ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರವು ಬಿಜೆಪಿ ಮತ್ತು ಎನ್‌ಸಿಪಿ ಶರದ್ ಪವಾರ್ ಬಣದ ಅಭ್ಯರ್ಥಿಗಳ ನಡುವಣ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಬಿಜೆಪಿಯು ಮಾಜಿ ಸಚಿವೆ ಪಂಕಜಾ ಮುಂಡೆ ಅವರನ್ನು ಕಣಕ್ಕಿಳಿಸಿದರೆ, ಎನ್‌ಸಿಪಿ ಶರದ್ ಪವಾರ್ ಬಣವು ಭಜರಂಗ್ ಮನೋಹರ್ ಸೋನವಣೆ ಅವರನ್ನು ಅಖಾಡಕ್ಕಿಳಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಆಘಾಡಿ (ವಿಬಿಎ) ಪಕ್ಷವು ಅಶೋಕ್ ಹಿಂಗೆ ಅವರನ್ನು ಅಭ್ಯರ್ಥಿಯಾಗಿಸಿದೆ. 2019ರ ಚುನಾವಣೆಯಲ್ಲಿ ಪಂಕಜಾ ಅವರ ಸಹೋದರಿ ಪ್ರೀತಂ ಮುಂಡೆ ಅವರು 1,68,368 ಮತಗಳ ಅಂತರದಿಂದ ಎನ್‌ಸಿಪಿಯ ಭಜರಂಗ್ ಮನೋಹರ್ ಸೋನವಣೆ ಅವರನ್ನು ಪರಾಭವಗೊಳಿಸಿದ್ದರು. ಪಂಕಜಾ ಅವರ ತಂದೆ ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2009ರಿಂದಲೂ ಈ ಕ್ಷೇತ್ರವು ಗೋಪಿನಾಥ್ ಮುಂಡೆ ಅವರ ಕುಟುಂಬದ ಹಿಡಿತದಲ್ಲಿದೆ. ರೈತರ ಸಮಸ್ಯೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳೇ ಈ ಬಾರಿ ಪ್ರಚಾರದ ಪ್ರಮುಖ ವಿಷಯಗಳಾಗಿದ್ದವು. ಎನ್‌ಸಿಪಿಯು ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದು ಭಜರಂಗ್ ಮನೋಹರ್ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ವಿಬಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.