ADVERTISEMENT

ಮೈಸೂರು–ಕೊಡಗು, ಚಾಮರಾಜನಗರ ಕ್ಷೇತ್ರ: ಶ್ರೀನಿವಾಸ ಬೆಂಬಲದ ‘ಪ್ರಸಾದ’ ಯಾರಿಗೆ?

ಮೈಸೂರು–ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕುತೂಹಲ

ಎಂ.ಮಹೇಶ
Published 29 ಮಾರ್ಚ್ 2024, 5:53 IST
Last Updated 29 ಮಾರ್ಚ್ 2024, 5:53 IST
ವಿ. ಶ್ರೀನಿವಾಸ ಪ್ರಸಾದ್
ವಿ. ಶ್ರೀನಿವಾಸ ಪ್ರಸಾದ್   

ಮೈಸೂರು: ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ‘ಚುನಾವಣಾ ರಾಜಕಾರಣ’ದಿಂದ ದೂರ ಉಳಿದಿರುವ ಹಿರಿಯ ರಾಜಕಾರಣಿ ಮತ್ತು ಪ್ರಭಾವಿ ದಲಿತ ನಾಯಕ ವಿ.ಶ್ರೀನಿವಾ‍ಸ ಪ್ರಸಾದ್ ಅವರ ‘ಬೆಂಬಲದ ಆಶೀರ್ವಾದ’ ಪಡೆಯಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಸದರಾದ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಹೋದ ವರ್ಷವೇ ಹಲವು ಬಾರಿ ಮಾಡಿದ್ದ ಘೋಷಣೆಯಂತೆಯೇ ಅವರು, ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ವನ್ನು ಇತ್ತೀಚೆಗೆ ಆಚರಿಸಿಕೊಂಡು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ. ಇಲ್ಲಿನ ಜಯಲಕ್ಷ್ಮಿಪುರಂನ ತಮ್ಮ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಆದರೆ, ಅವರನ್ನು ಬಿಜೆಪಿಯ ಅಭ್ಯರ್ಥಿಗಳೊಂದಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಕೂಡ ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ.

ಪ್ರಸಾದ್ ಅವರು ಪ್ರತಿನಿಧಿಸುವ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗೆ ಅವರ ಅಳಿಯಂದಿರಾದ ನಂಜನಗೂಡು ಕ್ಷೇತ್ರದ ಮಾಜಿ ಶಾಸಕ ಬಿ.ಹರ್ಷವರ್ಧನ್‌ ಹಾಗೂ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬಂದಿರುವ ಡಾ.ಮೋಹನ್ ಅವರು ಆಕಾಂಕ್ಷಿಗಳಾಗಿದ್ದರು. ಆದರೆ, ಪಕ್ಷವು ಇವರಿಬ್ಬರಿಗೆ ಮಣೆ ಹಾಕಲಿಲ್ಲ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಕಾಲಕ್ಕೆ ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ಬಾಲರಾಜ್ ಅವರಿಗೆ ಟಿಕೆಟ್ ಕೊಟ್ಟಿದೆ. ಇನ್ನೊಂದೆಡೆ, ಕಾಂಗ್ರೆಸ್‌ನಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್ ಸ್ಪರ್ಧೆ ಖಚಿತವಾಗಿದೆ. ಅವರೆಲ್ಲರೂ ಶ್ರೀನಿವಾಸ ಪ್ರಸಾದ್ ಬೆಂಬಲವನ್ನು ಬಯಸುತ್ತಿದ್ದಾರೆ. ಈ ನಾಯಕ ಯಾರಿಗೆ ಬೆಂಬಲದ ‘ಪ್ರಸಾದ’ ಕೊಡುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಪ್ರಸಾದ್ ದೂರವಿರುವ ಮೊದಲ ಚುನಾವಣೆ: ಪ್ರಸಾದ್ ಅವರು ಚುನಾವಣಾ ರಾಜಕಾರಣದಿಂದ ದೂರ ಉಳಿದಿರುವ ಮೊದಲ ಚುನಾವಣೆ ಇದಾಗಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 50 ವರ್ಷಗಳಿಂದ ಏಳು–ಬೀಳು, ಸೋಲು–ಗೆಲುವು, ಅಧಿಕಾರ, ಪಕ್ಷಾಂತರ, ಸ್ಥಿತ್ಯಂತರ ಮೊದಲಾದವುಗಳನ್ನು ಕಂಡಿರುವ ಅವರ ಒಂದಲ್ಲಾ ಒಂದು ರೀತಿಯಲ್ಲಿ ಚುನಾವಣೆಯ ಭಾಗವಾಗಿಯೇ ಇರುತ್ತಿದ್ದರು. ಅವರ ‘ಪ್ರಭಾವದ ನೆರಳು’ ದಟ್ಟವಾಗಿಯೇ ಇರುತ್ತಿತ್ತು. ಆದರೆ, ಈ ಬಾರಿ ಸಂಪೂರ್ಣವಾಗಿ ದೂರ ಉಳಿಯುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ, ತಮ್ಮ ಪ್ರಭಾವವನ್ನು ಪಕ್ಷದ ಬಲವರ್ಧನೆಗಾಗಿ ವಿನಿಯೋಗಿಸಬೇಕು ಎಂದು ಬಿಜೆಪಿಯವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ–ಶ್ರೀನಿವಾಸ ಪ್ರಸಾದ್ ಎಂದರೆ ಜೋಡೆತ್ತುಗಳೆಂದು ಹೇಳುತ್ತಿದ್ದ ಕಾಲವಿತ್ತು. ಅಷ್ಟು ಸ್ನೇಹ–ಸಮನ್ವಯದಿಂದ ಅವರು ಇರುತ್ತಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರೂ ಏಟು–ಎದಿರೇಟಿನ ಮೂಲಕ ಹಾವು–ಮುಂಗುಸಿಗಳಂತೆ ಆಗಿ ಹೋಗಿದ್ದನ್ನು ಇಲ್ಲಿನ ರಾಜಕಾರಣದ ಇತಿಹಾಸದ ಪುಟಗಳು ಕಂಡಿವೆ. ತಮ್ಮ ‘ಚುನಾವಣಾ ರಾಜಕಾರಣ’ದ ಸಂಧ್ಯಾಕಾಲದಲ್ಲಿ ಟಿಕೆಟ್ ನೀಡಿ ‘ಆಸರೆ’ಯಾದ ಬಿಜೆಪಿಗೆ ಬೆಂಬಲ ಸೂಚಿಸುವರೋ ಅಥವಾ ದ್ವೇಷ ಮರೆತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್ ಅವರಿಗೆ ಆಶೀರ್ವಾದ ಮಾಡುವರೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, ಈ ಭಾಗದಲ್ಲಿ ಅವರ ಪ್ರಭಾವವೇನೂ ಕಡಿಮೆಯಾಗಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

‘ಸಂದೇಶ’ಕ್ಕೆ ಕಾದಿರುವ ಅನುಯಾಯಿಗಳು!

1974ರಿಂದ 5 ದಶಕಗಳವರೆಗೆ ರಾಜಕಾರಣ ಮಾಡಿರುವ ಶ್ರೀನಿವಾಸ ಪ್ರಸಾದ್ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಾರಿ ಗೆದ್ದ ಗೌರವ ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಒಟ್ಟು 8 ಲೋಕಸಭೆ ಮತ್ತು 6 ವಿಧಾನಸಭಾ ಚುನಾವಣೆಗಳನ್ನು ಅವರು ಎದುರಿಸಿದ್ದಾರೆ. ಆರು ಬಾರಿ ಲೋಕಸಭೆಗೆ ಹಾಗೂ 2 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಸೋಲಿನ ಅನುಭವವನ್ನೂ ಕಂಡಿದ್ದಾರೆ. ಪಕ್ಷಾಂತರವನ್ನೂ ಮಾಡಿದ್ದಾರೆ. ಆದಾಗ್ಯೂ ಈ ಭಾಗದಲ್ಲಿ ತಮ್ಮದೇ ಆದ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ನಿರ್ಣಾಯಕ ಪಾತ್ರ ವಹಿಸುವ ಸಾಮರ್ಥ್ಯವಿದೆ. ಅವರು ನೀಡುವ ‘ಸಂದೇಶ’ದಂತೆ ಕಾರ್ಯನಿರ್ವಹಿಸಲು ಅನುಯಾಯಿಗಳು–ಅಭಿಮಾನಿಗಳು ಕಾಯುತ್ತಿದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.