ತಮ್ಮ ದೀರ್ಘ ಕಾಲದ ರಾಜಕೀಯ ಜೀವನದಲ್ಲಿ ಅನೇಕ ವಿಶೇಷತೆಗಳನ್ನು ಹೊಂದಿರುವ ಸಂಸದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಲೋಕಸಭೆಗೆ ಒಂಬತ್ತು ಸಲ, ರಾಜ್ಯ ಸಭೆಗೆ ಎರಡು ಸಲ ಗೆದ್ದು ಬಂದ ಅವರು ಮೊದಲಿನಿಂದಲೂ ಸೈದ್ಧಾಂತಿಕ ರಾಜಕೀಯದಲ್ಲಿ ವಿಶ್ವಾಸವಿರಿಸಿದವರು.
ಆರೆಸ್ಸೆಸ್ ಹಿನ್ನೆಲೆಯ ವಾಜಪೇಯಿ, ಅದರ ಅಂಗ ಸಂಸ್ಥೆ ಜನಸಂಘದಲ್ಲಿ ಮೊದಲು ಸೇವೆ ಸಲ್ಲಿಸಿದರು. ಜನಸಂಘದ ಸ್ಥಾಪಕ ಡಾ.ಶಾಮಾ ಪ್ರಸಾದ್ ಮುಖರ್ಜಿ ಅವರ ಒಡನಾಡಿಯಾಗಿದ್ದ ಅವರು ಕಾಶ್ಮೀರ ಕುರಿತ ಹೋರಾಟದಲ್ಲಿ ಭಾಗವಹಿಸಿದ್ದರು. 1957ರಲ್ಲಿ ಲೋಕಸಭೆಗೆ ಮೊದಲ ಸಲ ಬಲರಾಂಪುರದಿಂದ ಆಯ್ಕೆಯಾದರು. ಉತ್ತರಪ್ರದೇಶ, ದೆಹಲಿ, ಮಧ್ಯಪ್ರದೇಶ,ಗುಜರಾತಿನಿಂದ ಆಯ್ಕೆಯಾದ ಏಕೈಕ ಸಂಸದೀಯ ಪಟು ಅವರು.
1996ರಿಂದ 2004ರವರೆಗೆ ವಾಜಪೇಯಿ ಅವರು ಮೂರು ಸಲ ಭಾರತದ ಪ್ರಧಾನಿಯಾಗಿದ್ದರು. ಅವರ ಪ್ರಧಾನಿ ಅವಧಿಯಲ್ಲಿ ಭಾರತ –ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸುವ ಪ್ರಯತ್ನಗಳು ನಡೆದು, ದೆಹಲಿ–ಲಾಹೋರ್ ನಡುವೆ ಬಸ್ ಸಂಚಾರ ಆರಂಭವಾಯಿತು.
2002ರಲ್ಲಿ ಗುಜರಾತಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಿಂದು–ಮುಸ್ಲಿಂ ಹಿಂಸಾಚಾರವನ್ನು ಬಹಿರಂಗವಾಗಿ ಖಂಡಿಸಿದ ಪ್ರಧಾನಿ ವಾಜಪೇಯಿ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲಿಸಲು ಸೂಚಿಸಿದ್ದರು.
ವಾಜಪೇಯಿ ಅವರನ್ನು ರಾಜ್ಯ ಸಭೆಯಲ್ಲಿ ಹಾಲಿ ಪ್ರಧಾನಿ ಮನಮೋಹನ ಸಿಂಗ್ ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಹೊಗಳಿದ್ದರು. ಮೊದಲ ಸಲ ಲೋಕಸಭೆಗೆ ಆಯ್ಕೆಯಾದ ಅವರು ಮಾಡಿದ ಭಾಷಣವನ್ನು ಮೆಚ್ಚಿದ್ದ ನೆಹರೂ, ಮುಂದೆ ವಾಜಪೇಯಿ ಭಾರತದ ಪ್ರಧಾನಿಯಾಗುವರು ಎಂದು ‘ಭವಿಷ್ಯ’ ನುಡಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.