ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೊಂದಾಗಿರುವ ಧಾರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರಿಕೆಯಾಗಿದೆ. ಇಲ್ಲಿ ಬಿಜೆಪಿಯು ಸಾವಿತ್ರಿ ಠಾಕೂರ್ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಕ್ಷವು ರಾಧೇಶ್ಯಾಮ್ ಮುವೆಲ್ ಅವರನ್ನು ಅಖಾಡಕ್ಕಿಳಿಸಿದೆ. ಬುಡಕಟ್ಟು ಅಭ್ಯರ್ಥಿಗಳಿಗೆ ಮೀಸಲಾಗಿರುವ ಈ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಚತ್ತರ್ ಸಿಂಗ್ ದರ್ಬಾರ್ ಅವರು 1,56,029 ಮತಗಳ ಅಂತರದಿಂದ ಕಾಂಗ್ರೆಸ್‌ನ ದಿನೇಶ್ ಗಿರ್ವಾಲ್ ಅವರನ್ನು ಪರಾಭವಗೊಳಿಸಿದ್ದರು. ಚತ್ತರ್ ಸಿಂಗ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದೆ. ರಾಧೇಶ್ಯಾಮ್ ಅವರು ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನೇ ಪ್ರಮುಖ ಚುನಾವಣಾ ವಿಷಯವಾಗಿಸಿ ಕಾಂಗ್ರೆಸ್ ಅಭ್ಯರ್ಥಿ ಮತಯಾಚಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಗಳನ್ನು ಮುಂದಿರಿಸಿಕೊಂಡು ಬಿಜೆಪಿ ಅಭ್ಯರ್ಥಿಯು ಜನರ ಬಳಿಗೆ ತೆರಳುತ್ತಿದ್ದಾರೆ. ಭೋಜಶಾಲಾ-ಕಮಲ್ ಮೌಲಾ ಮಸೀದಿ ವಿವಾದವು ಈ ಬಾರಿಯ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ಜನರು ಯಾರ ಕಡೆ ವಾಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.