ADVERTISEMENT

ಕ್ಷೇತ್ರ ಮಹಾತ್ಮೆ | ಜೋರ್ಹಾಟ್ (ಅಸ್ಸಾಂ)

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 23:42 IST
Last Updated 6 ಏಪ್ರಿಲ್ 2024, 23:42 IST
   

ಅಸ್ಸಾಂನ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಜೋರ್ಹಾಟ್ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ತಪನ್‌ ಕುಮಾರ್ ಗೊಗೋಯಿ ಅವರನ್ನು ಬಿಜೆಪಿ ಮತ್ತೆ ಅಖಾಡಕ್ಕಿಳಿಸಿದರೆ, ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ ಪಕ್ಷವು ಪ್ರಮುಖ ನಾಯಕ ಗೌರವ್‌ ಗೊಗೋಯಿ ಅವರನ್ನು ಸ್ಪರ್ಧಿಯನ್ನಾಗಿಸಿದೆ. ಕಳೆದೆರಡು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿರುವುದರಿಂದ ಬಿಜೆಪಿಯು ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದೆ. 2019ರ ಚುನಾವಣೆಯಲ್ಲಿ ತಪನ್‌ ಕುಮಾರ್‌ ಅವರು 82,653 ಮತಗಳ ಅಂತರದಿಂದ ಎದುರಾಳಿ, ಕಾಂಗ್ರೆಸ್‌ನ ಸುಶಾಂತ್ ಬೊರ್ಗೊಹೈನ್ ಅವರನ್ನು ಮಣಿಸಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಗೆಲುವು ಕಾಂಗ್ರೆಸ್‌ ಪಾಲಾಗಿತ್ತು. ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೋಯಿ ಅವರ ಪುತ್ರರಾಗಿರುವ ಗೌರವ್‌, ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕರೂ ಹೌದು. ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಚಿರಪರಿಚಿತರಾಗಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಘಟನೆಯಿಂದಾಗಿ ಈಶಾನ್ಯ ರಾಜ್ಯಗಳ ಜನರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದು, ಈ ಬಾರಿ ತಮ್ಮ ಕೈಹಿಡಿಯಲಿದ್ದಾರೆ ಎಂಬುದು ಗೌರವ್‌ ಅವರ ವಿಶ್ವಾಸವಾಗಿದೆ. ತಪನ್‌ ಕುಮಾರ್ ಅವರು ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದು, ಈ ಬಾರಿ ಜನರು ಯಾರ ಕಡೆಗೆ ವಾಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.