ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ 1977ರಿಂದ 2019ರವರೆಗೆ ಒಟ್ಟು 12 ಚುನಾವಣೆಗಳು ನಡೆದಿವೆ. ಇಷ್ಟು ಚುನಾವಣೆಗಳಲ್ಲಿ ಎರಡು ಬಾರಿ ಮಾತ್ರ ಕಾಂಗ್ರೆಸ್ ಪಕ್ಷವು ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಇನ್ನುಳಿದಂತೆ ಹಿಂದುಳಿದ ವರ್ಗಗಳಿಗೆ ಸೇರಿದ ಸಣ್ಣಪುಟ್ಟ ಸಮುದಾಯಗಳು ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಟಿಕೆಟ್ ನೀಡಿದೆ.
1977ರಲ್ಲಿ ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿತು. ಆಗ ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮುದಾಯದ ಎಂ.ವಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿತು. ಭಾರತೀಯ ಲೋಕ ದಳದ ಅಭ್ಯರ್ಥಿ ಜಿ.ನಾರಾಯಣಗೌಡ ಅವರನ್ನು ಪರಾಭವಗೊಳಿಸಿ ಕೃಷ್ಣಪ್ಪ ಗೆಲುವು ಸಾಧಿಸಿದರು.
1980ರಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯಿತು. ಇಂದಿರಾ ಗಾಂಧಿ ಜತೆಗಿನ ವೈಮನಸ್ಸಿನಿಂದಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಕಾಂಗ್ರೆಸ್ (ಯು) ಪಕ್ಷ ಕಟ್ಟಿದರು. ಆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಧುಗಿರಿಯ ಮುನ್ಸಿಫಲ್ ಮಾಜಿ ಅಧ್ಯಕ್ಷ ಎಸ್.ಎನ್.ಪ್ರಸನ್ನ ಕುಮಾರ್ ಕಾಂಗ್ರೆಸ್ (ಐ) ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು. ಅರಸು ಕಾಂಗ್ರೆಸ್‌ನಿಂದ ಎಂ.ವಿ.ಕೃಷ್ಣಪ್ಪ ಸ್ಪರ್ಧಿಸಿದ್ದರು.
1984, 1989 ಮತ್ತು 1991ರ ಲೋಕಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ವಿ. ಕೃಷ್ಣ ರಾವ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.
ಹತ್ತಿರ ಎರಡು ದಶಕಗಳ ನಂತರ ಮತ್ತೆ ಒಕ್ಕಲಿಗರಿಗೆ ‘ಕೈ’ ಪಕ್ಷವು ಟಿಕೆಟ್ ನೀಡಿತು. ಅಂದರೆ 1996ರಲ್ಲಿ ಆರ್.ಎಲ್.ಜಾಲಪ್ಪ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ವಿ.ಮುನಿಯಪ್ಪ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿತ್ತು. ಆ ಚುನಾವಣೆಯ ತರುವಾಯ ಇಲ್ಲಿಯವರೆಗೂ ಒಕ್ಕಲಿಗ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ದೊರೆತಿಲ್ಲ. ಸುಮಾರು ನಾಲ್ಕೂವರೆ ದಶಕಗಳ ಈ ಕ್ಷೇತ್ರದ ಇತಿಹಾಸದಲ್ಲಿ ಎರಡು ಬಾರಿ ಮಾತ್ರ ಕಾಂಗ್ರೆಸ್ ಒಕ್ಕಲಿಗ ಅಭ್ಯರ್ಥಿಯನ್ನು ಹುರಿಯಾಳು ಮಾಡಿದೆ.
ಹಿಂದುಳಿದ ವರ್ಗಗಳ ಪ್ರಮುಖ ನಾಯಕ ಎನಿಸಿದ್ದ ಆರ್.ಎಲ್.ಜಾಲಪ್ಪ ಅವರು 1998, 1999 ಮತ್ತು 2004ರವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಜಾಲಪ್ಪ ಅವರ ತರುವಾಯ 2009, 2014 ಮತ್ತು 2019ರಲ್ಲಿ ಎಂ.ವೀರಪ್ಪ ಮೊಯಿಲಿ ‘ಕೈ’ನಿಂದ ಕಣಕ್ಕೆ ಇಳಿದರು. ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರು.
ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ, ಪಂಗಡದ ಮತದಾರರು ಸಹ ಬಹುಸಂಖ್ಯೆಯಲ್ಲಿ ಇದ್ದಾರೆ. ಕಾಂಗ್ರೆಸ್‌ಗೆ ತೆಕ್ಕೆಗೆ ಅಹಿಂತ ಮತಗಳು ಗಣನೀಯವಾಗಿ ಸೇರಿದೆ ಪರಿಣಾಮ ಅತಿ ಹೆಚ್ಚು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಜಾತಿ ಲೆಕ್ಕಾಚಾರದ ಅಂಶಗಳು ಪ್ರಧಾನವಾಗಿ ಕೆಲಸ ಮಾಡುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಜಾತಿಯೂ ಇಲ್ಲಿ ಮತಗಳಿಕೆಗೆ ಪ್ರಮುಖ ಅಸ್ತ್ರವಾಗುತ್ತದೆ. ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಅಭ್ಯರ್ಥಿ ಘೋಷಣೆಯ ತರುವಾಯ ಜಾತಿ ರಾಜಕಾರಣದ ಮತಧ್ರುವೀಕರಣ, ವಿಘಟನೆಯ ಹೆಸರಿನಲ್ಲಿ ಅಸ್ತ್ರ, ಪ್ರತ್ಯಸ್ತ್ರಗಳು ಜೋರಾಗಿಯೇ ಮೊಳಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.