ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಡುವೆ ಹಣಾಹಣಿ ನಡೆಯಲಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ನಡುವೆ ಸಮರ ನಡೆದಿತ್ತು.
ವಿಶೇಷವೆಂದರೆ, 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 478 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ, 422 (ಶೇ 88) ಅಭ್ಯರ್ಥಿಗಳು ಭದ್ರತಾ ಠೇವಣಿ ಕಳೆದುಕೊಂಡಿದ್ದರು. ಇಡೀ ದೇಶದಲ್ಲಿ 8,054 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ, 6,923 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.
2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನ ಹಾಗೂ ಒಬ್ಬರು ಪಕ್ಷೇತರ (ಸುಮಲತಾ) ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಬಳಿ ₹ 25 ಸಾವಿರ ಭದ್ರತಾ ಠೇವಣಿ ಇಡಬೇಕು. ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ₹ 12,500 ಠೇವಣಿ ಪಾವತಿಸಬೇಕು. ಅಭ್ಯರ್ಥಿ ತಾನು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳ 1/6ಕ್ಕಿಂತ ಹೆಚ್ಚು ಮತ ಗಳಿಸಿದರೆ ಚುನಾವಣಾಧಿಕಾರಿಗೆ ಪಾವತಿಸಿದ ಠೇವಣಿ ಮೊತ್ತವನ್ನು ಅಭ್ಯರ್ಥಿಗೆ ಹಿಂದಿರುಗಿಸಲಾಗುತ್ತದೆ. 1/6ಕ್ಕಿಂತ ಕಡಿಮೆ ಮತ ಗಳಿಸಿದರೆ ಅಂತಹ ಅಭ್ಯರ್ಥಿಯ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.