ADVERTISEMENT

ಕ್ಷೇತ್ರ ಪರಿಚಯ: ಮೊರೇನಾ (ಮಧ್ಯಪ್ರದೇಶ)

​ಪ್ರಜಾವಾಣಿ ವಾರ್ತೆ
Published 4 ಮೇ 2024, 23:19 IST
Last Updated 4 ಮೇ 2024, 23:19 IST
   

ಮಧ್ಯಪ್ರದೇಶದ ಮೊರೇನಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಬಿಜೆಪಿಯು ಈ ಬಾರಿ ಶಿವಮಂಗಲ್ ಸಿಂಗ್‌ ತೋಮರ್‌ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌ ಪಕ್ಷವು ಸತ್ಯಪಾಲ್‌ ಸಿಂಗ್‌ ಸಿಕರ್ವಾರ್ ಅವರನ್ನು ಅಖಾಡಕ್ಕಿಳಿಸಿದೆ. ಇವರಿಬ್ಬರಿಗೆ ಪೈಪೋಟಿ ನೀಡಲು ಬಿಎಸ್‌ಪಿಯು ರಮೇಶ್‌ಚಂದ್ ಗಾರ್ಗ್‌ ಎಂಬುವವರನ್ನು ಸ್ಪರ್ಧಿಯಾಗಿಸಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಸಿಂಗ್‌ ತೋಮರ್‌ ಅವರು, 1,13,341 ಮತಗಳ ಅಂತರದಿಂದ ಕಾಂಗ್ರೆಸ್‌ನ ರಾಮ್‌ನಿವಾಸ್‌ ರಾವತ್‌ ಅವರನ್ನು ಪರಾಭವಗೊಳಿಸಿದ್ದರು. ಬಿಜೆಪಿಯಲ್ಲಿದ್ದ ಸತ್ಯಪಾಲ್‌ ಸಿಂಗ್‌ ಅವರನ್ನು 2020ರಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಬಿಎಸ್‌ಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 1996ರಿಂದಲೂ ಈ ಕ್ಷೇತ್ರವು ಬಿಜೆಪಿಯ ಕೈವಶವಿದೆ. ಸತ್ಯಪಾಲ್‌ ಸಿಂಗ್‌ ಅವರು ಕ್ಷೇತ್ರದಲ್ಲಿ ಪ್ರಭಾವಿ ಮುಖಂಡರಾಗಿರುವುದರಿಂದಲೇ ಕಾಂಗ್ರೆಸ್‌ ಅವರನ್ನು ಕಣಕ್ಕಿಳಿಸಿದೆ. ನಿರುದ್ಯೋಗ ಸಮಸ್ಯೆ, ಹಣದುಬ್ಬರ, ಬೆಲೆ ಏರಿಕೆ ಮೊದಲಾದವುಗಳನ್ನು ಪ್ರಮುಖ ಚುನಾವಣಾ ವಿಷಯವಾಗಿಸಿ ಸತ್ಯಪಾಲ್‌ ಅವರು ಮತಯಾಚಿಸುತ್ತಿದ್ದಾರೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ಕ್ಷೇತ್ರದ ಮತದಾರರು ಯಾರ ಕೈಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.