ಶಿವಮೊಗ್ಗ: ‘400ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಮಾಸ್ ರೇಪಿಸ್ಟ್ ಪ್ರಜ್ವಲ್ ರೇವಣ್ಣನ ದುಷ್ಕೃತ್ಯಗಳ ಅರಿವಿದ್ದರೂ ಆತನ ಪರ ಮತ ಯಾಚಿಸಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರ ಕ್ಷಮೆ ಕೇಳಬೇಕು’ ಎಂದು ಎಐಸಿಸಿ ನಾಯಕ ರಾಹುಲ್‌ಗಾಂಧಿ ಆಗ್ರಹಿಸಿದರು.
ಇಲ್ಲಿ ಗುರುವಾರ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳಲಾಗಿದ್ದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾತಿನುದ್ದಕ್ಕೂ ಪ್ರಜ್ವಲ್ ರೇವಣ್ಣನನ್ನು ‘ಮಾಸ್ ರೇಪಿಸ್ಟ್’ ಎಂದು ಹರಿಹಾಯ್ದರು.
‘ಪ್ರಜ್ವಲ್ ರೇವಣ್ಣನಿಗೆ ಮತ ಕೊಟ್ಟರೆ ನನಗೇ ಮತ ಕೊಟ್ಟಂತೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ದೇಶದ ಎಲ್ಲ ಮಹಿಳೆಯರನ್ನೂ ಅಪಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್ ಎಂಬುದು ಮೋದಿ ಮಾತ್ರವಲ್ಲ ಅಮಿತ್ ಶಾ ಹಾಗೂ ಬಿಜೆಪಿಯ ಎಲ್ಲ ನಾಯಕರಿಗೆ ಗೊತ್ತಿತ್ತು. ಆದರೂ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡರು. ವೇದಿಕೆಯಲ್ಲಿ ನಿಂತು ಎಲ್ಲರೂ ಆತನನ್ನು ಸಮರ್ಥಿಸಿಕೊಂಡರು. ಹಾಸನದಲ್ಲಿ ನಡೆದಿರುವುದು ಬರೀ ಸೆಕ್ಸ್ ಸ್ಕ್ಯಾಂಡಲ್ ಅಲ್ಲ. ಅದೊಂದು ಸಾಮೂಹಿಕ ಅತ್ಯಾಚಾರ (ಮಾಸ್ ರೇಪ್). ಪ್ರಧಾನಿ ನರೇಂದ್ರ ಮೋದಿ ಜೊತೆ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕರು ಕೈಮುಗಿದು, ತಲೆ ಬಾಗಿ ದೇಶದ ತಾಯಂದಿರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆತ (ಪ್ರಜ್ವಲ್ ರೇವಣ್ಣ) ಅದರ ವಿಡಿಯೊ ಚಿತ್ರೀಕರಣವನ್ನೂ ಮಾಡಿಕೊಂಡಿದ್ದಾನೆ. ಇಂತಹ ಕೃತ್ಯ ಜಗತ್ತಿನಲ್ಲೇ ಮೊದಲು. ಪ್ರಧಾನಿಯೊಬ್ಬರು ಮಾಸ್ ರೇಪಿಸ್ಟ್ ಜೊತೆ ನಿಂತು ಮತಯಾಚನೆ ಮಾಡಿರುವುದು ಇದೇ ಪ್ರಥಮ. ಇದು ಇಡೀ ಪ್ರಪಂಚಕ್ಕೇ ಗೊತ್ತಾಗಿದೆ’ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ನಟ ಶಿವರಾಜಕುಮಾರ್, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬಿ.ಕೆ.ಸಂಗಮೇಶ್ವರ, ನಟ ದುನಿಯಾ ವಿಜಯ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಟಿ.ಬಿ.ಜಯಚಂದ್ರ ಉಪಸ್ಥಿತರಿದ್ದರು.
ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವೇದಿಕೆಯ ಕೆಳಗೆ ಜನರೊಂದಿಗೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.
ಪ್ರಜ್ವಲ್ ಪಕ್ಕದಲ್ಲಿ ನಿಂತು ಮತ ಯಾಚಿಸುವ ಮೂಲಕ ಪ್ರಧಾನಿ ಮೋದಿ ಸೀಟು ಗೆಲ್ಲಲು ಅಧಿಕಾರಕ್ಕೆ ಬರಲು ಏನು ಮಾಡಲೂ ಸಿದ್ಧ ಎಂಬುದನ್ನು ನಿರೂಪಿಸಿದ್ದಾರೆ. ಇದು ಬಿಜೆಪಿಯ ನಿಜವಾದ ಮುಖರಾಹುಲ್ ಗಾಂಧಿ ಎಐಸಿಸಿ ನಾಯಕ
‘ಪ್ರಜ್ವಲ್ ರೇವಣ್ಣ ಪಲಾಯನ ಮೋದಿ ಗ್ಯಾರಂಟಿ’
‘ಇಂಟೆಲಿಜೆನ್ಸ್ ಕಸ್ಟಮ್ಸ್ ಎಮಿಗ್ರೇಷನ್ ಎಲ್ಲ ನಿಮ್ಮ (ಬಿಜೆಪಿ) ಕೈಯಲ್ಲಿಯೇ ಇದ್ದರೂ ಮಾಸ್ ರೇಪಿಸ್ಟ್ ಪ್ರಜ್ವಲ್ ರೇವಣ್ಣನನ್ನು ದೇಶದಿಂದ ಜರ್ಮನಿಗೆ ಪಲಾನಯ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ‘ದುಷ್ಕೃತ್ಯ ಎಸಗುವವರನ್ನು ರಕ್ಷಿಸುವುದು ನಂತರ ಅವರು ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಡುವುದು ಪ್ರಧಾನಿ ಮೋದಿ ಗ್ಯಾರಂಟಿ’ ಎಂದು ಛೇಡಿಸಿದ ರಾಹುಲ್ ಆ ಮಾಸ್ ರೇಪಿಸ್ಟ್‌ನನ್ನು ಬಿಜೆಪಿಯು ಮುಂದೆಯೂ ರಕ್ಷಣೆ ಮಾಡಬಹುದು. ಇದು ರಾಜ್ಯದ ಮಹಿಳೆಯರಿಗೆ ಗೊತ್ತಿರಲಿ’ ಎಂದು ಎಚ್ಚರಿಸಿದರು.
‘ನಕ್ಸಲ್‌ವಾದಿಗಳು ಹೇಳಿಕೆಗೂ ಕ್ಷಮೆ ಯಾಚಿಸಲಿ’
‘ಸಮಾನತೆಯನ್ನು ಯಾರು ಬಯಸುತ್ತಾರೋ ಅವರೆಲ್ಲರೂ ನಕ್ಸಲ್‌ವಾದಿಗಳು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಆ ಮೂಲಕ ದೇಶದ ದಲಿತರು ಆದಿವಾಸಿಗಳು ಹಾಗೂ ಹಿಂದುಳಿದ ವರ್ಗದವರನ್ನು ನಡ್ಡಾ ಅಪಮಾನಿಸಿದ್ದಾರೆ. ಸಂವಿಧಾನ ರಕ್ಷಣೆ ಮಾಡುವುದಾಗಿ ಹೇಳುವ ಪ್ರಧಾನಿಯು ಮೊದಲು ಈ ಸಮುದಾಯಗಳ ಕ್ಷಮೆ ಯಾಚಿಸಲಿ’ ಎಂದು ರಾಹುಲ್‌ಗಾಂಧಿ ಒತ್ತಾಯಿಸಿದರು. ಸಮಾನತೆ ಹಾಗೂ ಮೀಸಲಾತಿ ವಿರೋಧಿಸುವ ಬಿಜೆಪಿ ಅದೇ ಕಾರಣಕ್ಕೆ ಪದೇಪದೇ ಸಂವಿಧಾನದ ಮೇಲೆ ಆಕ್ರಮಣ ಮಾಡುತ್ತಿದೆ ಎಂದೂ ಅವರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.