ಉತ್ತರ ಪ್ರದೇಶದ ಅಯೋಧ್ಯೆಯ ನೆರೆಯ ಲೋಕಸಭಾ ಕ್ಷೇತ್ರವಾದ ಕೈಸರ್‌ಗಂಜ್‌ನಲ್ಲಿ ಚುನಾವಣಾ ಕಾವು ಏರಿಕೆಯಾಗಿದ್ದು, ಈ ಬಾರಿಯೂ ಘಟಾನುಘಟಿಗಳೇ ಕಣದಲ್ಲಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇವರಿಗೆ ಪೈಪೋಟಿ ನೀಡಲು ಸಮಾಜವಾದಿ ಪಕ್ಷವು ರಾಮ್ ಭಗತ್ ಮಿಶ್ರಾ ಅವರನ್ನು ಅಖಾಡಕ್ಕಿಳಿಸಿದೆ. ಬಿಎಸ್‌ಪಿಯು ನರೇಂದ್ರ ಪಾಂಡೆ ಅವರನ್ನು ಅಭ್ಯರ್ಥಿಯಾಗಿಸಿದೆ. 2019ರ ಚುನಾವಣೆಯಲ್ಲಿ ಬ್ರಿಜ್‌ಭೂಷಣ್ ಸಿಂಗ್ ಅವರು 2,61,601 ಮತಗಳ ಅಂತರದಿಂದ ಬಿಎಸ್‌ಪಿಯ ಚಂದ್ರದೇವ್ ರಾಮ್ ಯಾದವ್ ಅವರನ್ನು ಪರಾಭವಗೊಳಿಸಿದ್ದರು. ಬ್ರಿಜ್‌ಭೂಷಣ್ ಅವರು, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವುದರಿಂದ ಈ ಬಾರಿ ಬಿಜೆಪಿಯು ಅವರ ಪುತ್ರನನ್ನು ಕಣಕ್ಕಿಳಿಸಿದೆ. ಠಾಕೂರ್ ಸಮುದಾಯದ ನಾಯಕರಾಗಿರುವ ಬ್ರಿಜ್‌ಭೂಷಣ್ ಅವರು ಬಿಜೆಪಿಯ ಪ್ರಭಾವಿ ಮುಖಂಡರಾಗಿದ್ದಾರೆ. ಕರಣ್ ಭೂಷಣ್ ಅವರು, ಉತ್ತರ ಪ್ರದೇಶ ಕುಸ್ತಿ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ರಾಮ್ ಭಗತ್ ಅವರು ಅನಂತರ ಬಿಜೆಪಿಗೆ ಸೇರಿದ್ದರು. ಆ ಪಕ್ಷದಲ್ಲೂ ಕೆಲಕಾಲ ಕಾರ್ಯನಿರ್ವಹಿಸಿ ಬಳಿಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ರಾಮ್ ಭಗತ್ ಅವರು ಕರಣ್ ಭೂಷಣ್ ಅವರಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎಸ್‌ಪಿಯು ‘ಇಂಡಿಯಾ’ ಒಕ್ಕೂಟದ ಜತೆಗಿರುವುದು ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.