ಬಳ್ಳಾರಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯಂಥವರಿಗೆ ರಾಜಕೀಯ ಜನ್ಮ ನೀಡಿದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೇಳಿಕೊಳ್ಳಲು ಒಬ್ಬ ಮಹಿಳಾ ಅಭ್ಯರ್ಥಿಯೂ ಸ್ಪರ್ಧೆ ಮಾಡಿಲ್ಲ!
ಕೇಂದ್ರದ ಮಾಜಿ ಸಚಿವೆ ಬಸವರಾಜೇಶ್ವರಿ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರ ಸೋದರಿ ಜೆ.ಶಾಂತಾ ಅಂಥವರ ಸ್ಪರ್ಧೆಯಿಂದ ಗಮನ ಸೆಳೆದಿದ್ದ ಬಳ್ಳಾರಿ ಸದ್ಯ ಮಹಿಳೆ ಯರಿಲ್ಲದ ಕಣ. ರಾಷ್ಟ್ರೀಯ ಪಕ್ಷಗಳು, ಮಾನ್ಯತೆ ಪಡೆದ ರಾಜ್ಯ ಪಕ್ಷಗಳೂ ಪುರುಷರಿಗೇ ಮಣೆ ಹಾಕಿವೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಮಹಿಳೆಯರೂ ಮನಸ್ಸು ಮಾಡಿಲ್ಲ.
1952ರಿಂದ 2019ರವರೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 19 ಚುನಾವಣೆಗಳು ನಡೆದಿವೆ. ಇದರಲ್ಲಿ ಎರಡು ಉಪ ಚುನಾವಣೆಗಳು. ಆದರೆ, ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧೆ ಮಾಡಿದ್ದೇ 1984ರಲ್ಲಿ. ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಬಸವರಾಜೇಶ್ವರಿ ಅವರು ಕಣದಲ್ಲಿದ್ದ ಏಕೈಕ ಮಹಿಳೆಯೂ ಆಗಿದ್ದರು. ಚುನಾವಣೆಯಲ್ಲಿ ಗೆದ್ದು ಈ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾದರು. ಅಲ್ಲಿಂದ ಸತತ ಮೂರು ಚುನಾವಣೆಗಳಲ್ಲಿ (1984, 1989, 1991) ಅವರು ಸ್ಪರ್ಧೆ ಮಾಡಿ ಗೆದ್ದಿದ್ದರು. ಆ ಮೂರೂ ಚುನಾವಣೆಗಳಲ್ಲೂ ಕಣದಲ್ಲಿದ್ದ ಏಕೈಕ ಮಹಿಳೆ ಬಸವರಾಜೇಶ್ವರಿ ಮಾತ್ರವೇ.
ಬಳಿಕ 1996 ಮತ್ತು 1998 ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧೆ ಮಾಡಿಲ್ಲ. 1999ರಲ್ಲಿ ಕಣವು ಇಬ್ಬರು ಮಹಿಳೆಯರ ನಡುವಿನ ಹೋರಾಟಕ್ಕೆ ಸಾಕ್ಷಿಯಾಯಿತು. ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ಸೋನಿಯಾ 56,100 ಮತಗಳಿಂದ ಗೆದ್ದರು. ಸೋನಿಯಾ ಅವರು ಬಳ್ಳಾರಿ ಜತೆಗೆ ಉತ್ತರ ಪ್ರದೇಶದ ಅಮೇಥಿಯಿಂದಲೂ ಸ್ಪರ್ಧಿಸಿದ್ದರು. ಅಮೇಥಿಯನ್ನು ಮಾತ್ರ ಉಳಿಸಿಕೊಂಡರು. ಅವರಿಂದ ತೆರವಾದ ಸ್ಥಾನಕ್ಕೆ 2000ರಲ್ಲಿ ಉಪ ಚುನಾವಣೆ ನಡೆಯಿತು. ಅದರಲ್ಲೂ ಮಹಿಳೆಯರು ಸ್ಪರ್ಧೆ ಮಾಡಿರಲಿಲ್ಲ.
2004ರಲ್ಲಿ ನಡೆದ ಚುನಾವಣೆಯಲ್ಲಿ ಗೌಸಿಯಾ ಬೇಗಂ ಎಂಬುವವರು ಏಕೈಕ ಮಹಿಳಾ ಅಭ್ಯರ್ಥಿಯಾಗಿ, ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. 10,306 ಮತಗಳನ್ನು ಪಡೆದಿದ್ದ ಅವರು ಗಮನ ಸೆಳೆದಿದ್ದರು. 2009ರಲ್ಲಿ ಬಿಜೆಪಿಯಿಂದ ಜೆ.ಶಾಂತಾ ಸ್ಪರ್ಧೆ ಮಾಡಿ ಗೆದ್ದರು. ಅವರೂ ಕಣದಲ್ಲಿದ್ದ ಏಕೈಕ ಮಹಿಳೆ.
2014ರಲ್ಲಿ ನಡೆದ ಚುನಾವಣೆಯಲ್ಲಿ ಶಾಂತಾ ಅವರು ಕ್ಷೇತ್ರವನ್ನು ಅಣ್ಣ ಬಿ. ಶ್ರೀರಾಮುಲು ಅವರಿಗೆ ಬಿಟ್ಟುಕೊಟ್ಟಿದ್ದರು. ಆ ಚುನಾವಣೆಯಲ್ಲೂ ಯಾವೊಬ್ಬ ಮಹಿಳೆಯೂ ಕಣದಲ್ಲಿರಲಿಲ್ಲ. 2018ರಲ್ಲಿ ಶ್ರೀರಾಮುಲು ವಿಧಾನಸಭೆಗೆ ಹೋದರು. ಹೀಗಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರ ತೊರೆದಿದ್ದರು. ಆಗ ಎದುರಾದ ಉಪಚುನಾವಣೆಯಲ್ಲಿಯೂ ಜೆ. ಶಾಂತಾ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಅವರು ವಿ.ಎಸ್ ಉಗ್ರಪ್ಪ ಅವರ ಎದುರು ಸೋಲುಂಡಿದ್ದರು.
2019ರ ಚುನಾವಣೆಯಲ್ಲಿ 12 ಮಂದಿ ಕಣದಲ್ಲಿದ್ದರೂ ಮಹಿಳೆ ಯರ್‍ಯಾರೂ ಸ್ಪರ್ಧಿಸಿರಲಿಲ್ಲ. ಸದ್ಯದ ಚುನಾ ವಣೆಯಲ್ಲೂ ಅದೇ ಪುನರಾವರ್ತನೆ ಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಲ್ಲಿ ಮಹಿಳೆಯರ ನಿರಾಸಕ್ತಿ ನಿರಾಶೆ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.