ADVERTISEMENT

ಕ್ಷೇತ್ರ ಮಹಾತ್ಮೆ: ಗುವಾಹಟಿ (ಅಸ್ಸಾಂ)

​ಪ್ರಜಾವಾಣಿ ವಾರ್ತೆ
Published 6 ಮೇ 2024, 0:09 IST
Last Updated 6 ಮೇ 2024, 0:09 IST
Guwahati
Guwahati   

ಈಶಾನ್ಯ ಭಾರತದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಅಸ್ಸಾಂನ ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ, ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿಯು ಬಿಜುಲಿ ಕಲಿತ ಮೇಧಿ ಅವರನ್ನು ಅಭ್ಯರ್ಥಿಯಾಗಿಸಿದರೆ, ಕಾಂಗ್ರೆಸ್‌ ಪಕ್ಷವು ಮೀರಾ ಬೋರ್ಟಕುರ್ ಗೋಸ್ವಾಮಿ ಅವರನ್ನು ಅಖಾಡಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯ ಕ್ವೀನ್ ಓಜಾ ಅವರು 3,45,606 ಮತಗಳ ಅಂತರದಿಂದ ಕಾಂಗ್ರೆಸ್‌ನ ಬಬಿತಾ ಶರ್ಮಾ ಅವರನ್ನು ಪರಾಭವಗೊಳಿಸಿದ್ದರು. ಈ ಬಾರಿ ಬಿಜೆಪಿಯು ಬಬಿತಾ ಅವರಿಗೆ ಟಿಕೆಟ್‌ ನಿರಾಕರಿಸಿದೆ. ಗುವಾಹಟಿಯ ಮಾಜಿ ಉಪ ಮೇಯರ್‌ ಬಿಜುಲಿ ಅವರು ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಮೀರಾ ಅವರು ಅಸ್ಸಾಂ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯು ಈ ಬಾರಿ ಈ ಕ್ಷೇತ್ರದ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದ್ದಾರೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕೂಡ ಇಲ್ಲಿ ಪ್ರಮುಖ ಚುನಾವಣಾ ವಿಚಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ಮತ್ತು ಪ್ರಮುಖ ನಿರ್ಧಾರಗಳನ್ನು ಪ್ರಚಾರ ವಿಷಯವಾಗಿಸಿ ಬಿಜುಲಿ ಅವರು ಮತಯಾಚಿಸುತ್ತಿದ್ದಾರೆ. ಈ ಬಾರಿ ಇಲ್ಲಿನ ಮತದಾರರು ಯಾರ ಪರ ನಿಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.