ತುಮಕೂರು: ‘ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ಅಭ್ಯರ್ಥಿ. ಬಿಜೆಪಿಯವರು ತಮಗೆ ಅನುಕೂಲವಾಗುವಂತಹ ಹೇಳಿಕೆ ನೀಡುತ್ತಾರೆ. ದೇವೇಗೌಡರದ್ದು ರಾಕ್ಷಸ ಫ್ಯಾಮಿಲಿ. ಯಾರಿಗೂ ಹೆದರುವ ಪ್ರಮೇಯ ಇಲ್ಲ’ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಗುರುವಾರ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಶಕ ಷಫಿ ಅಹಮ್ಮದ್, ಮಾಜಿ ಶಾಸಕ ಡಾ.ರಫೀಕ್ ಅವರ ನಿವಾಸಕ್ಕೆ ಜೆಡಿಎಸ್ ಮುಖಂಡರೊಂದಿಗೆ ಭೇಟಿ ಮಾಡಿ, ಕ್ಷೇತ್ರಕ್ಕೆ ದೇವೇಗೌಡರು ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡಲು ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾ.24ರಂದು ನಗರದ ಎಚ್.ಎಂ.ಎಸ್ ಕಾಲೇಜಿನ ಆವರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಪಡೆಯಲಿದ್ದಾರೆ. ಮಾ.25ರಂದು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.
'ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಹೆದರಿ ತುಮಕೂರು ಕ್ಷೇತ್ರಕ್ಕೆ ಸ್ಪರ್ಧಿಸಲು ಬರುತ್ತಿದ್ದಾರೆ ಎಂದು ಬಿಜೆಪಿಯವರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ದೇವೇಗೌಡರ ತಮ್ಮ ರಾಜಕೀಯ ಜೀವನದಲ್ಲಿ ಎಂದೂ, ಯಾರಿಗೂ ಹೆದರಿದವರಲ್ಲ. ಅವರದು ರಾಕ್ಷಸ ಫ್ಯಾಮಿಲಿ. ರಾಜಕೀಯ ಜೀವನದಲ್ಲಿ ಅನುಭವಿಸಿದ ಪೆಟ್ಟುಗಳಿಗೆ ಬೇರೆಯವರಾಗಿದ್ದರೆ ಮನೆ ಸೇರಿರುತ್ತಿದ್ದರು. ಆದರೆ, ದೇವೇಗೌಡರದ್ದು ಅಂತಹ ಜಾಯಮಾನವಲ್ಲ. 87 ವಯಸ್ಸಿನಲ್ಲೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ' ಎಂದು ಹೇಳಿದರು.
‘ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮಂಡ್ಯ, ಬಳ್ಳಾರಿ ಗೆದ್ದಿದ್ದೇವೆ. ಶಿವಮೊಗ್ಗದಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತಿದ್ದ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 50 ಸಾವಿರಕ್ಕೆ ತಗ್ಗಿಸಿದ್ದೇವೆ. ಮೈತ್ರಿಯಿಂದ ಹೆಚ್ಚಿನ ಸ್ಥಾನಗಳು ಲಭಿಸಲಿವೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.