ADVERTISEMENT

LS polls | ಕೇತ್ರ ಮಹಾತ್ಮೆ: ದಿಂಡೋರಿ (ಮಹಾರಾಷ್ಟ್ರ)

​ಪ್ರಜಾವಾಣಿ ವಾರ್ತೆ
Published 17 ಮೇ 2024, 19:47 IST
Last Updated 17 ಮೇ 2024, 19:47 IST
   

ಮಹಾರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ದಿಂಡೋರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿಯ (ಶರದ್‌ ಪವಾರ್‌ ಬಣ) ಪ್ರಬಲ ಅಭ್ಯರ್ಥಿಗಳ ನಡುವಿನ ಸೆಣಸಾಟಕ್ಕೆ ವೇದಿಕೆ ಸಿದ್ಧವಾಗಿದೆ. ಬಿಜೆಪಿಯು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್‌ ಅವರನ್ನು ಕಣಕ್ಕಿಳಿಸಿದರೆ, ಎನ್‌ಸಿಪಿಯು ಭಾಸ್ಕರ್‌ ಭಾಗರೆ ಅವರನ್ನು ಅಖಾಡಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಭಾರತಿ ಅವರು 1,98,779 ಮತಗಳ ಅಂತರದಿಂದ ಎನ್‌ಸಿಪಿಯ ಧನರಾಜ್‌ ಮಹಾಲೆ ಅವರನ್ನು ಪರಾಭವಗೊಳಿಸಿದ್ದರು. ಈ ಬಾರಿ ಎನ್‌ಸಿಪಿ ಶರದ್‌ ಪವಾರ್‌ ಬಣವು ‘ಇಂಡಿಯಾ’ ಒಕ್ಕೂಟದಲ್ಲಿರುವುದು ಭಾಸ್ಕರ್‌ ಅವರ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. 2014ರಲ್ಲಿ ಜಿಲ್ಲಾ ಪರಿಷತ್‌ ಸದಸ್ಯೆಯಾಗಿ ಎನ್‌ಸಿಪಿಯಿಂದ ಆಯ್ಕೆಯಾಗುವ ಮೂಲಕ ಭಾರತಿ ಅವರು ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು. 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ‘ಮಹಾಯುತಿ’ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಈ ಬಾರಿಯೂ ಅವರು ಗೆಲ್ಲುತ್ತಾರೆಂಬ ವಿಶ್ವಾಸದಲ್ಲಿ ಬಿಜೆಪಿ ಮುಖಂಡರಿದ್ದಾರೆ. ರೈತರ ಸಮಸ್ಯೆಗಳನ್ನು ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನೇ ಪ್ರಮುಖ ಪ್ರಚಾರ ವಿಚಾರವಾಗಿಸಿ ಭಾಸ್ಕರ್‌ ಅವರು ಮತ ಯಾಚಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಹಾಗೂ ಮಹತ್ವದ ನಿರ್ಧಾರಗಳನ್ನು ಮುಂದಿರಿಸಿ ಭಾರತಿ ಅವರು ಜನರ ಬಳಿಗೆ ತೆರಳುತ್ತಿದ್ದಾರೆ. ಎನ್‌ಸಿಪಿಯು ಇಬ್ಭಾಗವಾದಾಗ ಭಾಸ್ಕರ್‌ ಅವರು ಶರದ್‌ ಪವಾರ್‌ ಜತೆಗೆ ನಿಂತು ನಿಷ್ಠೆ ಮೆರೆದಿದ್ದರು. ಇದೇ ಕಾರಣಕ್ಕೆ ಅವರಿಗೆ ಪಕ್ಷವು ಟಿಕೆಟ್‌ ನೀಡಿದೆ.v

ದಿಂಡೋರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.