವೇದಿಕೆ ಸಿದ್ಧವಾಗಿದೆ. ಬಿಜೆಪಿಯು ಕೇಂದ್ರ ಸಚಿವ ಸರ್ವಾನಂದ ಸೋನೊವಾಲ್‌ ಅವರನ್ನು ಕಣಕ್ಕಿಳಿಸಿದರೆ, ಅಸ್ಸಾಂ ಜಾತೀಯ ಪರಿಷದ್ (ಎಜೆಪಿ) ಲುರಿಂಜ್ಯೋತಿ ಗೊಗೋಯಿ ಅವರನ್ನು ಅಖಾಡಕ್ಕಿಳಿಸಿದೆ. ಇವರಿಬ್ಬರ ಜೊತೆ ಸೆಣಸಲು ಎಎಪಿಯು ಮನೋಜ್‌ ಧನೋವರ್‌ ಅವರನ್ನು ಸ್ಪರ್ಧಿಯನ್ನಾಗಿಸಿದೆ. ಮನೋಜ್‌ ಅವರು ಕಾಂಗ್ರೆಸ್‌ನಿಂದ ಏಳು ಬಾರಿ ಶಾಸಕರಾಗಿದ್ದ ಮಾಜಿ ಸಚಿವ ರಾಮೇಶ್ವರ್‌ ಧನೋವರ್‌ ಅವರ ಪುತ್ರ. ಸ್ವಾತಂತ್ರ್ಯಾನಂತರದಿಂದ 2014ರ ವರೆಗೆ ಈ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 2019ರಲ್ಲಿ ಬಿಜೆಪಿಯ ರಾಮೇಶ್ವರ ತೆಲಿ ಅವರು 3,64,566 ಮತಗಳ ಅಂತರದಿಂದ ಕಾಂಗ್ರೆಸ್‌ನ ಪಬನ್‌ ಸಿಂಗ್‌ ಘಾಟೋವರ್‌ ಅವರನ್ನು ಸೋಲಿಸಿದ್ದರು. ಸರ್ವಾನಂದ ಅವರು ಈ ಹಿಂದೆ ಬಿಜೆಪಿಯ ಅಸ್ಸಾಂ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಭರ್ಜರಿ ಜಯ ಗಳಿಸಿರುವುದು ಸರ್ವಾನಂದ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಲುರಿಂಜ್ಯೋತಿ ಅವರಿಗೆ ಅಸ್ಸಾಂನ ವಿರೋಧ ಪಕ್ಷವು ಬೆಂಬಲ ಸೂಚಿಸಿರುವುದರಿಂದ ಅವರು ಕೂಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮೂರು ಪಕ್ಷಗಳೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ತುರುಸಿನ ಸ್ಪರ್ಧೆ ನಡೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚಹಾ ತೋಟ ನೌಕರರು ಬಹುಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.