ADVERTISEMENT

ಬಿಜೆಪಿಗೆ ಗೆಲ್ಲುವ ವಿಶ್ವಾಸ ನೀಡದ ರಾಮ, ನಮೋ ಮಂತ್ರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2014, 19:30 IST
Last Updated 30 ಏಪ್ರಿಲ್ 2014, 19:30 IST
ಬಿಜೆಪಿಗೆ ಗೆಲ್ಲುವ ವಿಶ್ವಾಸ ನೀಡದ ರಾಮ, ನಮೋ ಮಂತ್ರ
ಬಿಜೆಪಿಗೆ ಗೆಲ್ಲುವ ವಿಶ್ವಾಸ ನೀಡದ ರಾಮ, ನಮೋ ಮಂತ್ರ   

ಅಯೋಧ್ಯೆ (ಉತ್ತರ ಪ್ರದೇಶ): ಲಖನೌದಿಂದ 140 ಕಿ.ಮೀ. ದೂರದ ಅಯೋಧ್ಯೆಯಲ್ಲಿ ಸಂಘ– ಪರಿವಾರದ ಕರಸೇವಕರು ಬಾಬ್ರಿ ಮಸೀದಿ ಕೆಡವಿ ಎರಡು ದಶಕ ಕಳೆದಿವೆ. ಆದರೆ, ಮಸೀದಿ ಕೆಡವಿದ ಉದ್ದೇಶ ಇನ್ನೂ ಈಡೇರಿಲ್ಲ. ಫೈಜಾಬಾದ್‌ ನಗರಕ್ಕೆ ಹೊಂದಿಕೊಂಡಿ­ರುವ ಅಯೋಧ್ಯೆಯಲ್ಲಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆ ಸರ್ಪಗಾವಲು ಮುಂದುವರಿದಿದೆ.

ಬಾಬ್ರಿ ಮಸೀದಿ– ರಾಮಜನ್ಮ ಭೂಮಿ ವಿವಾದಿತ ಸ್ಥಳ 68ಎಕರೆ ಪ್ರದೇಶ. ಸುಮಾರು 12ಅಡಿ ಎತ್ತರದ ತಂತಿ ಬೇಲಿಯಿಂದ ಸುತ್ತುವರಿದ ಪ್ರದೇಶ­ವನ್ನು ಹಗಲು,ರಾತ್ರಿ ಶಸ್ತ್ರಸಜ್ಜಿತ ನೂರಾರು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ತಾತ್ಕಾ­ಲಿಕ ಶಾಮಿಯಾನ ಹಾಕಿ ರಾಮ, ಸೀತೆ ಮತ್ತು ಹನುಮನ ವಿಗ್ರಹ ಇಟ್ಟಿರುವ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವ­ಕಾಶವಿದ್ದರೂ ನಾಲ್ಕಾರು ಕಡೆ ತಪಾ­ಸ­ಣೆಗೆ ಒಳಪಡಿಸಲಾಗುತ್ತದೆ. ಪೆನ್ನು, ಫೋನ್‌, ಪರ್ಸ್‌, ಸಿಮ್‌ಕಾರ್ಡ್‌, ಕ್ಯಾಮರಾ, ವಾಚ್‌, ಬೆಂಕಿ ಪೊಟ್ಟಣ, ಸಿಗರೇಟ್‌ ಮತ್ತಿತರ ಯಾವುದೇ  ವಸ್ತುಗಳನ್ನು ಕೊಂಡೊಯ್ಯಲು ಬಿಡುವು­ದಿಲ್ಲ. 68 ಎಕರೆ ವಿಶಾಲವಾದ ಪ್ರದೇಶದಲ್ಲಿ ಒಮ್ಮೆ ಒಬ್ಬರು ಮಾತ್ರ ನುಸುಳುವಷ್ಟು ಜಾಗವಿದೆ.

ಈಗ ಅಯೋಧ್ಯೆಯಲ್ಲಿ ಆತಂಕದ ವಾತಾವರಣ ಇಲ್ಲ. ಅಪಾರ ಸಂಖ್ಯೆ­ಯಲ್ಲಿ ಸಾಧು– ಸಂತರಿದ್ದರೂ, ವಿವಾ­ದಿತ ಸ್ಥಳದ ಕಡೆ ತಲೆ ಹಾಕುವುದಿಲ್ಲ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇಲ್ಲಿಂದ ಆರೇಳು ಕಿ.ಮೀ. ದೂರದ ‘ಶ್ರೀರಾಮ­ಜನ್ಮ­ಭೂಮಿ ನ್ಯಾಸ್‌ ಟ್ರಸ್ಟ್‌’ ಆವರಣ­ದಲ್ಲಿ ನಾಲ್ಕಾರು ಜನ  ಕಂಬಗಳನ್ನು ಕೆತ್ತುವ ಕೆಲಸ ಮುಂದುವರಿಸಿದ್ದಾರೆ. ರಾಮಮಂದಿರ ಕಟ್ಟಲು ನ್ಯಾಯಾಲ­ಯದ ಅನುಮತಿ ಸಿಗಬಹುದೆಂಬ ನಿರೀಕ್ಷೆ ಸಂಘ– ಪರಿವಾರದ ಮುಖಂಡರಲ್ಲಿದೆ.

ವಿಶ್ವ ಹಿಂದು ಪರಿಷತ್‌ ಕೇಂದ್ರ ಸಮಿತಿ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಪಂಕಜ್‌ ಅಯೋಧ್ಯೆಗೆ ಬಂದಿದ್ದರು. ‘ರಾಮಮಂದಿರ ಹಿಂದುಗಳ ಭಾವನೆಗೆ ಸಂಬಂಧಪಟ್ಟ ವಿಷಯ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ವಿವಾದಿತ ಸ್ಥಳದಲ್ಲಿ ರಾಮಮಂದಿರ ಇತ್ತು ಎನ್ನುವ ಸಂಗತಿಯನ್ನು ಈ ಪ್ರಮಾಣ ಪತ್ರದಲ್ಲಿ ಒಪ್ಪಿಕೊಂಡಿದೆ. ಹೀಗಾಗಿ ನಮಗೆ ನ್ಯಾಯ ಸಿಗಬಹುದೆಂಬ ನಂಬಿಕೆ ಇದೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಪಂಕಜ್‌ ಪ್ರತ್ಯೇಕವಾಗಿ ‘ಪ್ರಜಾವಾಣಿ’ ಜತೆ ಮಾತನಾಡಿದರು. ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆ­ಯಲ್ಲಿ ರಾಮಮಂದಿರ ನಿರ್ಮಾಣ ಖಂಡಿತಾವಾಗಿ ಆಗಲಿದೆ. ಅರ್ಧಕ್ಕೆ ಸ್ಥಗಿತಗೊಂಡಿರುವ ಕೆಲಸ ಮುಂದು­ವರಿ­ಯಬೇಕು ಎನ್ನುವುದು ಎಲ್ಲ ಹಿಂದುಗಳ ಬಯಕೆ. ನ್ಯಾಯಾಲಯದ ಹೊರಗಡೆ ಸಮಸ್ಯೆ ಪರಿಹಾರ ಮುಗಿದ ಅಧ್ಯಾಯ. ಕೇಂದ್ರ ಸರ್ಕಾರವೇ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು’ ಎಂದು ಒಪ್ಪಿ­ಕೊಂಡಿರುವಾಗ ಸಂಧಾನ ಯಾಕೆ ಎನ್ನುವುದು ಅವರ ಪ್ರಶ್ನೆ.

ರಾಮಮಂದಿರ ಕಟ್ಟುವ ವಿಷಯ­ದಲ್ಲಿ ಹಿಂದು ಸಂಘಟನೆಗಳಲ್ಲೇ ಒಡಕು– ಭಿನ್ನಮತವಿದೆ. ‘ವಿವಾದವನ್ನು ಸುಲಭವಾಗಿ ಬಗೆಹರಿಸಬಹುದಿತ್ತು. ಆದರೆ, ವಿಎಚ್‌ಪಿ  ಮುಖಂಡರು ಎಲ್ಲ ಅವಕಾಶವನ್ನು ಹಾಳು ಮಾಡಿದರು. ಮಾತುಕತೆ ಮೂಲಕ ಸಮಸ್ಯೆ ಬಗೆ­ಹರಿಸಿಕೊಳ್ಳಲು ಮುಸ್ಲಿಂ ಮುಖಂಡರು ಒಲವು ತೋರಿದ್ದರು. ಅಶೋಕ್‌ ಸಿಂಘಲ್‌ ಮತ್ತು ವಿನಯ ಕಟಿಯಾರ್‌ ಅವರಂಥ ಮುಖಂಡರು ಅಡ್ಡಗಾಲು ಹಾಕಿದ್ದರಿಂದ ಅದು ಸಾಧ್ಯವಾಗಲಿಲ್ಲ’ ಎಂದು ‘ಅಖಿಲ ಭಾರತ ಆಖಾರ ಪರಿಷತ್‌’ ಅಧ್ಯಕ್ಷ ಮಹಾಂತ ಗ್ಯಾನ್‌ ದಾಸ್‌ ಆರೋಪಿಸಿದರು.

ಮಹಾಂತ ಗ್ಯಾನದಾಸ್‌ ಅವರ ಮಾತನ್ನು ಬಾಬ್ರಿ ಮಸೀದಿ–ರಾಮಜನ್ಮ­ಭೂಮಿ ಪ್ರಕರಣದ ಅರ್ಜಿದಾರರಾದ ಮೊಹಮದ್‌ ಹಸೀಂ ಅನ್ಸಾರಿ ಸಮರ್ಥಿ­ಸಿದರು. ವಿವಾದವನ್ನು ಸರ್ವಸಮ್ಮತ­ವಾಗಿ ಬಗೆಹರಿಸಬಹುದಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯದಿಂದ ಸಾಧ್ಯವಾಗಲಿಲ್ಲ’ ಎಂದು ವಿಷಾದಿಸಿ­ದರು. ಜೀವನದ ಉದ್ದಕ್ಕೂ ನ್ಯಾಯಾ­ಲಯಕ್ಕೆ ಅಲೆದಾಡಿದ ಅನ್ಸಾರಿ ಅವರಿಗೆ 92 ವರ್ಷ. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ‘ನನ್ನ ಜೀವಿತದ ಅವಧಿಯಲ್ಲಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ’ ಎನ್ನುವ ಕೊರಗು ಅವರನ್ನು ಕಾಡುತ್ತಿದೆ.

ವಿವಾದಿತ ಸ್ಥಳದಲ್ಲಿ ಕರ್ತವ್ಯದ ಮೇಲಿದ್ದ ಮೀಸಲು ಪಡೆ ಸಿಬ್ಬಂದಿಯೊಬ್ಬ ‘ರಾಮಜನ್ಮಭೂಮಿ ವಿವಾದ ಕುರಿತು ಅಯೋಧ್ಯೆ, ಫೈಜಾಬಾದ್ ಜನರಲ್ಲಿ ಹೇಳಿಕೊಳ್ಳುವಂಥ ಆಸಕ್ತಿ ಉಳಿದಿಲ್ಲ. ರಾಜಕೀಯ ಪಕ್ಷಗಳು ಈ ವಿಷಯವನ್ನು ಜೀವಂತವಾಗಿ ಇಟ್ಟುಕೊಂಡಿವೆ’ ಎಂದು ಗೊಣಗಾಡಿದರು. ಹೆಸರು ಬಹಿರಂಗ ಮಾಡಬಾರದು ಎನ್ನುವ ಷರತ್ತಿನ ಮೇಲೆ ಅವರು ಮಾತನಾಡಿದರು. ಅವರ ಮಾತು ಮತದಾರರ ಅಂತ­ರಂಗಕ್ಕೆ ಇಣಕಿದಂತಿತ್ತು.
ಅಯೋಧ್ಯೆ ಹಾಗೂ ಫೈಜಾಬಾದ್‌ ಜನರು ಅಯೋಧ್ಯೆ ಕುರಿತು ಆಸಕ್ತಿ ಕಳೆದುಕೊಂಡಿದ್ದಾರೆ. ಈ ಪ್ರಕರಣ ನ್ಯಾಯಾ­ಲಯದಲ್ಲಿ ಇತ್ಯರ್ಥವಾಗಲಿ ಬಿಡಿ ಎನ್ನುವ ಮಾತು ಎಲ್ಲರಿಂದಲೂ ಬರುತ್ತದೆ. ರಾಮಮಂದಿರ ವಿವಾದ­ವನ್ನು ರಾಜಕೀಯ ಪಕ್ಷಗಳು ನಿರ್ವಹಿಸಿದ ರೀತಿಯಿಂದ ಸ್ಥಳೀಯರು ಹತಾಶರಾಗಿ­ದ್ದಾರೆ. ಪುನಃ ವಿವಾದ ಕೆದಕುವ ಸಂಯಮ–­ವ್ಯವದಾನ ಅವರಿಗೆ

ಇದ್ದಂ­ತಿಲ್ಲ. ಮಂದಿರ–ಮಸೀದಿ ವಿವಾದ­ಕ್ಕಿಂತಲೂ ಬದುಕು ಮತ್ತು ಭವಿಷ್ಯ ದೊಡ್ಡದು ಎನ್ನುವ ಸತ್ಯ ಅವರಿಗೆ ಅರಿವಾಗಿದೆ. ರಾಮ ಮಂದಿರ ನಿರ್ಮಾಣ 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತತೆ ಕಳೆದುಕೊಂಡಿದೆ. ಮತದಾ­ರರ ಒಲವು– ನಿಲುವು ಏನೆಂದು ವಿಧಾನಸಭೆ, ಲೋಕಸಭೆ ಚುನಾವಣೆ­ಯಲ್ಲೇ ವ್ಯಕ್ತವಾಗಿದೆ. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಫೈಜಾ­ಬಾದ್‌ ಕ್ಷೇತ್ರ ಗೆದ್ದುಕೊಂಡಿದೆ. 2004ರ ಲೋಕಸಭೆ ಚುನಾವಣೆಯಲ್ಲಿ ಫೈಜಾ­ಬಾದ್‌ ಬಿಎಸ್‌ಪಿ ಪಾಲಾಗಿತ್ತು. ವಿಧಾನ­ಸಭೆ ಚುನಾವಣೆಯಲ್ಲೂ ಅಯೋಧ್ಯೆ­ಯಲ್ಲಿ ಬಿಜೆಪಿ ಸೋತಿದೆ. ಅದು ಸಮಾಜವಾದಿ ಪಕ್ಷದ ವಶವಾಗಿದೆ.

ಅಯೋಧ್ಯೆ ವಿಧಾನಸಭೆ ಕ್ಷೇತ್ರದಲ್ಲಿ ಸೋತ ಲಲ್ಲೂಸಿಂಗ್ ಅವರಿಗೆ ಬಿಜೆಪಿ ಈ ಸಲವೂ ಟಿಕೆಟ್‌ ಕೊಟ್ಟಿದೆ. ಆದರೆ, ಲಲ್ಲೂ ಸಿಂಗ್‌ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಪಕ್ಷದ ಟಿಕೆಟ್‌ಗೆ ಪ್ರಯತ್ನಿಸಿದ ಅನೇಕರು ಅಸಮಾಧಾನ­ಗೊಂಡಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸೋಲಿನಿಂದ ಬಿಜೆಪಿ ಇನ್ನೂ ಚೇತರಿಸಿಕೊಂಡಿಲ್ಲ. ರಾಮನ ಮಂತ್ರದೊಂದಿಗೆ ನಮೋ ಮಂತ್ರ ಸೇರಿಕೊಂಡಿದ್ದರೂ ಪಕ್ಷಕ್ಕೆ ಗೆಲ್ಲುವ ವಿಶ್ವಾಸ ಬಂದಿಲ್ಲ. ಫೈಜಾಬಾದ್‌ನಲ್ಲಿ ಬಿಜೆಪಿ ಗೆಲುವಿಗೆ ಅವಕಾಶವಿದೆ. ಆದರೆ, ಅಭ್ಯರ್ಥಿ ಸಮಸ್ಯೆ ಎಂದು ಮಹಾಂತ ಗ್ಯಾನ್‌ ದಾಸ್‌ ಹೇಳುತ್ತಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ರಾಜೇಂದ್ರ ಕುಮಾರ್‌ ಪಂಕಜ್‌ ಅತಿಯಾದ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಮಾಜವಾದಿ ಪಕ್ಷ ಹಾಲಿ ಶಾಸಕ ಮಿತ್ರಸೇನ ಅವರಿಗೆ ಟಿಕೆಟ್‌ ನೀಡಿದೆ. ಯಾದವ ಸಮುದಾಯದ ಪ್ರಭಾವಿ ನಾಯಕರಾದ ಮಿತ್ರ ಸೇನ ಮುಸ್ಲಿಂ ಮತಗಳ ಮೇಲೂ ಕಣ್ಣಿಟ್ಟಿದ್ದಾರೆ. ‘ಯಾದವರ ಮತಗಳ ಸಂಪೂರ್ಣ ಸಮಾಜವಾದಿ ಪಕ್ಷಕ್ಕೆ ಹೋಗುವುದಿಲ್ಲ. ನಮ್ಮ ಹಳ್ಳಿಯಲ್ಲಿ ಶೇ. 80 ಯಾದವ ಮತಗಳು ನರೇಂದ್ರ ಮೋದಿಗೆ ಬೀಳಲಿವೆ. ಎಸ್‌ಪಿ ನೇತಾ ಮುಲಾಯಂ ರಾಜ್ಯದ ನಾಯಕರು. ಕೇಂದ್ರದಲ್ಲಿ ಆಡಳಿತ ನಡೆಸಲು ಮೋದಿ ಅರ್ಹರು’ ಎಂದು ಕೋಟ್‌ ಸರಾಯ್‌ ಗ್ರಾಮದ ರಾಂ ಕುಮಾರ್‌ ಯಾದವ್‌ ಹೇಳುತ್ತಾರೆ. ಹಾಗೇ, ‘ಮುಸ್ಲಿಮರ ಎಲ್ಲ ಮತಗಳು ಎಸ್‌ಪಿಗೆ ಹೋಗುವುದಿಲ್ಲ. ಕಾಂಗ್ರೆಸ್‌ಗೂ ಹಂಚಿಕೆ ಆಗಲಿದೆ’ ಎಂದು ರುದೌಲಿಯ ಸಿರಾಜುದ್ದೀನ್‌ ಅಭಿಪ್ರಾಯ ಪಡುತ್ತಾರೆ.

ಆದರೆ, ರುದ್ರೌಲಿಯ ವ್ಯಾಪಾರಿ ಮುನ್ನಾ, ರಾಂಕುಮಾರ್‌ ಮಾತನ್ನು ಒಪ್ಪುವುದಿಲ್ಲ. ‘ಮುಲಾಯಂ ಬೆಂಬಲಿ­ಗರು ಮಾತನಾಡುವುದಿಲ್ಲ. ಇಡೀ ಯಾದವ ಸಮಾಜದ ಬೆಂಬಲ ಅವರಿ­ಗಿದೆ. ಮುಸ್ಲಿಂ ಮತದಾರರು ಒಲವು ಅವರತ್ತ ಇದೆ’ ಎನ್ನುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿ ನಿರ್ಮಲ್‌ ಖತ್ರಿ   ಬಗೆಗೂ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. 2009ರ ಚುನಾವಣೆಯಲ್ಲಿ ಅವರು ಇಲ್ಲಿಂದ ಆಯ್ಕೆಯಾಗಿದ್ದರು. ಈಗ ಅವರು ಪುನರಾಯ್ಕೆ ಬಯಸಿದ್ದಾರೆ.

ಫೈಜಾಬಾದ್‌ ಮತದಾರರು ಈಗ ಜಾತಿ ರಾಜಕಾರಣದಲ್ಲಿ ಮುಳುಗಿ­ದ್ದಾರೆ.  ಬಹುತೇಕ ಹೊಸ ಮತದಾರರು ಮೋದಿ ಕಡೆ ನೋಡುತ್ತಿದ್ದಾರೆ. ಮಂದಿರ­ಕ್ಕಿಂತ ಅಭಿವೃದ್ಧಿ ಮುಖ್ಯ ಎನ್ನುವುದು ಹೊಸ ಮತದಾರರ ನಿಲುವು. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಇದುವರೆಗೆ ಅಯೋಧ್ಯೆಗೆ ಭೇಟಿ ನೀಡಿಲ್ಲ. ಮುಂದಿನ ವಾರ ಫೈಜಾಬಾದ್‌ಗೆ ಮಾತ್ರ ಹೋಗಲಿದ್ದಾರೆ. ಮೋದಿ ಅಧಿಕಾರಕ್ಕೆ ಬಂದರೆ ರಾಮಮಂದಿರ ನಿರ್ಮಾಣ ಆಗುತ್ತದೆ ಎಂದು ಅನೇಕರು ನಿರೀಕ್ಷಿಸಿ­ದ್ದಾರೆ. ಆದರೆ, ಫೈಜಾಬಾದ್‌ ಮತ­ದಾರರು ಮೋದಿ ಬೆಂಬಲಿಸುವರೇ ಎನ್ನುವುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.