ಲೋಕಸಭಾ ಚುನಾವಣೆಯಲ್ಲಿ ಭಾರಿ ಕುತೂಹಲದ ಕ್ಷೇತ್ರವಾಗಿರುವ ಇದು, ಹಲವು ಕಾರಣಕ್ಕೆ ಗಮನ ಸೆಳೆದಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪನವರ ಮಕ್ಕಳು ಇಲ್ಲಿ ಎದುರಾಳಿಗಳು. ಸಾಲದ್ದಕ್ಕೆ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಣ್ಣ. ಕಾಂಗ್ರೆಸ್ ಹುರಿಯಾಳು ಗೀತಾ ಶಿವರಾಜ್ ಕುಮಾರ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಕ್ಕ. ಕಮಲ–ಹಸ್ತದ ಮಧ್ಯೆ ಪೈಪೋಟಿಗೆ ರಂಗೇರಿಸುತ್ತಿರುವ ಇಬ್ಬರು ಜನಪ್ರಿಯ ನಾಯಕರಲ್ಲಿ ಒಬ್ಬರಾದ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಮ್ಮ ಮಗನ ಪರ ಪ್ರಚಾರದ ಮುಂದಾಳತ್ವ ವಹಿಸಿದ್ದರೆ, ಅವರಷ್ಟೇ ಜನಪ್ರಿಯ, ನಟ ಶಿವರಾಜ್ ಕುಮಾರ್ ತಮ್ಮ ಪತ್ನಿಪರ ಅಖಾಡಕ್ಕೆ ಧುಮುಕಿದ್ದಾರೆ.
ಯಡಿಯೂರಪ್ಪನವರ ಒಂದು ಕಾಲದ ಸಂಗಾತಿ, ರಾಜ್ಯದಲ್ಲಿ ಬಿಜೆಪಿ ಕಟ್ಟಿದ, ‘ಹಿಂದುತ್ವ’ದ ಉಗ್ರ ಪ್ರತಿಪಾದಕ, ಜೋರು ಬಾಯಿಯ ಕೆ.ಎಸ್. ಈಶ್ವರಪ್ಪ ಇಲ್ಲಿ ದಂಗೆ ಎದ್ದಿದ್ದಾರೆ. ‘ಅಪ್ಪ–ಮಕ್ಕಳಿಗೆ ಪಾಠ ಕಲಿಸುತ್ತೇನೆ’ ಎಂಬ ಉಮೇದಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಅಣಿಯಾಗಿದ್ದಾರೆ. ಹೀಗಿದೆ, ಮಲೆನಾಡಿನ ರಾಜಧಾನಿಯ ರಾಜಕೀಯ ಬೃಹನ್ನಾಟಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.