ಚಿಕ್ಕಬಳ್ಳಾಪುರ: ಚುನಾವಣಾ ಪ್ರಚಾರ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಹಳ್ಳಿ, ಹೋಬಳಿ, ನಗರಗಳಲ್ಲಿ ಮತ ಕೇಳುತ್ತಿದ್ದಾರೆ. ಸಭೆಗಳನ್ನು ನಡೆಸುತ್ತಿದ್ದಾರೆ.
ಈ ಪ್ರಚಾರದ ನಡುವೆಯೇ ಲೋಕಸಭಾ ಕ್ಷೇತ್ರದಲ್ಲಿ ಒಳ ಏಟಿನ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಇಬ್ಬರೂ ಅಭ್ಯರ್ಥಿಗಳಿಗೆ ಒಳ ಏಟಿದೆ. ಅದು ಯಾವ ರೀತಿಯಲ್ಲಿ, ಯಾವ ಕ್ಷೇತ್ರದಲ್ಲಿ, ಹೇಗೆ ಎನ್ನುವ ಕ್ಷೇತ್ರದಲ್ಲಿ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಬಿಜೆಪಿಗೆ ಎಲ್ಲಿ, ಹೇಗೆ ಒಳ ಏಟುಗಳು ಬೀಳಲಿವೆ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹ ಕಾಂಗ್ರೆಸ್‌ಗೆ ಎಲ್ಲಿ, ಯಾವ ರೀತಿ ಒಳ ಏಟು ಇದೆ ಎನ್ನುವ ಬಗ್ಗೆ ಮಾತನಾಡುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿಯೂ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಈ ಒಳ ಏಟಿನ ಚರ್ಚೆಗಳು ಜೋರಾಗಿದ್ದವು. ಈ ಬಾರಿಯೂ ಸಹ ಈ ಚರ್ಚೆಗಳು ಗರಿಗೆದರಿವೆ.
ವಿಶೇಷವಾಗಿ ಗೌರಿಬಿದನೂರು, ಯಲಹಂಕ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಒಳ ಏಟಿನ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಳಯವನ್ನು ಒಮ್ಮೆ ಇಣುಕಿದರೆ ಒಡಕುಗಳ ದರ್ಶನವಾಗುತ್ತದೆ. ಕಾಂಗ್ರೆಸ್ ನಾಯಕರು ಇತ್ತೀಚೆಗೆ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿ ಸಮಯದಲ್ಲಿಯೇ ಹಿರಿಯ ಮುಖಂಡ ನಂದಿ ಆಂಜನಪ್ಪ, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆಂಜನಪ್ಪ ಬಹಿರಂಗವಾಗಿ ಮಾತನಾಡಿದರೆ ಕೆಲವು ನಾಯಕರು ಆಂತರಿಕವಾಗಿ ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸುವರು. ವಿಧಾನಸಭೆ ಚುನಾವಣೆ ಸಮಯದಲ್ಲಿ ಇದ್ದ ಒಗ್ಗಟ್ಟು ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಈಗ ಇಲ್ಲ ಎನ್ನುವುದು ಜಗಜ್ಜಾಹೀರ.
ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಕೆಂಪರಾಜು ಈಗ ಒಂದೇ ತೆಕ್ಕೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುತ್ತಿದ್ದಾರೆ. ಗೌರಿಬಿದನೂರಿನಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಜಿಗಿಯುವ ಪರ್ವ ಜೋರಾಗಿಯೇ ಇದೆ.
ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಬಾಗೇಪಲ್ಲಿ ಮುಖಂಡ ಮುನಿರಾಜು, ಎಸ್.ಆರ್.ವಿಶ್ವನಾಥ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಸುಧಾಕರ್ ಅವರಿಗೆ ಟಿಕೆಟ್ ದೊರೆತ ನಂತರ ಒಗ್ಗೂಡಿದರು. ಆದರೆ ಈ ಕ್ಷೇತ್ರದಲ್ಲಿಯೂ ಬಿಜೆಪಿಗೆ ಒಳ ಏಟು ಇದೆಯೇ ಎನ್ನುವ ಚರ್ಚೆ ಬಿರುಸಾಗಿದೆ.
ಕ್ಷೇತ್ರದಲ್ಲಿ ಗಣನೀಯವಾಗಿರುವ ಬಲಿಜ ಸಮುದಾಯದ ಹೆಚ್ಚು ಮತಗಳು ವಿಧಾನಸಭೆ ಚುನಾವಣೆಯಲ್ಲಿ ಮುನಿರಾಜು ಅವರ ಪರವಾಲಿದ್ದವು. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬಲಿಜ ಸಮುದಾಯಕ್ಕೆ ಸೇರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಸಮುದಾಯದ ಬೆಂಬಲ ಈ ಬಾರಿ ದೊರೆಯುವುದು ಕಷ್ಟ ಎನ್ನುವ ಮಾತುಗಳಿವೆ.
ಬಾಗೇಪಲ್ಲಿ ಕ್ಷೇತ್ರದ ಬಹುತೇಕ ಒಕ್ಕಲಿಗ ಮುಖಂಡರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಜಾತಿ ಪ್ರಜ್ಞೆ ಜೋರಾದಷ್ಟು ಈ ಕ್ಷೇತ್ರದಲ್ಲಿ ಮತದಾರರು ಅದಲು ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ 69,387 ಮತಗಳನ್ನು ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.