ಅಜಯ್ ಕುಮಾರ್ ಮಿಶ್ರಾ (ಬಿಜೆಪಿ)
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ನೀತಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ್ದ ಘಟನೆ ಉತ್ತರ ಪ್ರದೇಶದ ಲಖೀಂಪುರ ಖೀರಿಯಲ್ಲಿ 2021ರ ಅಕ್ಟೋಬರ್‌ನಲ್ಲಿ ನಡೆದಿತ್ತು. ಖೀರಿ ಕ್ಷೇತ್ರದ ಸಂಸದ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಅವರು ಕಾರು ಹರಿಸಿದ್ದರು ಎಂದು ಆರೋಪಿಸಲಾಗಿತ್ತು. ಅಜಯ್ ಕುಮಾರ್ ವಿರುದ್ಧ ರೈತ ಸಂಘಟನೆಗಳ ಮತ್ತು ಸಾಮಾಜಿಕ ಹೋರಾಟಗಾರರ ಆಕ್ರೋಶ ಇದ್ದರೂ ಬಿಜೆಪಿಯು ಈ ಬಾರಿ ಅವರನ್ನೇ ಕಣಕ್ಕಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯ ಬಲದೊಂದಿಗೆ ಕಣಕ್ಕಿಳಿದಿರುವ ಮಿಶ್ರಾ, ‘ಹ್ಯಾಟ್ರಿಕ್’ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಉತ್ಕರ್ಷ್ ವರ್ಮಾ (ಎಸ್‌ಪಿ)
ಈ ಕ್ಷೇತ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಅವರು ಅಖಾಡಕ್ಕಿಳಿದಿದ್ದಾರೆ. ಪಕ್ಷದ ಪ್ರಮುಖ ವೋಟ್‌ಬ್ಯಾಂಕ್ ಎನಿಸಿರುವ ಯಾದವ ಸಮುದಾಯ ಮತ್ತು ಮುಸ್ಲಿಮರು ಮಾತ್ರವಲ್ಲದೆ, ರೈತ ಸಂಘಟನೆಗಳ ಬೆಂಬಲ ಅವರೊಂದಿಗಿದೆ. ಕುರ್ಮಿ ಮತ್ತು ವರ್ಮಾ ಜಾತಿಯವರೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಬೆಂಬಲ ದೊರೆಯುವ ನಿರೀಕ್ಷೆಯನ್ನು ಎಸ್‌ಪಿ ಅಭ್ಯರ್ಥಿ ಹೊಂದಿದ್ದಾರೆ. ಆದರೆ ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದಿದ್ದ ವರ್ಮಾ ಸಮುದಾಯದ ಕೆಲವು ಕುಟುಂಬಗಳ ವಿರೋಧವನ್ನು ಅವರು ಎದುರಿಸಬೇಕಿದೆ. ಕ್ಷೇತ್ರದಲ್ಲಿ ಅಜಯ್ ಕುಮಾರ್ ವಿರುದ್ಧ ಇರುವ ಅಲೆ ತಮ್ಮ ಗೆಲುವಿಗೆ ಕಾರಣವಾಗಬಹುದು ಎಂಬುದು ಅವರ ವಿಶ್ವಾಸ. ಈ ಕ್ಷೇತ್ರದಲ್ಲಿ ಮತದಾನ ನಾಲ್ಕನೇ ಹಂತದಲ್ಲಿ ಮೇ 13 ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.