ADVERTISEMENT

ಬಡವರದ್ದಲ್ಲ, ಕಾಂಗ್ರೆಸ್‌ನವರ ಗರೀಬಿ ಹಠಾವ್ ಆಯಿತು: ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 7:00 IST
Last Updated 25 ಏಪ್ರಿಲ್ 2019, 7:00 IST
   

*ನರೇಂದ್ರ ಮೋದಿ ಅವರೇ‌ ಏಕೆ ಮತ್ತೆ ಪ್ರಧಾನಿ ಆಗಬೇಕು?

ವಿದೇಶಾಂಗ ನೀತಿ, ಗಡಿ ರಕ್ಷಣೆ ಸೇರಿದಂತೆ ಹಲವು ಗಂಭೀರ ವಿಷಯಗಳಲ್ಲಿ ಮೋದಿ ತೆಗೆದುಕೊಂಡ ನಿಲುವುಗಳಿಂದ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಸಮೀಕ್ಷೆಗಳ ಪ್ರಕಾರ ದೇಶದ ಶೇ 83ರಷ್ಟು ಜನ ಮೋದಿ ಅವರೇ ಮತ್ತೆ ಪ್ರಧಾನಿ ಆಗಬೇಕು ಎಂದು ಇಚ್ಛಿಸಿದ್ದಾರೆ. ಹೀಗಾಗಿ, ‘ಮತ್ತೊಮ್ಮೆ ಮೋದಿ’ ಎಂಬ ಅಭಿಯಾನ ಆರಂಭಿಸಿದ್ದೇವೆ. ಅದು ಜನಾಂದೋಲನವಾಗಿ ಬದಲಾಗಿದೆ.

*ನೋಟು ರದ್ದತಿಯಿಂದ ಆಗಿದ್ದೇನು?

ADVERTISEMENT

ಕಾಶ್ಮೀರದಲ್ಲಿ ದುಡ್ಡು ಕೊಟ್ಟು ಕಲ್ಲು ತೂರಾಟ ಮಾಡಿಸಲಾಗುತ್ತಿತ್ತು. ಹಾಗೆಯೇ ಅಕ್ರಮ ಹಣದ ಮೂಲಕ ನಕ್ಸಲ್ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ನೋಟು ರದ್ದತಿ ಬಳಿಕ ನಕ್ಸಲ್ ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಕಾಶ್ಮೀರ ಬಿಟ್ಟು ಬೇರೆಲ್ಲೂ ಭಯೋತ್ಪಾದನೆ ನಡೆಯುತ್ತಿಲ್ಲ.

*ನಮ್ಮ ಖಾತೆಗೆ ₹ 15 ಲಕ್ಷ ಬರುತ್ತದೆ ಅಂತ ಜನ ಇನ್ನೂ ಕಾಯ್ತಾ ಇದ್ದಾರಲ್ಲ?

₹ 15 ಲಕ್ಷ ನೇರವಾಗಿ ಜನರ ಖಾತೆಗೆ ಬರುತ್ತದೆ ಎಂಬ ಅರ್ಥದಲ್ಲಿ ಪ್ರಧಾನಿ ಹೇಳಲಿಲ್ಲ. ಕಪ್ಪು ಹಣದ ಮೇಲೆ ಕಡಿವಾಣ, ಜಿಎಸ್‌ಟಿ ಜಾರಿ, ತೆರಿಗೆ ವಂಚಕರ ವಿರುದ್ಧ ಕ್ರಮ ಸೇರಿದಂತೆ ಜನರ ಹಣವನ್ನು ಉಳಿಸುವ ಕ್ರಮ ಕೈಗೊಂಡಿದ್ದಾರೆ. ವಿದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ವಾಪಸ್ ತಂದು, ಬೇರೆ ಬೇರೆ ಯೋಜನೆಗಳ ಮೂಲಕ ಪ್ರತಿಯೊಬ್ಬರಿಗೂ ತಲುಪಿಸಲಾಗುತ್ತಿದೆ.

*ಸಿಬಿಐ ಸಂಸ್ಥೆ ಪ್ರಧಾನಿ ವಶದಲ್ಲಿದೆ ಎಂಬ ಆರೋಪವಿದೆಯಲ್ಲ?

ಅಧಿಕಾರಿಗಳ ಒಳಜಗಳದಿಂದ ಸ್ವಾಯತ್ತ ತನಿಖಾ ಸಂಸ್ಥೆ ಹಾಳಾಗುತ್ತಿದೆ ಎಂಬ ಕಾರಣಕ್ಕಷ್ಟೇ ಪ್ರಧಾನಿ ಆ ವಿವಾದದಲ್ಲಿ ಮಧ್ಯಪ್ರವೇಶ ಮಾಡಿದರು. ಕಳ್ಳರನ್ನೆಲ್ಲ ಹಿಡಿದಾಗ ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುವುದು ಸ್ವಾಭಾವಿಕ.

*ಕ್ಷೇತ್ರದ ಜನರು ಮತ್ತೆ ಆರಿಸಬೇಕು ಎಂದು ಯಾಕೆ ಬಯಸುತ್ತಿದ್ದೀರಾ?

ನನ್ನ ರಿಪೋರ್ಟ್‌ ಕಾರ್ಡ್‌ ಅನ್ನು ಜನರ ಮುಂದೆ ಇಟ್ಟಿದ್ದೇನೆ. ಅದರ ಮೌಲ್ಯಮಾಪನವನ್ನು ಜನರು ಚುನಾವಣೆಯಲ್ಲಿ ಮಾಡಲಿದ್ದಾರೆ. ನನ್ನ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ 100ರಿಂದ 160 ಸಲ ‍ಪ್ರವಾಸ ಮಾಡಿದ್ದೇನೆ. ನಾನು ಸರ್ಕಾರದ ಅನುದಾನವನ್ನಷ್ಟೇ ನೆಚ್ಚಿಕೊಂಡಿಲ್ಲ. ಇನ್ಫೊಸಿಸ್‌, ಐಟಿಸಿ, ಎಂಬೆಸಿಯಂತಹ ಸಂಸ್ಥೆಗಳ ನೆರವು ಪಡೆದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ರಾಜಕಾರಣದಲ್ಲಿ ಹಾಗೂ ಅಧಿಕಾರದಲ್ಲಿ 25 ವರ್ಷ ಕಳೆದಿದ್ದೇನೆ. ಈ ಸಲ ಯುವಕರಿಗೆ ಅವಕಾಶ ನೀಡಬೇಕು ಎಂದಿದ್ದೆ. ಹಿರಿಯರು ಹೇಳಿದ ಕಾರಣ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ.

*ರಾಹುಲ್‌ ಗಾಂಧಿ ಅವರು ಕನಿಷ್ಠ ಆದಾಯ ಖಾತರಿ ಯೋಜನೆ ಘೋಷಣೆ ಮಾಡಿದ್ದಾರೆ. ಇದರಿಂದ ನಿಮ್ಮ ಪಕ್ಷದ ಮೇಲೆ ಪರಿಣಾಮ ಬೀರುತ್ತದೆಯೇ?

ಅದು ಅನುಷ್ಠಾನವಾಗಲು ಸಾಧ್ಯ ಇಲ್ಲದ ಯೋಜನೆ ಎಂಬುದು ಇಡೀ ದೇಶದ ಜನರಿಗೆ ಗೊತ್ತು. ಅವರ ಅಜ್ಜಿ ಮಾಡಿದ ‘ಗರೀಬಿ ಹಠಾವೋ’ ಘೋಷಣೆಯಿಂದ ಕಾಂಗ್ರೆಸ್‌ ಪಕ್ಷ 2–3 ಚುನಾವಣೆಗಳನ್ನು ಗೆದ್ದಿತು. ಆ ಘೋಷಣೆಯಿಂದ ಕಾಂಗ್ರೆಸ್‌ ನಾಯಕರ ಗರೀಬಿ ಹೋಯಿತು ಅಷ್ಟೇ.

*ಮೋದಿ ಪ್ರಧಾನಿಯಾದ ಬಳಿಕ ನಾಲ್ಕೂವರೆ ವರ್ಷ ‘ಕಾಂಗ್ರೆಸ್‌ಮುಕ್ತ ಭಾರತದ ಘೋಷಣೆ’ ದೊಡ್ಡ ಮಟ್ಟದಲ್ಲಿತ್ತು. ಈಗ ಏಕಾಏಕಿ ಘೋಷಣೆ ಕೈಬಿಟ್ಟಿದ್ದು ಏಕೆ?

ಕಾಂಗ್ರೆಸ್‌ ಮುಕ್ತ ಭಾರತ ಆಗಬೇಕು ಎಂಬುದು ಜನರ ಅಪೇಕ್ಷೆಯಾಗಿತ್ತು. ಮಹಾತ್ಮ ಗಾಂಧೀಜಿ ಅವರು ಸ್ವಚ್ಛ ಭಾರತದ ಕಲ್ಪನೆ ನೀಡಿದರು. ಅವರು ಹೇಳಿದ್ದನ್ನು ನಾವು ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಅಸ್ಪೃಶ್ಯತೆ ದೂರ ಮಾಡಬೇಕು ಎಂದರು. ಅದನ್ನು ಅನುಷ್ಠಾನಗೊಳಿಸಿದ್ದೇವೆ. ಕಾಂಗ್ರೆಸ್‌ ಇರಬಾರದು ಎಂದು ಗಾಂಧೀಜಿ ಹೇಳಿದ್ದರು. ಅದನ್ನೂ ಅನುಷ್ಠಾನ ಮಾಡಬೇಕು ಎಂದು ನೋಡಿದೆವು. ಆದರೆ, ಅದರಲ್ಲಿ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ.

*2004ರಲ್ಲಿ ಚುನಾವಣೆಗೆ ಹೋದಾಗ ‘ಇಂಡಿಯಾ ಶೈನಿಂಗ್‌’ ಎಂದು ಹೇಳಿದ್ದೀರಿ. ಅದಕ್ಕೆ ತದ್ವಿರುದ್ಧ ಫಲಿತಾಂಶ ಬಂತು. ಈಗ ಮೋದಿ ಎನ್ನುತ್ತಿದ್ದೀರಾ. ಅದೇ ಪರಿಸ್ಥಿತಿ ಮತ್ತೆ ಬರುತ್ತದೆಯೇ?

ಆಗ ಹೇಳಿದ್ದು ಮಾತ್ರ ಇತ್ತು. ಜನರನ್ನು ಮುಟ್ಟಲು ಆಗಿರಲಿಲ್ಲ. ಈಗ ಹೇಳಿದ್ದು ಹೌದು. ಜನರ ಬಳಿ ಮುಟ್ಟಿದ್ದೂ ಆಗಿದೆ. ಆಯುಷ್ಮಾನ್‌ ಭಾರತದ ಕಾರ್ಡ್‌ಗಳನ್ನು 10 ಕೋಟಿ ಜನರಿಗೆ ತಲುಪಿಸಿದ್ದೇವೆ. ಮುದ್ರಾ ಯೋಜನೆಯಡಿ 14 ಕೋಟಿ ಜನರಿಗೆ ಸಾಲ ಒದಗಿಸಿದ್ದೇವೆ. ಮೋದಿ ಸಾಧನೆಯನ್ನು ಎಲ್ಲರಿಗೂ ತಲುಪಿಸಿದ್ದೇವೆ.

*ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲವಲ್ಲ. ಕಾರಣ ಏನು?

ತೇಜಸ್ವಿನಿ ಅನಂತಕುಮಾರ್ ಹೆಸರನ್ನು ಬಿಜೆಪಿ ಪ್ರಮುಖರ ಸಭೆ ಹಾಗೂ ರಾಜ್ಯ ಘಟಕ ಶಿಫಾರಸು ಮಾಡಿದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ನಮ್ಮ ಶಿಫಾರಸಿಗೆ ಕೇಂದ್ರ ನಾಯಕತ್ವ ಮನ್ನಣೆ ನೀಡುವ ವಿಶ್ವಾಸ ಇದೆ.

*ಪ್ರಧಾನಿ ನರೇಂದ್ರ ಮೋದಿ ಅವರೇ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿ ಇದೆಯಲ್ಲ?

ಈವರೆಗೆ ಅಂತಹ ಯಾವುದೇ ಸಂದೇಶ ನಮಗೆ ಬಂದಿಲ್ಲ.

*ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಜತೆಗೆ ಸದಾನಂದ ಗೌಡರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ದೇವೇಗೌಡರು ಉತ್ತರಕ್ಕೆ ಬರುವುದನ್ನು ತಪ್ಪಿಸಿದರು ಎಂಬ ಮಾತಿದೆಯಲ್ಲ?

ಮಾಜಿ ಪ್ರಧಾನಿಯ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಅವರು ಕಣಕ್ಕೆ ಇಳಿಯದಂತೆ ಮಾಡುವಷ್ಟು ತಾಕತ್ತು ನನಗೆ ಕೊಟ್ಟರಲ್ಲ, ಅದಕ್ಕೆ ಬಹಳ ಸಂತೋಷ ಆಗುತ್ತಿದೆ. ನಾನು ಕರಾವಳಿಯಿಂದ ಬಂದವ. ನಾನು ಹಳೆ ಮೈಸೂರು ಭಾಗದವರಷ್ಟು ಪ್ರಭಾವಿ ಅಲ್ಲ. ಆದರೆ, ಅವರ ಎದುರು ಸ್ಪರ್ಧಿಸಲು ಭಯ ಇಲ್ಲ.

*ನೀವು ಕರಾವಳಿಯಿಂದ ಬೆಂಗಳೂರಿಗೆ ವಲಸೆ ಬಂದಿದ್ದು ಏಕೆ?

ನಾನು ಸುಳ್ಯ ಮೂಲದವ. ಅದು ಮೀಸಲು ಕ್ಷೇತ್ರ. ಹೀಗಾಗಿ, ಪುತ್ತೂರಿನಲ್ಲಿ ಸ್ಪರ್ಧೆ ಮಾಡುವಂತೆ ಪಕ್ಷ ಸೂಚಿಸಿತು. ಅಲ್ಲಿ ಒಂದು ಸಲ ಸೋತು ಎರಡು ಸಲ ಗೆದ್ದೆ. ಅದಾದ ಬಳಿಕ, ದಕ್ಷಿಣ ಕನ್ನಡ– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪಕ್ಷ ವಿನಂತಿಸಿತು. ಅಲ್ಲಿ ಎಂ. ವೀರಪ್ಪ ಮೊಯಿಲಿ ವಿರುದ್ಧ ಗೆದ್ದೆ. ಬಳಿಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾದೆ. ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದ ಮನೋರಮಾ ಮಧ್ವರಾಜ್‌ ಕಾಂಗ್ರೆಸ್‌ಗೆ ಸೇರಿದರು. ಅದೇ ಹೊತ್ತಿಗೆ, ಸಂಸದರಾಗಿದ್ದ ಡಿ.ಸಿ.ಶ್ರೀಕಂಠಪ್ಪ ನಿಧನರಾದರು. ಆ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಲು ಸಿದ್ಧರಿರಲಿಲ್ಲ. ಅಲ್ಲಿ ಸ್ಪರ್ಧೆ ಮಾಡುವಂತೆ ಪಕ್ಷ ನಿರ್ದೇಶನ ನೀಡಿತು. ಹಾಗಾಗಿ, ಅಲ್ಲಿಗೆ ಹೋದೆ. ರಾಜಕೀಯ ಚಟುವಟಿಕೆ ಜಾಸ್ತಿ ಇರುವ ಕ್ಷೇತ್ರದಲ್ಲಿ ಮುಂದಿನ ಸಲ ಸ್ಪರ್ಧೆ ಮಾಡಬೇಕು ಎಂದು ಆಗಲೇ ಯೋಜಿಸಿದೆ. ಬೆಂಗಳೂರು ಉತ್ತರದಲ್ಲಿ ಸೀಟು ನೀಡುವಂತೆ ಪಕ್ಷದಲ್ಲಿ ವಿನಂತಿಸಿದೆ. ಅದಕ್ಕೆ ಪಕ್ಷ ಮನ್ನಣೆ ನೀಡಿತು.

*ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ?

ಉಪಚುನಾವಣೆಯಲ್ಲಿ ಅವರಿಗೆ ಒಳ್ಳೆಯ ಮುನ್ನಡೆ ಸಿಕ್ಕಿತ್ತು. ಅವರು ಅದೇ ಮೂಡ್‌ನಲ್ಲಿ ಇದ್ದಾರೆ. ದೇವೇಗೌಡರ ವಿರುದ್ಧ ಹೇಗೆ ಮೂಡ್‌ ಬದಲಿಸಿದ್ದಾರೋ ಅದೇ ರೀತಿ ಆಗಾಗ ಮೂಡ್‌ ಬದಲಿಸಿಕೊಳ್ಳಬೇಕು.

*ಮೋದಿ ಅಲೆ ಅಷ್ಟು ಜೋರಾಗಿ ಬೀಸುತ್ತಿರುವಾಗ ಅನ್ಯ ಪಕ್ಷದ ನಾಯಕರನ್ನು ನೆಚ್ಚಿಕೊಳ್ಳುವ ಅವಶ್ಯಕತೆ ಏನಿತ್ತು?

ರಾಜಕೀಯ ತಂತ್ರಗಾರಿಕೆ ಸಂಪೂರ್ಣ ವಿಭಿನ್ನ. ಆಡಳಿತ ಎಂಬುದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋದಂತೆ. ರಾಜಕೀಯ ಎಂದರೆ ಕೆಲವು ಸಲ ಒಳದಾರಿಯಲ್ಲೂ ಹೋಗಬೇಕಾಗುತ್ತದೆ. ಪಕ್ಷದ ತತ್ವ ಸಿದ್ಧಾಂತ ಗೊತ್ತಿಲ್ಲದವ ಬಂದ ಕೂಡಲೇ ಸತ್ಯ ಹರಿಶ್ಚಂದ್ರ ಆಗುತ್ತಾನಾ ಎಂಬ ನಿಮ್ಮ ಪ್ರಶ್ನೆ ಸರಿ ಇದೆ. ಆದರೆ, ರಾಜಕಾರಣದಲ್ಲಿ ಎಲ್ಲವನ್ನೂ ಒಂದೇ ರೇಖೆಯಲ್ಲಿ ನೋಡಲು ಆಗುವುದಿಲ್ಲ. ಸ್ವಲ್ಪ ತಿರುವುಗಳಲ್ಲಿ ಹೋಗಿ ಬರಬೇಕಾಗುತ್ತದೆ.

*ಕುಟುಂಬ ರಾಜಕಾರಣದ ಬಗ್ಗೆ ನಿಮ್ಮ ನಿಲುವು ಏನು?

ನಮ್ಮ ಪಕ್ಷದಲ್ಲೂ ಸಣ್ಣಪುಟ್ಟ ಕುಟುಂಬ ರಾಜಕಾರಣ ಇದೆ. ಈಗ ತಾನೆ ಅಲ್ಲಿ ಇಲ್ಲಿ ಆರಂಭವಾಗಿರಬಹುದು. ಆದರೆ, ಮಗು ಹುಟ್ಟಿದ ಕೂಡಲೇ ಈಗ ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಎಂದು ಹೇಳುವುದು ಸರಿಯಲ್ಲ. ವಂಶಾಡಳಿತ ಸರಿಯಲ್ಲ.

*ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಇದೆಯಾ?

ನಾನು ಅತ್ಯಂತ ಸಂತೃಪ್ತ ರಾಜಕಾರಣಿ. ನಾನು ಅಧ್ಯಕ್ಷನಾಗಿದ್ದ ಕಾಲದಲ್ಲೇ ಬಿಜೆಪಿ ಅಧಿಕಾರಕ್ಕೆ ಬಂತು. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ನನ್ನ ಹೆತ್ತವರಿಗೆ ಕನಸು ಬಿದ್ದಿರಲಿಕ್ಕೆ ಇಲ್ಲ. ಕೇಂದ್ರಕ್ಕೆ ಹೋದ ಮೇಲೆ ರಾಜ್ಯಕ್ಕೆ ಬರುವ ಆಲೋಚನೆ ಇಲ್ಲ.

‘ಹೆಗಡೆ ಶಕ್ತಿಯೂ ಹೌದು ಹೊಡೆತವೂ ಹೌದು’

*‘ಸಂವಿಧಾನವನ್ನು ಬದಲಿಸಲು ನಾವು ಬಂದಿದ್ದೇವೆ’ ಎಂಬ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿಕೆ ಬಗ್ಗೆ ಏನಂತೀರಿ?

ಈ ಬಗ್ಗೆ ಅನಂತಕುಮಾರ್‌ ಹೆಗಡೆ ಅವರು ಸಂಸತ್ತಿನಲ್ಲೇ ತಪ್ಪಾಗಿದೆ ಎಂದು ಹೇಳಿಕೊಂಡಿದ್ದಾರೆ. ಅವರು ಜಾಸ್ತಿ ಮಾತನಾಡುತ್ತಾರೆ. ಹಲವಾರು ಬಾರಿ ಅವರು ಶಕ್ತಿ, ಹಲವಾರು ಸಂದರ್ಭದಲ್ಲಿ ಅವರು ಹೊಡೆತ.

*ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು?

ಅವರು ಆ ಸ್ಥಾನ ತ್ಯಜಿಸುತ್ತೇನೆ ಎಂದು ಹೇಳಿಕ ಬಳಿಕವಷ್ಟೇ ಉತ್ತರಾಧಿಕಾರಿ ಹುಡುಕುವುದು.

‘ಮಂಡ್ಯದಿಂದ ಜೆಡಿಎಸ್‌ ಕಿಕ್ ಔಟ್‌’

*ಸುಮಲತಾ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ನಂಬಿಕೆ ಇದೆಯಾ?

ಮಂಡ್ಯದಲ್ಲಿ ನಮ್ಮ ಬಲ ಕಡಿಮೆ ಇದೆ. ಈ ಸಲ ಜೆಡಿಎಸ್‌ ಪಕ್ಷ ಅಲ್ಲಿಂದ ಕಿಕ್‌ ಔಟ್‌ ಆಗಲಿದೆ. ಬಳಿಕ ಅಲ್ಲಿ ಬಿಜೆಪಿ ಬರಲಿದೆ. ಜತೆಗೆ, ಸುಮಲತಾ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವ ವಿಶ್ವಾಸ ಇದೆ.

* ಈ ಚುನಾವಣೆಯಲ್ಲಿ ನಾನು ರ‍್ಯಾಂಕ್‌ ಪಡೆಯುತ್ತೇನೆ, ಪ್ರಥಮದರ್ಜೆಯಲ್ಲಿ ಪಾಸಾಗುತ್ತೇನೆ ಎಂದು ಹೇಳುವುದಿಲ್ಲ. ಆದರೆ, ಶೇ 35 ಅಂಕ ಪಡೆದು ಪಾಸಾಗುತ್ತೇನೆ ಎಂಬ ವಿಶ್ವಾಸ ಇದೆ.

-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.