ADVERTISEMENT

ಅಪ್ಪ ಸಂಜಯ್‌ ಹೆಸರಲ್ಲಿ ವರುಣ್‌ ಮತ ಯಾಚನೆ

ಚುನಾವಣೆಯ ನಾಡಿನಿಂದ - ಉತ್ತರ ಪ್ರದೇಶ

​ಪ್ರಜಾವಾಣಿ ವಾರ್ತೆ
Published 6 ಮೇ 2014, 19:30 IST
Last Updated 6 ಮೇ 2014, 19:30 IST
ಅಪ್ಪ ಸಂಜಯ್‌ ಹೆಸರಲ್ಲಿ ವರುಣ್‌ ಮತ ಯಾಚನೆ
ಅಪ್ಪ ಸಂಜಯ್‌ ಹೆಸರಲ್ಲಿ ವರುಣ್‌ ಮತ ಯಾಚನೆ   

ಸುಲ್ತಾನ್‌ಪುರ (ಉತ್ತರ ಪ್ರದೇಶ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೋಮವಾರ ಅಮೇಠಿಗೆ ಬಂದಿ­ದ್ದರು. ಆದರೆ, ಪಕ್ಕದ ಸುಲ್ತಾನ್‌ಪುರದ ಕಡೆ ಮುಖ ಮಾಡಲಿಲ್ಲ. ಸುಲ್ತಾನ್‌ಪುರ ಬಿಜೆಪಿ ಅಭ್ಯರ್ಥಿ ವರುಣ್‌ ಗಾಂಧಿ ಅವರು ಅಪ್ಪಿತಪ್ಪಿಯೂ ಪ್ರಚಾರದ ಸಭೆ­ಗಳಲ್ಲಿ ಮೋದಿ ಅವರ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ. ಅವರು ತಮ್ಮ ತಂದೆ ದಿ. ಸಂಜಯ್‌ಗಾಂಧಿ ಅವರ ಹೆಸರನ್ನು ಮಾತ್ರ ಎತ್ತಿಕೊಳ್ಳುತ್ತಿದ್ದಾರೆ. ಸಂಜಯ್‌ ಅಪೂರ್ಣಗೊಳಿಸಿರುವ ಕೆಲಸಗಳನ್ನು ಪೂರ್ಣಗೊಳಿಸಲು ಗಾಂಧಿ ಕುಟುಂಬದ ‘ಅಖಾಡ’ಕ್ಕೆ ಮರಳಿರುವುದಾಗಿ ಹೇಳುತ್ತಿದ್ದಾರೆ.

ಅಮೇಠಿ ಮತ್ತು ಸುಲ್ತಾನ್‌ಪುರ ಅಕ್ಕ­ಪಕ್ಕದ ಕ್ಷೇತ್ರಗಳು. ಅಭಿವೃದ್ಧಿ ವಿಷಯ­ದಲ್ಲಿ ಎರಡೂ ಕ್ಷೇತ್ರಗಳ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲ. ಉತ್ತರ ಪ್ರದೇಶದ ಎಲ್ಲೆಡೆಯಂತೆ ಇಲ್ಲೂ ರಸ್ತೆ­ಗಳು ಹಾಳುಬಿದ್ದಿವೆ. ವಿದ್ಯುತ್‌, ನಿರು­ದ್ಯೋಗ ಸಮಸ್ಯೆ ಕಿತ್ತು ತಿನ್ನುತ್ತಿದೆ. ಒಳ­ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮಳೆ ಬಂದರೆ ನೀರು ಅಂಗಡಿ, ಮನೆಗಳಿಗೆ ನುಗ್ಗುತ್ತದೆ ಎಂದು ಜನ ಗೊಣಗುತ್ತಾರೆ. ಆದರೆ, ಸುಲ್ತಾನ್‌ಪುರ ಹಿಂದುಳಿಯಲು ವರುಣ್ ಕಾರಣರಲ್ಲ. ಏಕೆಂದರೆ ಅವರು ಮೊದಲ ಸಲ ಸುಲ್ತಾನ್‌ಪುರಕ್ಕೆ ವಲಸೆ ಬಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ವರುಣ್‌ ‘ಪಿಲಿಭೀಟ್‌’ ಕ್ಷೇತ್ರ ಪ್ರತಿನಿಧಿಸಿದ್ದರು. ತಾಯಿ ಮೇನಕಾ ಅವರಿಗೆ ಪಿಲಿಭೀಟ್‌ ಬಿಟ್ಟುಕೊಟ್ಟಿದ್ದಾರೆ. ‘ಅಮೇಠಿ ರಾಜ ಮನೆತನ’ದ ಸಂಜಯ್‌ ಸಿಂಗ್‌ ಸುಲ್ತಾನ್‌ಪುರದಿಂದ ಕಾಂಗ್ರೆಸ್‌ ಟಿಕೆಟ್‌ ಮೇಲೆ ಚುನಾಯಿತರಾಗಿದ್ದರು. ಸಂಜಯ್‌ ಅವರನ್ನು ಕಾಂಗ್ರೆಸ್‌ ಈಗ ರಾಜ್ಯಸಭೆಗೆ ಕಳುಹಿಸಿದೆ. ಅವರ ಪತ್ನಿ ಅಮಿತಾ ಸಿಂಗ್‌ ಅವರನ್ನು ವರುಣ್‌  ವಿರುದ್ಧ ಕಣಕ್ಕಿಳಿಸಿದೆ.
ಉತ್ತರ ಪ್ರದೇಶದ ಬಿಜೆಪಿ ಅಭ್ಯರ್ಥಿ­ಗಳು ‘ಮೋದಿ ಮಂತ್ರ’ ಜಪಿಸುತ್ತಿದ್ದಾರೆ. ಆದರೆ, ವರುಣ್‌ ಮಾತ್ರ ಎಲ್ಲೂ ಮೋದಿ ಹೆಸರಷ್ಟೇ ಅಲ್ಲ ವಾಜಪೇಯಿ ಮತ್ತು ಅಡ್ವಾಣಿ ಹೆಸರನ್ನೂ ಉಲ್ಲೇಖಿಸುವುದಿಲ್ಲ.

‘ಪಿಲಿಭೀಟ್‌’ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ವಿವಾದಕ್ಕೆ ಒಳಗಾಗಿದ್ದ ಅವರೀಗ ಸಂಪೂರ್ಣ ಬದಲಾಗಿದ್ದಾರೆ. ಸೋದರ ಸಂಬಂಧಿ ರಾಹುಲ್‌, ಪ್ರಿಯಾಂಕಾ ಸೇರಿ ಯಾರನ್ನೂ ಟೀಕಿಸು­ವುದಿಲ್ಲ. ಬದಲಿಗೆ ಅಪ್ಪನ ಪರಂಪರೆ ಮುಂದುವರಿಸುವ ಭರವಸೆ ನೀಡುತ್ತಿ­ದ್ದಾರೆ. ಬೇರೆ ಅಭ್ಯರ್ಥಿಗಳಂತೆ ಮತದಾ­ರರಿಗೆ ಹುಸಿ ಭರವಸೆಗಳನ್ನು ನೀಡುತ್ತಿಲ್ಲ. ‘ರಾತ್ರೋರಾತ್ರಿ ಸುಲ್ತಾನ್‌­ಪುರ­ವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಅಭಿವೃದ್ಧಿ­ಪಡಿ­ಸಲು ಪ್ರಯತ್ನಿಸುತ್ತೇನೆ’ ಎಂದು ಹೇಳುತ್ತಿದ್ದಾರೆ.

ಸುಲ್ತಾನ್‌ಪುರದ ಬಹುತೇಕರು ವರುಣ್‌ ಅವರನ್ನು ಪ್ರೀತಿಯಿಂದ ಸ್ವಾಗತಿ­ಸಿ­ದ್ದಾರೆ. ಪಕ್ಷದ ನೆಲೆಯಲ್ಲಿ ವರುಣ್‌ ಅವರನ್ನು ನೋಡದೆ, ‘ಗಾಂಧಿ ಕುಟುಂಬದ ಮತ್ತೊಬ್ಬ   ಸದಸ್ಯ ಬಂದಿ­ದ್ದಾರೆ’ ಎಂದೇ ಪರಿಗಣಿಸಿದ್ದಾರೆ.  ವರುಣ್‌ ಜನರ ಭಾವನೆಗಳಿಗೆ ಅನುಗು­ಣವಾಗಿ ಸ್ಪಂದಿಸುತ್ತಿದ್ದಾರೆ. 

‘ಕಾಂಗ್ರೆಸ್‌, ಸಂಜಯ್‌ಸಿಂಗ್‌ ಅವರನ್ನು ರಾಜ್ಯಸಭೆಗೆ ಕಳುಹಿಸಿ, ಅವರ ಪತ್ನಿಗೆ ಸುಲ್ತಾನ್‌ಪುರದಿಂದ ಟಿಕೆಟ್‌ ನೀಡಿದ್ದು ಏಕೆ?’ ಎನ್ನುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ‘ಅಮೇಠಿ ರಾಜ ಮನೆತನದ ಸಂಜಯ್‌ಸಿಂಗ್‌ ಬಿಜೆಪಿಗೆ ಜಿಗಿದು, ರಾಹುಲ್‌ ವಿರುದ್ಧ ಸ್ಪರ್ಧಿಸಲು
ತಯಾರಿ ನಡೆಸಿದ್ದರು. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ ಹೈಕಮಾಂಡ್‌ ಅವರನ್ನು ಅಸ್ಸಾಂನಿಂದ ಮೇಲ್ಮನೆಗೆ ಕಳುಹಿಸಿದೆ. ಅಮೇಠಿಯಲ್ಲಿ ಸಂಜಯ್‌ ಕಣಕ್ಕಿಳಿದಿದ್ದರೆ ರಾಹುಲ್‌ಗೆ ಕಷ್ಟವಾಗುತ್ತಿತ್ತು’ ಎನ್ನುವ ಅಭಿಪ್ರಾಯ ಸುಲ್ತಾನ್‌ಪುರದ ಜನರಿಂದ ಕೇಳಿ ಬರುತ್ತಿದೆ.

‘ಸುಲ್ತಾನ್‌ಪುರದ ಕಾಂಗ್ರೆಸ್‌ ಅಭ್ಯರ್ಥಿ ಅಮಿತಾಸಿಂಗ್‌ ಪ್ರಬಲವಾಗಿಲ್ಲ. ಸಂಜಯ್‌ಸಿಂಗ್‌ ಒಂದು ಸಲವೂ ಕ್ಷೇತ್ರದ ಕಡೆ ತಿರುಗಿ ನೋಡಿಲ್ಲ. ಜನರ ಕಷ್ಟಸುಖ ವಿಚಾರಿಸಿಲ್ಲ. ಸಮಾಜವಾದಿ ಪಕ್ಷದಿಂದ ಸ್‍ಪರ್ಧೆ ಮಾಡಿರುವ ಶಕೀಲ್‌ ಅಹಮದ್‌ ಒಳ್ಳೆಯ ಮನುಷ್ಯ. ಅವರ ಬಗ್ಗೆ ಅಭಿಮಾನವಿದೆ. ಹೀಗಾಗಿ ಇಲ್ಲಿ ಸ್ಪರ್ಧೆ ಏನಿದ್ದರೂ ಬಿಜೆಪಿ ಮತ್ತು ಎಸ್‌ಪಿ ನಡುವೆ’ ಎಂದು ಬಂಕೇಪುರದ ಸಾದಿಕ್‌ ಅಲಿಖಾನ್‌ ಹೇಳುತ್ತಾರೆ. ಕಿಷನ್‌ ದೀಕ್ಷಿತ್‌, ಹಸನ್‌ ಇಮಾಮ್‌ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ಮುಸ್ಲಿಮರು ಹಾಗೂ ಯಾದವರು ಒಟ್ಟಾಗಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಲಿದ್ದಾರೆ. ಸುಲ್ತಾನ್‌ಪುರದಲ್ಲಿ ಸುಮಾರು ಮೂರು ಲಕ್ಷ ಮುಸ್ಲಿಮರಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಯಾದವರೂ ಇದ್ದಾರೆ’ ಎಂದು ಹಸನ್‌ ಇಮಾಮ್‌ ವಿಶ್ಲೇಷಿಸುತ್ತಾರೆ. ಆದರೆ, ಶ್ಯಾಂ ಬಾಬು, ‘ಸುಲ್ತಾನ್‌ಪುರದಲ್ಲಿ ಮೋದಿ ಪರವಾದ ಒಲವಿದೆ’ ಎಂದು  ವಿವರಿಸುತ್ತಾರೆ. ‘ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವುದು ಅಖಿಲೇಶ್‌ ಯಾದವ್‌ ಸರ್ಕಾರವಲ್ಲ. ಅಜಂಖಾನ್‌ ಸರ್ಕಾರ’ ಎಂದು ಲೋಹ್ರಮಾವ್‌ ಗ್ರಾಮದ ಬಾಬು ಟೀಕಿಸುತ್ತಾರೆ.

ಲಂಬುವಾ ಗ್ರಾಮದ ಅಶೋಕ್‌ ಕುಮಾರ್‌, ತುಳಸಿರಾಂ ಸೋನಿ, ಸುಲ್ತಾನ್‌ಪುರದಲ್ಲಿ ವರುಣ್‌ ಗೆಲ್ಲುತ್ತಾರೆ. ಅವರಿಗೆ ಸಮಾಜವಾದಿ ಪಕ್ಷ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿ ಅಮಿತಾ ಸಿಂಗ್‌, ಬಿಎಸ್‌ಪಿ ಅಭ್ಯರ್ಥಿ ಪವನ್ ಪಾಂಡೆ ಹಾಗೂ ಎಎಪಿ ಅಭ್ಯರ್ಥಿ ಶೈಲೇಂದ್ರ ಪ್ರತಾಪ್‌ ಸಿಂಗ್‌ ಬಗ್ಗೆ ಯಾರೂ ಪ್ರಸ್ತಾಪಿಸುವುದಿಲ್ಲ.

ಸುಲ್ತಾನ್‌ಪುರದಲ್ಲಿ 2004ರಲ್ಲಿ ಬಿಎಸ್‌ಪಿಯ ಮೊಹಮದ್‌ ತಾಹೀರ್‌ ಚುನಾಯಿತರಾಗಿದ್ದಾರೆ. ಆಗ ಎರಡನೇ ಸ್ಥಾನದಲ್ಲಿದ್ದ ಶೈಲೇಂದ್ರ ಪ್ರತಾಪ್‌ ಸಿಂಗ್‌ ಈಗ ಎಎಪಿ ಅಭ್ಯರ್ಥಿ. ಸುಲ್ತಾನ್‌ಪುರಕ್ಕೆ ವಲಸೆ ಬಂದ ತಕ್ಷಣ ವರುಣ್‌ ಗಾಂಧಿ ಅಣ್ಣನ ಅಮೇಠಿ ಕ್ಷೇತ್ರದ ಅಭಿವೃದ್ಧಿ ಕುರಿತು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅವರ ಈ ನಡೆ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ ಎಂದು ಸುಲ್ತಾನ್‌ಪುರದ ಬಿಜೆಪಿ ಮುಖಂಡರು ವ್ಯಾಖ್ಯಾನಿಸುತ್ತಾರೆ.

ಸುಲ್ತಾನ್‌ಪುರದಲ್ಲಿ ವರುಣ್‌ಗೆ ಗೆಲ್ಲುವ ಅವಕಾಶಗಳಿದ್ದರೂ ಮೈಮರೆತು ಕೂರುವಂತಿಲ್ಲ. ಶ್ರಮ ಹಾಕಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT