ADVERTISEMENT

ಮುಖಾಮುಖಿ: ಗಾಂಧಿನಗರ; ಅಮಿತ್ ಶಾ– ಸೋನಲ್‌ ಪಟೇಲ್‌ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 21:48 IST
Last Updated 27 ಮಾರ್ಚ್ 2024, 21:48 IST
ಅಮಿತ್‌ ಶಾ
ಅಮಿತ್‌ ಶಾ   

ಅಮಿತ್‌ ಶಾ(ಬಿಜೆಪಿ)

ದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಗುಜರಾತ್‌ನ ಗಾಂಧಿನಗರದಿಂದ ಈ ಬಾರಿಯೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಣಕ್ಕಿಳಿದಿದ್ದಾರೆ. 1989ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮಾಜಿ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿ ಅವರು ಈ ಹಿಂದೆ ಪ್ರತಿನಿಧಿಸಿದ್ದರು. ಕಳೆದ ಚುನಾವಣೆಯಲ್ಲಿ ಅಮಿತ್‌ ಶಾ ಅವರು 5.57 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಸಿ.ಜೆ. ಚಾವ್ಡಾ ಅವರನ್ನು ಪರಾಭವಗೊಳಿಸಿದ್ದರು. ಶಾ ಅವರು 894,000 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದರು. ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶಾ ಅವರು ಗುಜರಾತ್‌ ಮತ್ತು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಪಕ್ಷವು ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೇರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದಾರೆ.

ಸೋನಲ್‌ ಪಟೇಲ್‌(ಕಾಂಗ್ರೆಸ್‌)

ADVERTISEMENT

2019ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದಿದ್ದ ಅಮಿತ್ ಶಾ ಅವರ ವಿರುದ್ಧ ಸೋನಲ್‌ ಪಟೇಲ್‌ ಅವರನ್ನು ಕಾಂಗ್ರೆಸ್‌ ಅಖಾಡಕ್ಕಿಳಿಸಿದೆ. ಗುಜರಾತ್‌ನ ಕಾಂಗ್ರೆಸ್‌ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸೋನಲ್‌ ಅವರು ಸದ್ಯ ಮಹಾರಾಷ್ಟ್ರದಲ್ಲಿ ಪಕ್ಷದ ಸಹ ಉಸ್ತುವಾರಿಯಾಗಿದ್ದಾರೆ. ವಾಸ್ತುಶಿಲ್ಪಿಯಾಗಿರುವ ಇವರು ಈ ಹಿಂದೆ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಗಾಂಧಿನಗರ ಕ್ಷೇತ್ರದಲ್ಲಿ ತಾನು ಹರಕೆಯ ಕುರಿಯಾಗಬಹುದು ಎಂಬ ಅರಿವಿದ್ದರೂ ಸೋನಲ್‌ ಅವರು ಹೈಕಮಾಂಡ್ ತೀರ್ಮಾನದಂತೆ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಸೋನಲ್‌ ಅವರ ತಂದೆ ರಮಣ್‌ ಭಾಯಿ ಅವರು ಕಾಂಗ್ರೆಸ್‌ ಮುಖಂಡರಾಗಿದ್ದರು. ಅಹಮದಾಬಾದ್‌ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿರುವ ಮತ್ತು ಹಲವು ಮಹಿಳಾ ಹೋರಾಟಗಳಿಗೆ ನೇತೃತ್ವ ವಹಿಸಿರುವ ಅನುಭವ ಇವರಿಗೆ ಶ್ರೀರಕ್ಷೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಸೋನಲ್‌ ಪಟೇಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.