ADVERTISEMENT

ಲೋಕಸಭೆ: ಸೋತವರು–ಗೆದ್ದವರ ಕಣ

ಚಂದ್ರಹಾಸ ಹಿರೇಮಳಲಿ
Published 25 ಮಾರ್ಚ್ 2024, 21:08 IST
Last Updated 25 ಮಾರ್ಚ್ 2024, 21:08 IST
   

ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ಲೋಕಸಭೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ ಇನ್ನು ಎರಡು ದಿನವಷ್ಟೇ ಬಾಕಿ ಇದ್ದು, ಮತಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ.

ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗದೇ ಇದ್ದರೂ, ಘೋಷಣೆಯಾಗಿರುವ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ರಾಜಕೀಯ ಇತಿಹಾಸವೇ ಬಲು ಸ್ವಾರಸ್ಯಕರವಾಗಿದೆ. ಚುನಾವಣೆಯ ‘ಗುಟ್ಟೇ’ ಗೊತ್ತಿಲ್ಲದ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ತಾಲೀಮು ಆರಂಭಿಸಿದ್ದರೆ, ಹಲವು ಚುನಾವಣೆಗಳನ್ನು ಎದುರಿಸಿ ಸೋಲು–ಗೆಲುವು ಕಂಡವರು ದೆಹಲಿಯತ್ತ ದೃಷ್ಟಿನೆಟ್ಟು ತಮ್ಮ ಭವಿಷ್ಯ ಹುಡುಕಲಾರಂಭಿಸಿದ್ದಾರೆ. 

ಮತಹಾಕುವುದು ಬಿಟ್ಟರೆ ರಾಜಕೀಯ ಪಡಸಾಲೆಯೊಳಗೆ ಎಂದೂ ಇಣುಕದವರು ಲೋಕಸಭೆ ಪ್ರವೇಶಿಸುವ ಮಹದಾಶೆ ಹೊತ್ತು ಅಖಾಡಕ್ಕೆ ಧುಮುಕಿದ್ದಾರೆ. ವಿಧಾನಪರಿಷತ್ತು, ವಿಧಾನಸಭೆಯಷ್ಟನ್ನೇ ಕಂಡವರು, ಸಚಿವರಾಗಿ ಎರಡೂ ಸದನದೊಳಗೆ ಓಡಾಡಿದವರು ಲೋಕಸಭೆಯ ಪದೋನ್ನತಿಗೆ ಕನಸು ಕಟ್ಟಿದ್ದಾರೆ.

ADVERTISEMENT

ಗೆಲ್ಲುವುದೊಂದೇ ‘ಮಾನ’ದಂಡ ಎಂದು ಭಾವಿಸಿದಂತಿರುವ ರಾಜಕೀಯ ಪಕ್ಷಗಳ ನೇತಾರರು, ತಮ್ಮ ಪಕ್ಷದ ಹುರಿಯಾಳುಗಳನ್ನು ಆಯ್ಕೆ ಮಾಡುವಾಗಲೂ ಅಭ್ಯ‌ರ್ಥಿಗಳು ಹಿಂದೆ ಅನುಭವಿಸಿದ್ದ ಸೋಲು–ಗೆಲುವುಗಳನ್ನು ಪರಿಗಣಿಸಲು ಹೋಗಿಲ್ಲ. ಬಿಜೆಪಿಯು ಈಗಿರುವ ಸೀಟುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ಇರುವ ಒಂದು ಕ್ಷೇತ್ರವನ್ನು ಕನಿಷ್ಠ 10 ಅಂಕಿಗಾದರೂ ಏರಿಸಿ, ಸಾಧನೆಗೈದು ಬೀಗಬೇಕೆನ್ನುವುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಹಂಬಲ.

ವಿಧಾನಪರಿಷತ್ತು, ವಿಧಾನಸಭೆಗಳೆಂಬ ರಾಜ್ಯದ ಸದನಗಳನ್ನು ಕಂಡಿದ್ದ, ಮುಖ್ಯಮಂತ್ರಿಯೂ ಆಗಿದ್ದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ರಾಷ್ಟ್ರರಾಜಕಾರಣದತ್ತ ದಾಪುಗಾಲು ಹಾಕಲು, ಅದೃಷ್ಟದ ಮೊರೆ ಹೋಗಿದ್ದಾರೆ. ಲೋಕಸಭೆ ಸದಸ್ಯರಾಗಿ, ವಿಧಾನಸಭೆಯಿಂದ ಆಯ್ಕೆಯಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಮತ್ತೊಮ್ಮೆ ಕೇಂದ್ರ ಸಚಿವರಾಗುವ ಉಮೇದಿನಲ್ಲಿದ್ದಾರೆ. ಆದರೆ, ಅವರಿನ್ನೂ ತಮ್ಮ ಸ್ಪರ್ಧೆಯನ್ನು ನಿಕ್ಕಿಗೊಳಿಸಿಲ್ಲ.

ವಿಧಾನಸಭೆ, ಪರಿಷತ್ತು, ಸಚಿವ ಸ್ಥಾನ ಎಲ್ಲವನ್ನೂ ಅನುಭವಿಸಿರುವ ವಿ. ಸೋಮಣ್ಣ, ಕೇಂದ್ರದತ್ತ ದೃಷ್ಟಿ ನೆಟ್ಟಿದ್ದಾರೆ. ವರ್ಷದ ಹಿಂದಷ್ಟೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಗೆಲ್ಲಲು ಅನೇಕರಿಗೆ ಸಾಧ್ಯವಾಗಿರಲಿಲ್ಲ. ಇಂತಹ ಏಳೆಂಟು ಕ್ಷೇತ್ರಗಳನ್ನು ಒಳಗೊಂಡ ಲೋಕಸಭೆ ಕ್ಷೇತ್ರಕ್ಕೆ ಕಾಲಿಟ್ಟು, ಅಲ್ಲಿಂದ ದಿಲ್ಲಿಗೆ ಜಿಗಿಯಲು ಅನೇಕ ಮಾಜಿ ಶಾಸಕರು ತಮ್ಮ ಕಸರತ್ತು ಶುರು ಮಾಡಿದ್ದಾರೆ. ಇದು ಈ ಚುನಾವಣೆಯ ವೈಶಿಷ್ಟ್ಯ–ವೈವಿಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.