ADVERTISEMENT

ಉಡುಪಿ ಕ್ಷೇತ್ರ ಚುನಾವಣಾ ಹಿನ್ನೋಟ: ಕಮಲ, ಕೈ ಪಾರುಪತ್ಯ

ಆಸ್ಕರ್‌ ಫೆರ್ನಾಂಡಿಸ್‌ ದಾಖಲೆಯ 5 ಬಾರಿ ಗೆಲುವು

ಬಾಲಚಂದ್ರ ಎಚ್.
Published 17 ಏಪ್ರಿಲ್ 2024, 5:55 IST
Last Updated 17 ಏಪ್ರಿಲ್ 2024, 5:55 IST
ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌
ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌   

ಉಡುಪಿ: ಮದ್ರಾಸ್‌, ಬಾಂಬೆ, ಹೈದರಾಬಾದ್‌ ಪ್ರಾಂತ್ಯಗೊಳಪಟ್ಟಿದ್ದ ಹಲವು ಭಾಗಗಳನ್ನು ಒಗ್ಗೂಡಿಸಿ ರೂಪುಗೊಂಡ ಮೈಸೂರು ರಾಜ್ಯ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿಯೇ ಉಡುಪಿ ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿತ್ತು.

1957ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸ ಮಲ್ಯ (1,22,754 ಮತ) ಜಯದ ನಗೆ ಬೀರಿದ್ದರು. ಪ್ರಜಾ ಸೋಷಲಿಸ್ಟ್ ಪಕ್ಷದ ಮೋಹನ್ ರಾವ್ (93,451 ಮತ) ಅವರನ್ನು 29,303 ಮತಗಳ ಅಂತರದಿಂದ ಮಣಿಸಿದ್ದರು.

1962ರ ಚುನಾವಣೆಯಲ್ಲೂ ಕಾಂಗ್ರೆಸ್‌ನ ಯು.ಶ್ರೀನಿವಾಸ ಮಲ್ಯ (1,17,027) ಮತ್ತೊಮ್ಮೆ ಪ್ರಜಾ ಸೋಷಲಿಸ್ಟ್‌ ಪಕ್ಷದ ಡಿ.ಮೋಹನ್ ರಾವ್‌ (104161) ಅವರನ್ನು ಪರಾಭವಗೊಳಿಸಿ ಮರು ಆಯ್ಕೆಯಾದರು.

ADVERTISEMENT

ಸತತ ಎರಡು ಗೆಲುವು ಪಡೆದಿದ್ದ ಕಾಂಗ್ರೆಸ್‌ 1967ರ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲುಂಡಿತು. ಸ್ವತಂತ್ರ ಪಕ್ಷದ ಅಭ್ಯರ್ಥಿ ಜೆ.ಎಂ. ಲೋಬೊ ಪ್ರಭು (1,22,836), ಕಾಂಗ್ರೆಸ್‌ ಪಕ್ಷದ ಸಂಜೀವ ಶೆಟ್ಟಿ ಕೊಳ್ಕೆಬೈಲು (91,526) ಅವರನ್ನು ಪರಾಭವಗೊಳಿಸಿದರು.

1971ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಭರ್ಜರಿ ಗೆಲುವಿನೊಂದಿಗೆ ಕ್ಷೇತ್ರವನ್ನು ಕೈವಶ ಮಾಡಿಕೊಂಡಿತು. ಪಿ.ರಂಗನಾಥ ಶೆಣೈ (1,82,409), ಸ್ವತಂತ್ರ ಪಕ್ಷದ ಜೆ.ಎಂ.ಲೋಬೊ ಪ್ರಭು (54,644) ಅವರನ್ನು ಮಣಿಸಿದರು. ಚಲಾವಣೆಯಾದ ಮತಗಳ ಪೈಕಿ ಶೇ 65.80 ಮತಗಳನ್ನು ರಂಗನಾಥ ಶೆಣೈ ಪಡೆದಿದ್ದು ವಿಶೇಷವಾಗಿತ್ತು.

1977ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಎ.ಪೈಗಳು (2,24,788), ಭಾರತೀಯ ಲೋಕದಳ (ಬಿಎಲ್‌ಡಿ) ಪಕ್ಷದಿಂದ ಸ್ಪರ್ಧಿಸಿದ್ದ ವಿ.ಎಸ್‌.ಆಚಾರ್ಯ (1,21,326) ಅವರನ್ನು ಮಣಿಸಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದರು.

ಆಸ್ಕರ್ ಫೆರ್ನಾಂಡಿಸ್‌ ದಾಖಲೆಯ ಗೆಲುವು: 1980ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆಸ್ಕರ್ ಫರ್ನಾಂಡಿಸ್‌ (2,61,738) ಜೆಎನ್‌ಪಿ ಪಕ್ಷದ ಅಭ್ಯರ್ಥಿ ವಿ.ಎಸ್‌.ಆಚಾರ್ಯ ವಿರುದ್ಧ (1,01,769) ಮೊದಲ ಗೆಲುವು ದಾಖಲಿಸಿದರು. ಈ ಗೆಲುವಿನ ಬಳಿಕ ಆಸ್ಕರ್‌ ಫರ್ನಾಂಡಿಸ್‌ ವಿಜಯ ಯಾತ್ರೆ ಮುಂದಿನ 5 ಲೋಕಸಭಾ ಚುನಾವಣೆಗಳವರೆಗೂ ಮುಂದುವರಿಯಿತು.

1984ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಹೆಗ್ಡೆ (1,45,076) ವಿರುದ್ಧ, 1989ರ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ (1,61,656) ಎಂ.ಸಂಜೀವ ವಿರುದ್ಧ, 1991ರ ಚುನಾವಣೆಯಲ್ಲಿ ಬಿಜೆಪಿಯ ಎ.ರುಕ್ಮಯ್ಯ ಪೂಜಾರಿ (1,46,308) ವಿರುದ್ಧ, 1996ರ ಚುನಾವಣೆಯಲ್ಲಿ ಬಿಜೆಪಿಯ ಐ.ಎಂ.ಜಯರಾಮಶೆಟ್ಟಿ (2,33,478) ಅವರನ್ನು ಮಣಿಸುವ ಮೂಲಕ ಆಸ್ಕರ್ ಫರ್ನಾಂಡಿಸ್‌ ಸತತ 5 ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ದಾಖಲೆ ಬರೆದರು.

ಆಸ್ಕರ್ ಅವರ ಗೆಲುವಿನ ಅಭಿಯಾನಕ್ಕೆ 1998ರ ಚುನಾವಣೆಯಲ್ಲಿ ತಡೆ ಬಿತ್ತು. ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ (3,41,466) ಆಸ್ಕರ್ (2,84,898) ಅವರನ್ನು ಮಣಿಸಿದರು. ಈ ಸೋಲಿನ ಬಳಿಕ ಆಸ್ಕರ್ ಫರ್ನಾಂಡಿಸ್‌ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿಲ್ಲ. ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಕೇಂದ್ರ ಸಚಿವರಾಗಿದ್ದರು.

2004ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಿತು. ಮನೋರಮಾ ಮಧ್ವರಾಜ್‌ (3,68,507) ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಅವರನ್ನು (3,40,624) ಮಣಿಸಿದರು.

2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಬಳಿಕ 2009ರ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡರು (4,01,441) ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ (3,74,423) ಅವರನ್ನು ಪರಾಭವಗೊಳಿಸಿದರು.

ನಂತರದ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಪಾರಮ್ಯ ಮೆರೆಯಿತು. 2013ರ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ (5,81,168) ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆ (3,99,525) ವಿರುದ್ಧ 1,81,643 ಮತಗಳ ಅಂತರದ ಗೆಲುವು ದಾಖಲಿಸಿದರು.

2019ರ ಚುನಾವಣೆಯಲ್ಲೂ ಬಿಜೆಪಿಯ ಶೋಭಾ ಕರಂದ್ಲಾಜೆ (7,18,916), ಮೈತ್ರಿ ಅಭ್ಯರ್ಥಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ (3,69,317) ಅವರನ್ನು 3,49,599 ಭಾರಿ ಮತಗಳ ಅಂತರದಿಂದ ಸೋಲಿಸಿದರು.

ಇದೀಗ 2024ರ ಚುನಾವಣೆ ನಡೆಯುತ್ತಿದ್ದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಬಿಜೆಪಿ ಗೆಲುವಿನ ಓಟ ಮುಂದುವರಿಸಲಿದೆಯೇ ಅಥವಾ ಕಾಂಗ್ರೆಸ್‌ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲಿದೆಯೇ ಕುತೂಹಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.