ADVERTISEMENT

ಪಿಲಿಭೀತ್‌: ಮೇನಕಾ ಗೆಲುವಿನ ಹಾದಿ ಕಠಿಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST
ಮೇನಕಾ ಗಾಂಧಿ
ಮೇನಕಾ ಗಾಂಧಿ   

ಪಿಲಿಭೀತ್‌ (ಉತ್ತರ ಪ್ರದೇಶ): ಗಾಂಧಿ ಕುಟುಂಬದ ಸದಸ್ಯರಾದ ವರುಣ್‌ ಮತ್ತು ರಾಹುಲ್‌ ‘ಸತ್ಸಂಪ್ರ­ದಾಯದ ರಾಜಕಾರಣ’ಕ್ಕೆ ಮುನ್ನುಡಿ ಬರೆದಿದ್ದಾರೆ. ಪಕ್ಷ ರಾಜಕಾರಣದ ಗಡಿ ದಾಟಿ ವರುಣ್‌, ಸೋದರ ರಾಹುಲ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿ­ದ್ದಾರೆ. ರಾಹುಲ್‌ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಮೇನಕಾಗಾಂಧಿ ಮಗನಿಗೆ ರಾಜ­ಕಾರಣ ಹೇಗೆ ಮಾಡಬೇಕೆಂದು ಪಾಠ ಮಾಡಿದ್ದಾರೆ. ‘ರಾಜಕೀಯ­ದಲ್ಲಿ ಬುದ್ಧಿ ಬಳಸಬೇಕೇ ವಿನಾ ಹೃದಯ­ವನ್ನಲ್ಲ’ ಎಂದು ಸಲಹೆ ನೀಡಿದ್ದಾರೆ. ‘ಅಮೇಠಿ ಅಭಿವೃದ್ಧಿ ಕಂಡಿಲ್ಲ’ವೆಂದು ಮೇನಕಾ ಪ್ರತಿಪಾದಿಸಿದ್ದಾರೆ.

ಕಾಕತಾಳಿಯವೋ ಏನೋ ಎನ್ನು­ವಂತೆ ಉತ್ತರ ಪ್ರದೇಶದ ‘ಪಿಲಿಭೀತ್‌’ ಕ್ಷೇತ್ರದ ಅಭಿವೃದ್ಧಿ ಕುರಿತು ಇಂತಹದೇ ಅಸಮಾಧಾನದ ಮಾತುಗಳು ಕೇಳಿ­ಬರುತ್ತವೆ. ಈ ಕ್ಷೇತ್ರವನ್ನು ಮೇನಕಾ ಗಾಂಧಿ ಐದು ಸಲ ಪ್ರತಿನಿಧಿಸಿದ್ದಾರೆ. ಕಳೆದ ಸಲ ವರುಣ್‌ಗೆ ಕ್ಷೇತ್ರ ಬಿಟ್ಟು­ಕೊಟ್ಟಿದ್ದರು. ಈಗ ಮತ್ತೆ ಪಿಲಿಭೀತ್‌ಗೆ ಹಿಂತಿರುಗಿದ್ದಾರೆ.

ಅಮ್ಮ– ಮಗನಿಂದಾಗಿ ಪಿಲಿಭೀತ್‌ ಪ್ರತಿಷ್ಠಿತ ಕ್ಷೇತ್ರಗಳ ಸಾಲಿನಲ್ಲಿದೆ. ಗಾಂಧಿ ಕುಟುಂಬದವರು ಲೋಕಸಭೆಯಲ್ಲಿ ನಮ್ಮನ್ನು ಪ್ರತಿನಿಧಿಸು­ತ್ತಿದ್ದಾ­ರೆಂಬ ಹೆಗ್ಗಳಿಕೆ ಬಿಟ್ಟರೆ, ಮತದಾರರಿಗೆ ಮತ್ಯಾವ ಪ್ರಯೋಜನ ಆಗಿಲ್ಲ. ಸರಿಯಾದ ರಸ್ತೆ­ಗಳಿಲ್ಲ. ಹೆಸರಿ­ಗಾದರೂ ಒಂದು ಒಳ್ಳೆ ಶಾಲಾ– ಕಾಲೇಜಿಲ್ಲ. ಐದು ಸಕ್ಕರೆ ಕಾರ್ಖಾನೆ ಬಿಟ್ಟರೆ ಮತ್ತೊಂದು ಉದ್ಯಮವಿಲ್ಲ. ರೈಲ್ವೆ ಮೇಲ್ಸೆತುವೆ­ಗಳು ಇಲ್ಲ... ಪಿಲಿಭೀತ್‌ನಲ್ಲಿ ಏನಿದೆ ಎಂದು ಹುಡುಕಿ­ದರೆ ಸಿಗುವುದು ಜನರ ಸಿಟ್ಟು, ಹತಾಶೆ ಮಾತ್ರ.

ಪಿಲಿಭೀತ್‌ ಹಿಂದುಳಿದಿದೆ. ಎಷ್ಟರ ಮಟ್ಟಿಗೆಂದರೆ ಜನ ಇನ್ನೂ ಮೀಟರ್‌ ಗೇಜ್‌ನಲ್ಲೇ ಓಡಾಡುತ್ತಿದ್ದಾರೆ. ಬ್ರಾಡ್‌ ಗೇಜ್‌ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಈ ಬೇಡಿಕೆ ಈಡೇರಿಕೆಗೆ ಇನ್ನೆಷ್ಟು ವರ್ಷ ಬೇಕೋ? ಪಿಲಿಭೀತ್‌ಗೆ ಹೊಂದಿ­ಕೊಂಡಂತೆ ಮೀಸಲು ಅರಣ್ಯವಿದೆ. ಕೆಲವು ವರ್ಷಗಳ ಹಿಂದೆ ಅದನ್ನು ‘ಹುಲಿ ರಕ್ಷಿತ ಅರಣ್ಯ’ ಎಂದು ಘೋಷಿಸಲಾಗಿದೆ. ಪ್ರಾಣಿ ಸಂಕುಲಕ್ಕೆ ಅಡ್ಡಿ­ಯಾಗಬಹುದು ಎನ್ನುವ ಕಾರಣಕ್ಕೆ ಬ್ರಾಡ್‌ಗೇಜ್‌ ಆಗದಿರಬಹುದು. ಆಗದಿದ್ದರೂ ಪರವಾಗಿಲ್ಲ. ಪ್ರಾಣಿ ಸಂಕುಲ ಉಳಿಯಲಿ ಎಂದು ಹೇಳುವ ಜನರೂ ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರೆ.

ಕೆಲವು ಮತದಾರರು ಇದ್ಯಾವುದನ್ನು ಒಪ್ಪು­ವುದಿಲ್ಲ. ಅಭಿವೃದ್ಧಿಗೆ ಕುಂಟುನೆಪ ಕಾರಣವಾಗ­ಬಾರದು. ಸರ್ಕಾರ ಮನಸು ಮಾಡಿದರೆ ಹುಲಿ ರಕ್ಷಿತ ಪ್ರದೇಶಕ್ಕೆ ತೊಂದರೆ ಆಗದಂತೆ ಬ್ರಾಡ್‌­ಗೇಜ್‌ ಮಾರ್ಗ ನಿರ್ಮಿಸಬ­ಹುದೆಂಬ ಅಭಿಪ್ರಾಯ ವ್ಯಕ್ತಪಡಿ­ಸುತ್ತಾರೆ.

ಪಿಲಿಭೀತ್‌ ಕ್ಷೇತ್ರದಲ್ಲಿ ಮೇನಕಾ ಗಾಂಧಿ ವಿರೋಧಿ ಅಲೆ ಇದೆ. ಯಾರನ್ನೇ ಮಾತನಾಡಿ­ಸಿದರೂ ಅವರ ಮೇಲೆ ಉರಿದು ಬೀಳುತ್ತಾರೆ.
‘ನಾವು ಮೇನಕಾ ಗಾಂಧಿ ಅವರಿಂದ ಬಹಳಷ್ಟನ್ನು ನಿರೀಕ್ಷಿಸಿದ್ದೆವು. ನಮ್ಮ ನಿರೀಕ್ಷೆ­ಗಳೆಲ್ಲವೂ ಹುಸಿಯಾಗಿವೆ. ಕಳೆದ ಎರಡೂವರೆ ದಶಕದಿಂದ ಅವರು ಏನೂ ಕೆಲಸ ಮಾಡಿಲ್ಲ. ನಮ್ಮ ಪೂರ್ವಜರು ಪಾಕಿಸ್ತಾನ­ದಿಂದ ಇಲ್ಲಿಗೆ ವಲಸೆ ಬಂದವರು. ನೀವು ದೆಹಲಿ, ಬೆಂಗಳೂರಿನ ಜನ ಮೆಟ್ರೊಗಳಲ್ಲಿ ಓಡಾಡು­ತ್ತೀರಿ. ನಮಗೆ ಮೆಟ್ರೊ ಬೇಡ. ಕನಿಷ್ಠ ಬ್ರಾಡ್‌ಗೇಜೂ ಇಲ್ಲ. ಎರಡು ಶತಮಾನದಷ್ಟು ಹಿಂದಿದ್ದೇವೆ. ಇನ್ನೂ ಮೀಟರ್‌ ಗೇಜ್‌ ಯುಗ­ದಲ್ಲಿದ್ದೇವೆ’ ಎಂದು ಪಿಲಿಭೀತ್‌­ನಲ್ಲಿ ಮೆಡಿಕಲ್‌ ಸ್ಟೋರ್‌ ಇಟ್ಟು­ಕೊಂಡಿರುವ ಎಂಪಿಎಸ್‌ ತಲ್ವಾರ್ ಹತಾಶೆ ವ್ಯಕ್ತ­ಪಡಿಸುತ್ತಾರೆ.

‘ಪ್ರತಿನಿತ್ಯ ವಿದ್ಯುತ್‌ ಸಮಸ್ಯೆ ಎದುರಿಸು­ತ್ತಿದ್ದೇವೆ. ನಿರಂತರವಾದ ವಿದ್ಯುತ್‌ ಕಣ್ಣಾ­ಮುಚ್ಚಾಲೆ ಬೇಸರ ಹುಟ್ಟಿಸಿದೆ. ಈ ಸಮಸ್ಯೆಗೆ ಯಾರನ್ನು ದೂಷಿಸಬೇಕು. ಕೇಂದ್ರದ ವಿರುದ್ಧ ರಾಜ್ಯ, ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಟೀಕೆ ಮಾಡುತ್ತಿವೆ. ಅಂತಿಮವಾಗಿ ತೊಂದರೆ ಆಗಿರು­ವುದು ನಮಗೆ. 1989ರಿಂದ ಐದು ಸಲ ಮೇನಕಾ ಪಿಲಿಭೀತ್‌ ಕ್ಷೇತ್ರ ಪ್ರತಿನಿಧಿಸಿದ್ದಾರೆ. 2009ರಲ್ಲಿ ವರುಣ್‌ ಆಯ್ಕೆ ಆಗಿದ್ದಾರೆ. ಇಬ್ಬರೂ ಬಿಡಿಗಾಸಿನ ಕೆಲಸ ಮಾಡಲಿಲ್ಲ. ಜನರ ಕೈಗೆ ಸಿಗುವುದಿಲ್ಲ. ಅಕಸ್ಮಾತ್‌ ಸಿಕ್ಕರೂ ಅಹಂಕಾರ­ದಿಂದ ವರ್ತಿಸುತ್ತಾರೆ. ಮೇನಕಾ ನಮ್ಮ ಸಿಖ್‌ ಸಮುದಾಯಕ್ಕೆ ಸೇರಿದವರು. ನಮಗೇ ಅವರ ನಡವಳಿಕೆ ಬೇಜಾರಾಗಿದೆ’ ಎಂದು ತಲ್ವಾರ್‌ ಅಭಿಪ್ರಾಯ ಪಡುತ್ತಾರೆ.

‘ಪಿಲಿಭೀತ್‌ ಹೆಸರಿಗೆ ಪ್ರತಿಷ್ಠಿತ ಕ್ಷೇತ್ರ. ಒಂದೇ ಒಂದು ಮೆಡಿಕಲ್‌ ಅಥವಾ ಎಂಜಿನಿಯರಿಂಗ್‌ ಕಾಲೇಜಿಲ್ಲ. ಒಂದು ಪದವಿ, ಒಂದು ಸರ್ಕಾರಿ ಐಟಿಐ ಕಾಲೇಜಿದೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಶಿಕ್ಷಣದಲ್ಲಿ ಅತೀ ಹಿಂದುಳಿದಿದೆ ಎಂದು ತಲ್ವಾರ್‌ ಅವರ ಚಿಕ್ಕಪ್ಪ 64 ವರ್ಷದ ದೀಪೇಂದ್ರ ತಲ್ವಾರ್‌ ದನಿ­ಗೂಡಿಸುತ್ತಾರೆ.

‘ಪಿಲಿಭೀತ್‌ಗೆ 30 ವರ್ಷಗಳಲ್ಲಿ 30 ಕೆಲಸಗಳಾಗಿಲ್ಲ. ಕಾಗದದ ಕಾರ್ಖಾನೆ ಪ್ರಸ್ತಾವ ಇತ್ತು. ಉತ್ತರಾಖಂಡಕ್ಕೆ ಹೋಯಿತು. ಬಹಳ ವರ್ಷದ ಬ್ರಾಡ್‌ಗೇಜ್‌ ಬೇಡಿಕೆ ಕೈಗೂಡಿಲ್ಲ. ಮೇನಕಾ ಗಾಂಧಿ ಎರಡು ಸಲ ಕೇಂದ್ರದ ಸಚಿವರಾಗಿದ್ದವರು ಎಂದು ಸಮಾಜ­ವಾದಿ ಪಕ್ಷದ ಅಭ್ಯರ್ಥಿ ಬಿ. ಬುದ್ಸೇನ್‌ ವರ್ಮಾ ಅವರ ಪುತ್ರ ಬಿಬಿಎ ಪದವೀಧರ 25 ವರ್ಷದ ವರುಣ್‌ ವರ್ಮಾ ಟೀಕಿಸುತ್ತಾರೆ.

‘ಅಖಿಲೇಶ್‌ ಸರ್ಕಾರ ಬಹಳಷ್ಟು ಕೆಲಸ ಮಾಡಿದೆ. ಶಾಲಾ ಮಕ್ಕಳಿಗೆ ಲ್ಯಾಪ್‌ಟಾಪ್‌ ಕೊಟ್ಟಿದೆ. ಹೆಣ್ಣುಮಕ್ಕಳಿಗೆ  ಶಿಕ್ಷಣ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ­ಗೊಳಿಸಿದೆ. ಪಿಲಿಭೀತ್‌ ಅಭಿವೃದ್ಧಿಯಲ್ಲಿ 47ನೇ ಸ್ಥಾನದಲ್ಲಿತ್ತು. ರಾಜ್ಯ ಸರ್ಕಾರ ಮಾಡಿರುವ ಕೆಲಸಗಳಿಂದಾಗಿ 17 ಸ್ಥಾನಕ್ಕೆ ಬಂದಿದೆ’ ಎಂದು ವರುಣ್‌ ವಿವರಿಸುತ್ತಾರೆ.

ಪಿಲಿಭೀತ್‌ ಕ್ಷೇತ್ರದಲ್ಲಿ ‘ಮೇನಕಾ ಹಟಾವೋ ಪಿಲಿಭೀತ್‌ ಬಚಾವೋ’ ಎಂಬ ಘೋಷಣೆಗಳಿರುವ ಪೋಸ್ಟರ್‌­ಗಳು ಕಂಡುಬರುತ್ತದೆ. ಬಿಡುವಿಲ್ಲದೆ ಪ್ರಚಾರ ಮಾಡುತ್ತಿರುವ ಮೇನಕಾ ಅಭಿವೃದ್ಧಿ ಆಗಿಲ್ಲ ಎಂಬ ವಾದವನ್ನು ಒಪ್ಪುವುದಿಲ್ಲ. ‘ನಾನು ಏನು ಕೆಲಸ ಮಾಡಿದ್ದೇನೆ ಎನ್ನುವುದು ಮತದಾರರಿಗೆ ಗೊತ್ತಿದೆ’ ಎಂದು ಹೇಳುತ್ತಿದ್ದಾರೆ.

ಉಳಿದ ಕ್ಷೇತ್ರಗಳಂತೆ ಪಿಲಿಭೀತ್‌­ನಲ್ಲೂ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವಂತೆ ಕಾಣುತ್ತಿದೆ. ಇತರ ಹಿಂದುಳಿದ ವರ್ಗಕ್ಕೆ ಸೇರಿದ ವರ್ಮಾ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಈ ಸಮುದಾಯಕ್ಕೆ ಸೇರಿದವರು. ಮುಸ್ಲಿಂ ಮೂರು ಲಕ್ಷ, ಸಿಖ್‌ 1.5ಲಕ್ಷ ಮತದಾರರಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ, ಹಿಂದೂ ಮತಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದೆ.

2009ರ ಚುನಾವಣೆಯಲ್ಲಿ ವರುಣ್‌ ಗಾಂಧಿ  3.52 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಈ ಸಲದ ಚುನಾವಣೆಯಲ್ಲಿ ಮೇನಕಾ ಗಾಂಧಿ ವಿರುದ್ಧ ಎಲ್ಲೆಡೆ ಅಪಸ್ವರಗಳು ಕೇಳಿ ಬರುತ್ತಿರುವುದರಿಂದ ಅವರಿಗೆ ಗೆಲುವು ಅತ್ಯಂತ ಕಠಿಣ ಹಾದಿ.

‘ನರೇಂದ್ರ ಮೋದಿ ಅವರನ್ನು ನೋಡಿಕೊಂಡು ಮತ ಹಾಕಿದರೆ ಮೇನಕಾ ಗೆಲ್ಲಬಹುದು’ ಎಂದು ಹಿರಿಯ ವಕೀಲ ರಾಧೇಶ್‌ ಶ್ಯಾಂ ಸಕ್ಸೇನಾ ವಿಶ್ಲೇಷಣೆ ಮಾಡುತ್ತಾರೆ. ಬಿಎಸ್‌ಪಿ ಮಾಜಿ ಸಚಿವ ಹನೀಸ್‌ ಅಹಮದ್ ಖಾನ್‌, ಕಾಂಗ್ರೆಸ್‌ ನೆರೆಯ ಬಿಲಾಸ್‌ಪುರದ ಶಾಸಕ ಸಂಜಯ್‌ ಕಪೂರ್ ಅವರನ್ನು ಕಣಕ್ಕಿಳಿಸಿದೆ. ಈ ಪಕ್ಷಗಳು ಜಾತಿ, ಧರ್ಮದ ಆಧಾರದ ಮೇಲೆ ತಂತ್ರಗಳನ್ನು ರೂಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.