ಆಂಧ್ರಪ್ರದೇಶದ ರಾಜಂಪೇಟ ಲೋಕಸಭಾ ಕ್ಷೇತ್ರವು ಘಟಾನುಘಟಿಗಳ ಹಣಾಹಣಿಗೆ ಸಜ್ಜಾಗಿದೆ. ವೈಎಸ್‌ಆರ್‌ಸಿಪಿಯಿಂದ ಪಿ.ವಿ. ಮಿಧುನ್ ರೆಡ್ಡಿ ಕಣಕ್ಕಿಳಿದರೆ, ಬಿಜೆಪಿಯು ಎನ್. ಕಿರಣ್ ಕುಮಾರ್ ರೆಡ್ಡಿ ಅವರನ್ನು ಅಖಾಡಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷವು ಎಸ್.ಕೆ. ಬಷೀದ್ ಅವರನ್ನು ಸ್ಪರ್ಧಿಯಾಗಿಸಿದೆ. 2019ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಮಿಧುನ್ ರೆಡ್ಡಿ ಅವರು 2,68,284 ಮತಗಳ ಅಂತರದಿಂದ ಟಿಡಿಪಿಯ ಡಿ.ಎ. ಸತ್ಯಪ್ರಭಾ ಅವರನ್ನು ಪರಾಭವಗೊಳಿಸಿದ್ದರು. ಬರಪೀಡಿತ ಪ್ರದೇಶವಾದ ರಾಜಂಪೇಟ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಯೋಜನೆಗಳೇ ಪ್ರಮುಖ ಚುನಾವಣಾ ವಿಚಾರಗಳಾಗಿವೆ. ಎನ್. ಕಿರಣ್ ಕುಮಾರ್ ರೆಡ್ಡಿ ಅವರು ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದು, ರಾಜ್ಯದಲ್ಲಿ ಪ್ರಭಾವಿ ಮುಖಂಡರಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಬಿಜೆಪಿಯು ಕಣಕ್ಕಿಳಿಸಿದೆ. ಆಂಧ್ರಪ್ರದೇಶ ವಿಭಜನೆಯಾಗುವುದನ್ನು ವಿರೋಧಿಸಿ 2014ರಲ್ಲಿ ಕಿರಣ್ ಕುಮಾರ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಬಳಿಕ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರೂ ಯಶಸ್ವಿಯಾಗಲಿಲ್ಲ. 2018ರಲ್ಲಿ ಅವರು ಮತ್ತೆ ಕಾಂಗ್ರೆಸ್‌ಗೆ ಸೇರಿದ್ದರು. 2023ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಆಡಳಿತಾರೂಢ ವೈಎಸ್‌ಆರ್‌ಸಿಪಿ ಸರ್ಕಾರವು ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂಬುದನ್ನೇ ಪ್ರಮುಖ ಚುನಾವಣಾ ವಿಷಯವಾಗಿಸಿ ಕಿರಣ್ ಕುಮಾರ್ ಅವರು ಮತಯಾಚಿಸುತ್ತಿದ್ದಾರೆ. ಎನ್. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾವು ಎನ್‌ಡಿಎ ಒಕ್ಕೂಟದ ಜೊತೆಗೆ ಕೈಜೋಡಿಸಿರುವುದು ಕಿರಣ್ ಕುಮಾರ್ ಅವರ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.