ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಿಗೆ ಈವರೆಗೆ ನಡೆದ ಚುನಾವಣೆಯಲ್ಲಿ ನಾಲ್ವರು ‘ಹ್ಯಾಟ್ರಿಕ್’ ಬಾರಿಸಿದ್ದಾರೆ. ಅದರಲ್ಲೂ ಬಿ.ಶಂಕರಾನಂದ ಚಿಕ್ಕೋಡಿಯಿಂದ ಸತತ ಏಳು ಬಾರಿ ಗೆದ್ದು, ‘ಡಬಲ್ ಹ್ಯಾಟ್ರಿಕ್’ ಸಾಧನೆ ಮಾಡಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರ 1957ರಿಂದ ಈವರೆಗೆ 18 ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಈ ಪೈಕಿ, 1963 ಮತ್ತು 2021ರಲ್ಲಿ ಉಪಚುನಾವಣೆ ನಡೆದಿವೆ. ಕಾಂಗ್ರೆಸ್‌ನ ಬಿ.ಎನ್.ದಾತರ ಈ ಕ್ಷೇತ್ರದ ಮೊದಲ ಶಾಸಕ. 1977ರವರೆಗೆ ನಡೆದ ಚುನಾವಣೆಯವರೆಗೆ ಈ ಕ್ಷೇತ್ರದಿಂದ ಕಣಕ್ಕಿಳಿದವರು ಒಂದು ಅಥವಾ ಎರಡು ಬಾರಿ ಗೆಲ್ಲುತ್ತ ಬಂದಿದ್ದರು.
1980ರ ಚುನಾವಣೆಯಲ್ಲಿ ಮೊದಲ ಸಲ ಚುನಾಯಿತರಾದ ಕಾಂಗ್ರೆಸ್‌ನ ಎಸ್.ಬಿ.ಸಿದ್ನಾಳ, 1984, 1989 ಮತ್ತು 1991ರ ಚುನಾವಣೆಗಳಲ್ಲೂ ಸತತ ನಾಲ್ಕು ಬಾರಿ ದಾಖಲೆ ನಿರ್ಮಿಸಿದರು. ಅದಾದ ಬಳಿಕ, ಜನತಾ ದಳದ ಶಿವಾನಂದ ಕೌಜಲಗಿ, ಬಿಜೆಪಿಯ ಬಾಬಾಗೌಡ ಪಾಟೀಲ ಮತ್ತು ಕಾಂಗ್ರೆಸ್‌ನ ಅಮರಸಿಂಹ ಪಾಟೀಲ ಒಮ್ಮೊಮ್ಮೆ ಗೆದ್ದರು.
2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಮೊದಲ ಬಾರಿ ಸಂಸದರಾದ ಸುರೇಶ ಅಂಗಡಿ, 2009, 2014 ಮತ್ತು 2019ರ ಚುನಾವಣೆಗಳಲ್ಲೂ ವಿಜಯ ಸಾಧಿಸಿದರು. ಸತತ ನಾಲ್ಕು ಸಲ ಗೆದ್ದು ಬೀಗಿದರು.
ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಬಿಜೆಪಿಯಿಂದ ಗೆದ್ದು, ಅಂಗಡಿ ಕುಟುಂಬದ ಗೆಲುವಿನ ಓಟ ಮುಂದುವರಿಸಿದ್ದರು.
ಏಳು ಸಲ ಗೆದ್ದ ಬಿ.ಶಂಕರಾನಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರ 1957ರಿಂದ ಈವರೆಗೆ 16 ಚುನಾವಣೆ ಕಂಡಿದೆ. ಅದರಲ್ಲಿ ಎಂಟು ಬಾರಿ ಕಾಂಗ್ರೆಸ್ ಗೆದ್ದಿದೆ. ಅದರಲ್ಲೂ ಆ ಪಕ್ಷದಿಂದ ಏಳು ಬಾರಿ ಗೆದ್ದವರು ಬಿ.ಶಂಕರಾನಂದ. 1967ರಲ್ಲಿ ಚಿಕ್ಕೋಡಿ(ಮೀಸಲು) ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ.ಶಂಕರಾನಂದ ಮೊದಲ ಬಾರಿ ಚುನಾಯಿತರಾದರು. ನಂತರದಲ್ಲಿ 1971 1977 1980 1984 1989 ಮತ್ತು 1991ರ ಚುನಾವಣೆಯಲ್ಲಿ ಗೆದ್ದ ಅವರು ಹೊಸ ದಾಖಲೆಯನ್ನೇ ಬರೆದರು. ಆದರೆ 1996ರ ಚುನಾವಣೆಯಲ್ಲಿ ಜನತಾ ದಳದ ರತ್ನಮಾಲಾ ಸವಣೂರ ವಿರುದ್ಧ ಪರಾಭವಗೊಂಡರು.
ಮೂರು ಪಕ್ಷಗಳಿಂದಲೂ ಗೆದ್ದ ಜಿಗಜಿಣಗಿ 1998ರಲ್ಲಿ ನಡೆದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಲೋಕಶಕ್ತಿಯಿಂದ ಕಣಕ್ಕಿಳಿದಿದ್ದ ರಮೇಶ ಜಿಗಜಿಣಗಿ ಮೊದಲ ಸಲ ಗೆದ್ದರು. 1999ರ ಚುನಾವಣೆಯಲ್ಲಿ ಜನತಾದಳ(ಯು)ದಿಂದ ಸ್ಪರ್ಧಿಸಿ ಎರಡನೇ ಬಾರಿ ಗೆಲುವು ಸಾಧಿಸಿದರು. 2004ರಲ್ಲಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ ಹೊಂದಿದ ನಂತರ ಬಿಜೆಪಿಯಿಂದ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದರು. ಮೂರು ಪಕ್ಷಗಳಿಂದಲೂ ಗೆದ್ದು ಬೀಗಿದ ಹಿರಿಮೆ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.