ಹೂವಿನಹಡಗಲಿ: ‘ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಾವು ಕೈ ಹಾಕಿ ತಪ್ಪು ಮಾಡಿದ್ದೇವೆ. ಹಾಗಾಗಿ ಜಾತಿ ಮತ್ತು ಧರ್ಮ ವಿಭಜನೆಗೆ ಕಾಂಗ್ರೆಸ್ ಇನ್ನೆಂದೂ ಕೈ ಹಾಕುವುದಿಲ್ಲ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ವೀರಶೈವರು ಮತ್ತು ಲಿಂಗಾಯತರನ್ನು ಬೇರ್ಪಡಿಸುವ ಪ್ರಯತ್ನಕ್ಕೆ ವಿಧಾನಸಭೆ ಚುನಾವಣೆಯಲ್ಲೇ ನಮಗೆ ಕಪಾಳ ಮೋಕ್ಷ ಆಗಿದೆ. ಧರ್ಮದಲ್ಲಿ ರಾಜಕೀಯ ಇರಬೇಕು. ರಾಜಕಾರಣದಲ್ಲಿ ಧರ್ಮದ ವಿಚಾರವನ್ನು ತರಬಾರದು ಎಂಬ ಅರಿವು ಈಗ ಆಗಿದೆ. ಇನ್ನು ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತೇವೆ’ ಎಂದರು.
ಬಿಎಸ್‌ವೈಗೆ ವಿಶ್ರಾಂತಿ: ‘ದೇಶದಲ್ಲಿ ರಥಯಾತ್ರೆಯ ಮೂಲಕ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿಯಂತಹ ದಿಗ್ಗಜರನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಮೂಲೆಗೆ ತಳ್ಳಿ ವಿಶ್ರಾಂತಿ ನೀಡಿದ್ದಾರೆ. ಈ ಚುನಾವಣೆ ಬಳಿಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೂ ವಿಶ್ರಾಂತಿಯ ಸೂಚನೆ ಬರಲಿದೆ’ ಎಂದು ಹೇಳಿದರು.
‘ಚುನಾವಣೆ ಬಳಿಕ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಿ ಮುಖ್ಯಮಂತ್ರಿ ಆಗಬಹುದೆಂದು ಯಡಿಯೂರಪ್ಪ ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ. ಸರ್ಕಾರ ಬೀಳುವುದನ್ನು ನೋಡಿಕೊಂಡಿರಲು ನಾವೇನು ಕಡಲೆಕಾಯಿ ತಿನ್ನುತ್ತಿಲ್ಲ. ಸಮಯ ಬಂದಾಗ ನಾವೂ ನಮ್ಮ ಸಾಮರ್ಥ್ಯ ತೋರಿಸುತ್ತೇವೆ’ ಎಂದು ಗುಡುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.